ವಿಷ್ಣುವರ್ಧನ್ ಪುಣ್ಯಭೂಮಿ ಅಭಿವೃದ್ಧಿಗೆ ಕಿಚ್ಚ ಸುದೀಪ್ ಮನವಿ
ಬೆಂಗಳೂರು,ಡಿ.11-ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಸಮಾಧಿ ಸ್ಥಳವನ್ನು ಪುಣ್ಯಭೂಮಿ ಮಾಡುವಂತೆ ಮಾಡಿದ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ನಟ ಸುದೀಪ್ ತಿಳಿಸಿದರು. ಇಂದು ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ವಿಷ್ಣುವರ್ಧನ್ ಅವರ ಸಮಾಧಿ ಸ್ಥಳವನ್ನು ಸ್ಥಳಾಂತರ ಮಾಡುವುದು ಬೇಡ ಎಂದು ಅಭಿಮಾನಿಗಳು ಮಾಡಿರುವ ಮನವಿಯನ್ನು ಮುಖ್ಯಮಂತ್ರಿಗಳಿಗೆ ತಿಳಿಸಲಾಗಿದೆ. ಈ ಜಾಗವನ್ನು ಪುಣ್ಯಭೂಮಿಯಾಗಿ ಅಭಿವೃದ್ದಿಪಡಿಸುವಂತೆ ಕೋರಲಾಗಿದೆ.
ಅವರ ಸಮಾಧಿ ಸ್ಥಳದಲ್ಲಿ 100 ಎಕರೆ ಜಾಗವನ್ನು ನಾವೇ ಖರೀದಿ ಮಾಡಿರುವುದಾಗಿ ತಿಳಿಸಿದ್ದೇವೆ. ಪುಣ್ಯಭೂಮಿ ಅಭಿವೃದ್ದಿಗೆ ಮುಖ್ಯಮಂತ್ರಿಗಳು ಸಹ ಭರವಸೆ ನೀಡಿದ್ದಾರೆ ಎಂದರು. ಕಳೆದ ಎಂಟು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಅವರ ಸ್ಮಾರಕ ನಿರ್ಮಾಣವನ್ನು ಅವರ ಅಂತ್ಯಸಂಸ್ಕಾರವಾದ ಜಾಗದಲ್ಲೇ ನಿರ್ಮಾಣ ಮಾಡಬೇಕು ಎಂಬುದು ಕನ್ನಡಿಗರ ಮತ್ತು ಅಸಂಖ್ಯಾತ ಅಭಿಮಾನಿಗಳ ಕೋರಿಕೆಯಾಗಿದೆ. ಹೀಗಾಗಿ ಇಲ್ಲಿ ಪುಣ್ಯ ಭೂಮಿಯನ್ನು ನಿರ್ಮಾಣ ಮಾಡಿ ಡಾ.ಭಾರತಿ ವಿಷ್ಣುವರ್ಧನ್ ಅವರ ಇಚ್ಚೆಯಂತೆ ಮೈಸೂರಿನಲ್ಲಿ ಸ್ಮಾರಕ ಮಾಡುವುದಾದರೆ ಅಭ್ಯಂತರವಿಲ್ಲ ಎಂದು ವಿವರಿಸಲಾಗಿದೆ.
ಡಿ.30ರಂದು ಅವರ 8ನೇ ಪುಣ್ಯಸ್ಮರಣೆ ಇರುವ ಹಿನ್ನೆಲೆಯಲ್ಲಿ ಆದಷ್ಟು ಬೇಗ ಈ ವಿಷಯದ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದರು. ಅಭಿಮಾನ್ ಸ್ಟುಡಿಯೋ ಮೇಲೆ ಸರ್ಕಾರ ಹಾಕಿರುವ ಮೊಕದ್ದಮೆ ಹಿಂಪಡೆಯುವುದು, ಬಾಲಕೃಷ್ಣ ಅವರ ಕುಟುಂಬದ ಜೊತೆ ಖುದ್ದಾಗಿ ಸಭೆ ನಡೆಸಿ ವಿಷಯ ಇತ್ಯರ್ಥಪಡಿಸುವಂತೆಯೂ ಕೋರಲಾಗಿದೆ ಎಂದು ವಿವರಿಸಿದರು. ರಾಜಕೀಯ ಬಗ್ಗೆ ಮಾತನಾಡಿದಿರ ಎಂಬ ಪತ್ರಕರ್ತರ ಪ್ರಶ್ನೆಗೆ ಕೈ ಮುಗಿದು ಅಲ್ಲಿಂದ ಸುದೀಪ್ ತೆರಳಿದರು.