ವಿ.ಶ್ರೀನಿವಾಸ ಪ್ರಸಾದ್ ಬಿಜೆಪಿ ಸೇರಲು ಕೊನೆಗೂ ಮಹೂರ್ತ ಫಿಕ್ಸ್

Spread the love

v--srinivas--prasad--mla

ಬೆಂಗಳೂರು, ಡಿ.24- ಎಲ್ಲ ವದಂತಿಗಳಿಗೂ ತೆರೆ ಎಳೆದಿರುವ ಮಾಜಿ ಸಚಿವ ಹಾಗೂ ದಲಿತ ಸಮುದಾಯದ ಪ್ರಭಾವಿ ನಾಯಕ ವಿ.ಶ್ರೀನಿವಾಸ ಪ್ರಸಾದ್ ನಿರೀಕ್ಷೆಯಂತೆ ಬಿಜೆಪಿ ಸೇರಲು ತೀರ್ಮಾನಿಸಿದ್ದಾರೆ.  ಜನವರಿ 2ರಂದು ನಗರದ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ವಿದ್ಯುಕ್ತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಇಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಜತೆ ಮಾತುಕತೆ ನಡೆಸಿದ ಬಳಿಕ ಪಕ್ಷ ಸೇರ್ಪಡೆಯಾಗುವ ತೀರ್ಮಾನವನ್ನು ಪ್ರಕಟಿಸಿದರು. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗದ ರೀತಿಯಲ್ಲಿ ನಡೆದುಕೊಳ್ಳುವುದಾಗಿ ಬಿಜೆಪಿ ಮುಖಂಡರು ನನಗೆ ವಾಗ್ದಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದಾಗಿ ಶ್ರೀನಿವಾಸ್ ಪ್ರಸಾದ್ ಇಂದು ಅಧಿಕೃತವಾಗಿ ಘೋಷಣೆ ಮಾಡಿದರು.

ಪ್ರಸಾದ್ ಬಿಜೆಪಿಗೆ ಸೇರ್ಪಡೆಯಾಗುತ್ತಿರುವುದರಿಂದ ಯಾವುದೇ ವೇಳೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಘೋಷಣೆಯಾಗುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶ್ರೀನಿವಾಸ ಪ್ರಸಾದ್ ನಡುವಿನ ಹಣಾಹಣಿಗೆ ನಂಜನಗೂಡು ಕ್ಷೇತ್ರ ಸಜ್ಜಾಗಲಿದೆ.   ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ನಾಯಕರ ಜತೆ ನಾನು ಮಾತುಕತೆ ನಡೆಸಿದ್ದೇನೆ. ನನ್ನ ಹಿರಿಯತನಕ್ಕಾಗಲಿ ಇಲ್ಲವೆ ಸ್ವಾಭಿಮಾನಕ್ಕೆ ಒಂದಿಷ್ಟು ಧಕ್ಕೆಯಾಗದಂತೆ ನಡೆದುಕೊಳ್ಳುವುದಾಗಿ ಎಲ್ಲರೂ ನನಗೆ ಆಶ್ವಾಸನೆ ಕೊಟ್ಟಿದ್ದಾರೆ.

ಈ ಹಿಂದೆ ಮಾಜಿ ಪ್ರಧಾನಿ ಅಟಲ್‍ಬಿಹಾರಿ ವಾಜಪೇಯಿ ಸಂಪುಟದಲ್ಲಿ ಐದು ವರ್ಷಗಳ ಕಾಲ ಸಚಿವನಾಗಿ ಕೆಲಸ ಮಾಡಿದ್ದೇನೆ. ಪಕ್ಷದ ಹಿರಿಯರಾದ ಲಾಲ್‍ಕೃಷ್ಣ ಅಡ್ವಾಣಿ, ರಾಜನಾಥ್‍ಸಿಂಗ್, ಅರುಣ್ ಜೈಟ್ಲಿ ಸೇರಿದಂತೆ ಈಗಿನ ಪ್ರಧಾನಿ ನರೇಂದ್ರ ಮೋದಿ ಜತೆಯೂ ನನಗೆ ಉತ್ತಮ ಒಡನಾಟವಿದೆ.  ಪಕ್ಷಕ್ಕೆ ಸೇರ್ಪಡೆಯಾಗುವ ಮುನ್ನ ಯಡಿಯೂರಪ್ಪ ಮತ್ತು ಕೆಲ ಮುಖಂಡರ ಜತೆ ನಾನು ಹಲವಾರು ಬಾರಿ ಮಾತುಕತೆ ನಡೆಸಿದ್ದೇನೆ. ಪಕ್ಷದಲ್ಲಿ ನನಗೆ ಯಾವುದೇ ರೀತಿಯ ಸ್ಥಾನಮಾನ ಬೇಡ. ರಾಜಕೀಯ ನಿವೃತ್ತಿ ಅಂಚಿನಲ್ಲಿರುವ ನಾನು ಸ್ವಾಭಿಮಾನದಿಂದಲೇ ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಹೇಳಲು ತೀರ್ಮಾನಿಸಿದ್ದೆ.

ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನನ್ನು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಂಡರು. ಕಡೆ ಪಕ್ಷ ಯಾವ ಕಾರಣಕ್ಕಾಗಿ ಸಂಪುಟದಿಂದ ಕೈ ಬಿಡುತ್ತಿದ್ದೇನೆಂಬ ಮಾತನ್ನೂ ಹೇಳಲಿಲ್ಲ. ಬೇರೊಬ್ಬರ ಮಾತು ಕೇಳಿಕೊಂಡು ನನ್ನನ್ನು ಸಂಪುಟದಿಂದ ವಜಾ ಮಾಡಿದರು. ಇದು ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಯಿತು ಎಂದು ವಿಷಾದ ವ್ಯಕ್ತಪಡಿಸಿದರು.  ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಅನಗತ್ಯವಾಗಿ ಉಪಚುನಾವಣೆ ಎದುರಾಗಿರುವುದರಿಂದ ಕ್ಷೇತ್ರದ ಜನತೆಯ ಕ್ಷಮೆ ಕೋರುತ್ತೇನೆ. ನನಗೆ ಉಪಚುನಾವಣೆ ಅನಿವಾರ್ಯವಲ್ಲ. ಆದರೆ, ಸ್ವಾಭಿಮಾನಕ್ಕೆ ಧಕ್ಕೆ ಬಂದಿರುವುದರಿಂದ ಸ್ಪರ್ಧಿಸುವುದು ಅನಿವಾರ್ಯವಾಗಿದೆ ಎಂದರು.

ಇತ್ತೀಚೆಗೆ ನಡೆದ ಸಚಿವ ಸಂಪುಟ ಪುನಾರಚನೆ ವೇಳೆ ಶ್ರೀನಿವಾಸ ಪ್ರಸಾದ್ ಅವರನ್ನು ಸಂಪುಟದಿಂದ ಕೈ ಬಿಡಲಾಗಿತ್ತು. ಇದರಿಂದ ಅಸಮಾಧಾನಗೊಂಡ ಅವರು ಶಾಸಕ ಸ್ಥಾನಕ್ಕೆ ಹಾಗೂ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದರು. ತೆರವಾಗಿರುವ ಈ ಸ್ಥಾನಕ್ಕೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ವೇಳೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡುವ ಸಾಧ್ಯತೆಯಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin