ವೀರ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗುರೇಜ್(ಜಮ್ಮು-ಕಾಶ್ಮೀರ್), ಅ.19-ಪ್ರತಿ ವರ್ಷದಂತೆ ಈ ಬಾರಿಯು ಪ್ರಧಾನಿ ನರೇಂದ್ರ ಮೋದಿ ಅವರು ಗಡಿ ಕಾಯುವ ವೀರ ಯೋಧರ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಿದರು. ಈ ಬಾರಿ ಅವರು ದೀಪಾವಳಿಗಾಗಿ ಆಯ್ಕೆ ಮಾಡಿಕೊಂಡಿರುವುದು ಕಾಪ್ರ್ಸ್ 15ರ ಸೈನಿಕರಿರುವ ಬಂಡಿಪುರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿರುವ ಗುರೇಜ್ ಪ್ರದೇಶವನ್ನು. ಪ್ರಧಾನಿಯವರೊಂದಿಗೆ ಸೇನಾ ಮುಖ್ಯಸ್ಥ ಜ.ಬಿಪಿನ್ ರಾವತ್, ಲೆಪ್ಟಿನೆಂಟ್ ಜನರಲ್ ಜೆ.ಎಸ್.ಸಂಧು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ದೀಪಾವಳಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ಪ್ರಧಾನಿ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ. 2014ರಲ್ಲಿ ಕಣಿವೆ ರಾಜ್ಯ ಪ್ರವಾಹಕ್ಕೆ ತುತ್ತಾದ ಸಂದರ್ಭ ಕೂಡ ಮೋದಿ ಅವರು ಇಲ್ಲಿಗೆ ಆಗಮಿಸಿ ಜಮ್ಮು-ಕಾಶ್ಮೀರ ಜನತೆಯೊಂದಿಗೆ ದೀಪಾವಳಿ ಆಚರಿಸಿದರು.ಈ ಸಂದರ್ಭ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಿಮ್ಮ ತ್ಯಾಗ ಮತ್ತು ನಿಷ್ಠೆಗಳು ದೇಶದ 125 ಕೋಟಿ ಜನ ಶಾಂತಿಯಿಂದ ಮತ್ತು ನೆಮ್ಮದಿಯಿಂದ ಸುರಕ್ಷಿತವಾಗಿ ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ. ನಾವು ಯಾವತ್ತೂ ನಿಮ್ಮ  ಜೊತೆ ಜೊತೆ ನಾವು ಹೆಗಲು ಕೂಡಿಸಿ ನಿಮ್ಮ ಬೆಂಬಲಕ್ಕೆ ಇರುತ್ತೇವೆ ಎಂದು ಸೈನಿಕರನ್ನು ಹುರಿದುಂಬಿಸಿದರು.

ಅಷ್ಟೇ ಅಲ್ಲ  ಪ್ರವಾಹ ಮತ್ತು ಉಗ್ರರ ಬಾಧೆಯಿಂದ ಜರ್ಝರಿತವಾಗಿದ್ದ ರಾಜ್ಯಕ್ಕೆ 570 ಕೋಟಿ ರೂ.ಗಳ ಪಾಕೇಜ್ ಘೋಷಿಸಿ ಜನತೆಗೆ ಸಾಂತ್ವನ ಹೇಳಿದ್ದರು.2015ರಲ್ಲಿ ಪ್ರಧಾನಿ ಮೋದಿ ಪಂಜಾಬ್‍ನ ಭಾರತ-ಪಾಕಿಸ್ತಾನ ಗಡಿಯಲ್ಲಿ ಸೈನಿಕರೊಂದಿಗೆ ಹಬ್ಬದ ಸಂತಸ ಹಂಚಿಕೊಂಡಿದ್ದರು. ಕಳೆದ ವರ್ಷ ಹಿಮಾಚಲ ಪ್ರದೇಶದ  ಟಿಬೆಟ್ ಗಡಿಯಲ್ಲಿ ಸೈನಿಕರೊಂದಿಗೆ ಹಬ್ಬ ಆಚರಿಸಿದ್ದರು. ಪ್ರಧಾನಿ ಮೋದಿ ಅವರು ತಮ್ಮೊಂದಿಗೆ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಕ್ಕೆ ಗಡಿಯಲ್ಲಿ ಇರುವ ಯೋಧರು ಭಾರೀ ಹರ್ಷ ವ್ಯಕ್ತಪಡಿಸಿದರು.

Sri Raghav

Admin