ವೀರಯೋಧ ಮನ್ದೀಪ್ ಸಿಂಗ್ ಹತ್ಯೆಗೆ ಪ್ರತೀಕಾರವಾಗಿ 40 ಪಾಕಿಸ್ತಾನಿ ಸೈನಿಕರ ಹತ್ಯೆ..!
ನವದೆಹಲಿ, ನ.5-ವೀರಯೋಧ ಮನ್ದೀಪ್ ಸಿಂಗ್ರನ್ನು ಹತ್ಯೆ ಮಾಡಿ ರುಂಡ ಕತ್ತರಿಸಿ ವಿರೂಪಗೊಳಿಸಿದ ಅಮಾನವೀಯ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಯೋಧರು ಅ.29ರಂದು ಪಾಕಿಸ್ತಾನದ 40 ಯೋಧರನ್ನು ಕೊಂದಿದ್ದಾರೆ. ಈ ವಿಷಯವನ್ನು ಖಚಿತಪಡಿಸಿರುವ ಮಾಧ್ಯಮ ವರದಿಯೊಂದು ಭಾರತ ಪಡೆ ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ಅನೇಕ ಸೇನಾನೆಲೆಗಳು ಧ್ವಂಸಗೊಂಡಿವೆ ಎಂದು ಹೇಳಿದೆ. ಮನ್ದೀಪ್ ಸಿಂಗ್ ಹತ್ಯೆ ನಂತರ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವುದಾಗಿ ಶಪಥ ಮಾಡಿದ್ದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಯೋಧರು, ಅದನ್ನು ಅಕ್ಷರಶ: ಈಡೇರಿಸಿದ್ದಾರೆ ಎಂದು ಸಿಎನ್ಎನ್-ನ್ಯಾಸ್ 18 ವರದಿ ತಿಳಿಸಿದೆ.
ಭಾರತೀಯ ಯೋಧರು ಅ.29ರಂದು ಕಾಶ್ಮೀರ ಕಣಿವೆಯ ಕುಪ್ವಾರ ಜಿಲ್ಲೆಯ ಕೆರಾನ್ ವಲಯದಲ್ಲಿ ಸಿಡಿಲಬ್ಬರದ ಪ್ರತಿದಾಳಿ ನಡೆಸಿದರು. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ 40 ಸೈನಿಕರು ಹತರಾಗಿ ಕನಿಷ್ಠ ಐದು ಸೇನಾ ನೆಲೆಗಳು ಧ್ವಂಸಗೊಂಡಿವೆ ಎಂದು ಸೇನಾಧಿಕಾರಿಗಳು ಖಚಿತಪಡಿಸಿದ್ದಾರೆ. ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಕುಮ್ಮಕ್ಕಿನಿಂದ ಒಳನುಸುಳಿದ್ದ ಭಯೋತ್ಪಾದಕರು ಅ.28ರಂದು ಕುಪ್ವಾರದ ಮಚ್ಚಿಲ್ ವಲಯದಲ್ಲಿ 17ನೇ ಸಿಖ್ ರೆಜಿಮೆಂಟ್ನ ಮನ್ದೀಪ್ ಸಿಂಗ್ರನ್ನು ಕೊಂದು ರುಂಡ ಕತ್ತರಿಸಿ ವಿರೂಪಗೊಳಿಸಿದ್ದರು. ಇದಾದ ಮರುದಿನವೇ ಭಾರತವು ಪಾಕಿಸ್ತಾನ ಹೆದರಿ ಕಂಗಾಲಾಗುವ ರೀತಿಯಲ್ಲಿ ಸೇಡು ತೀರಿಸಿಕೊಂಡಿದೆ ಎಂದು ವರದಿ ವಿವರಿಸಿದೆ.
ಪಾಕಿಸ್ತಾನಿ ಸೇನಾ ನೆಲೆಗಳನ್ನು ಚಿಂದಿ ಉಡಾಯಿಸಲು ಭಾರತೀಯ ಸೇನೆ ಆರ್ಟಿಲರಿ ಗನ್ಗಳನ್ನು (ಅತ್ಯಾಧುನಿಕ ಫಿರಂಗಿಗಳು) ಬಳಸಿದ್ದು, ವೈರಿ ಪಡೆಗೆ ಭಾರೀ ಹಾನಿಯಾಗಿದೆ.
ಪಾಕ್ ದಾಳಿಯಿಂದ ತತ್ತರಿಸಿರುವ ಪಾಕಿಸ್ತಾನಿ ಸೇನೆಯು ಗಡಿ ಪ್ರದೇಶದಲ್ಲಿ ದುರ್ಬರ ರೇಂಜರ್ಗಳನ್ನು ಬದಲಾಯಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ಗಡಿ ಉದ್ವಿಗ್ನ : ಸರ್ಜಿಕಲ್ ಸ್ಟ್ರೈಕ್ ನಂತರ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಗೊಂಡಿದ್ದು, ಎರಡೂ ಕಡೆ ಯುದ್ಧ ಸನ್ನಾಹದಂಥ ವಾತಾವರಣ ಸೃಷ್ಟಿಯಾಗಿದೆ.