ವೆಂಕಟೇಶ್‍ಮೂರ್ತಿ ಅಮಾನತಿನ ಹಿಂದೆ ಆರ್.ಅಶೋಕ್ ಕೈವಾಡ..?

Spread the love

R.Ashok-Venkatesh-Murthy

– ವೈ.ಎಸ್. ರವೀಂದ್ರ 

ಬೆಂಗಳೂರು, ಜ.11-ಬಿಜೆಪಿ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಪರಮಾಪ್ತ ಹಾಗೂ ಮಾಜಿ ಮೇಯರ್ ವೆಂಕಟೇಶ್‍ಮೂರ್ತಿ ಅಮಾನತು ಮಾಡಿರುವುದರ ಹಿಂದೆ ಆರ್.ಅಶೋಕ್ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ. ಭವಿಷ್ಯದಲ್ಲಿ ತಮ್ಮ ರಾಜಕೀಯ ಏಳಿಗೆಯಲ್ಲಿ ವೆಂಕಟೇಶಮೂರ್ತಿ ಅಡ್ಡಿಯಾಗಬಹುದು ಎಂಬ ಭೀತಿಯಿಂದಾಗಿ ಅಶೋಕ್, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮೇಲೆ ಒತ್ತಡ ಹಾಕಿ ಅಮಾನತು ಮಾಡಿಸಿದ್ದಾರೆ ಎಂಬ ವದಂತಿಗಳು ಕಮಲ ಪಾಳಯದಲ್ಲಿ ಹಬ್ಬಿದೆ. ವೆಂಕಟೇಶ್‍ಮೂರ್ತಿಯನ್ನು ಅಮಾನತುಗೊಳಿಸಿದರೆ ಪಕ್ಷದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಬಹುದೆಂಬುದನ್ನು ಯಡಿಯೂರಪ್ಪ ಅರಿತಿದ್ದರು. ಹೀಗಾಗಿಯೇ ಅಶೋಕ್ ಇಟ್ಟಿದ್ದ ಪ್ರಸ್ತಾವನೆಯನ್ನು ಅವರು ನಯವಾಗಿಯೇ ತಿರಸ್ಕರಿಸಿದ್ದರು.

ಆದರೆ ಪಟ್ಟು ಬಿಡದ ಅಶೋಕ್ ವೆಂಕಟೇಶಮೂರ್ತಿಯನ್ನು ಅಮಾನತು ಮಾಡಿದರೆ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಕಟ್ಟಿ ಹಾಕಬಹುದು. ಈಶ್ವರಪ್ಪನವರಿಗೆ ಆಪ್ತರಾಗಿರುವುದಲ್ಲದೆ, ಪ್ರಧಾನ ಕಾರ್ಯದರ್ಶಿಗಳಾಗಿದ್ದಾರ. ಸದ್ಯಕ್ಕೆ ಸಂಗೊಳ್ಳಿರಾಯಣ್ಣ ಬ್ರಿಗೇಡ್‍ನಲ್ಲಿ ಪೋಷಕ ಪಾತ್ರ ವಹಿಸುತ್ತಿರುವ ಅವರನ್ನು ಬಲಿ ಪಡೆದರೆ ಇಡೀ ಸಂಘಟನೆಯೇ ದಿಕ್ಕು ತಪ್ಪುತ್ತದೆ ಎಂಬ ದುರಾಲೋಚನೆಯನ್ನು ಯಡಿಯೂರಪ್ಪ ಅವರಿಗೆ ಅಶೋಕ್ ನೀಡಿದ್ದರು ಎನ್ನಲಾಗಿದೆ.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ನಲ್ಲಿ ಗುರುತಿಸಿಕೊಳ್ಳದಂತೆ ಯಡಿಯೂರಪ್ಪ ಈಶ್ವರಪ್ಪನವರಿಗೆ ಪದೇ ಪದೇ ಹೇಳಿದ್ದರೂ ಹಠಮಾರಿ ಸ್ವಭಾವದ ಅವರು ಕೇಳದೆ ಮುಂದುವರೆದರು.
ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ವೆಂಕಟೇಶ್‍ಮೂರ್ತಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಲು ಆಸಕ್ತಿ ತೋರಿದ್ದರು. ಇದಕ್ಕಾಗಿಯೇ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಆದರೆ ಈಗಾಗಲೇ ಪದ್ಮನಾಭನಗರದಲ್ಲಿ ಬೇರು ಬಿಟ್ಟಿರುವ ಅಶೋಕ್, ಬೇರೊಂದು ಕ್ಷೇತ್ರಕ್ಕೆ ವಲಸೆ ಹೋಗಲು ವರಿಷ್ಠರ ಮುಂದೆ ನಿರಾಕರಿಸಿದ್ದರು.

ಮುಂದೊಂದು ದಿನ ವೆಂಕಟೇಶ್‍ಮೂರ್ತಿ ತಮ್ಮ ರಾಜಕೀಯ ಭವಿಷ್ಯಕ್ಕೆ ತಡೆವೊಡ್ಡಬಹುದೆಂಬ ಭೀತಿಯಿಂದಾಗಿಯೇ ಬೆಂಗಳೂರು ನಗರ ಘಟಕದ ಅಧ್ಯಕ್ಷ ಪಿ.ಎನ್.ಸದಾಶಿವ ಅವರ ಮೇಲೆ ಒತ್ತಡ ಹಾಕಿ ಅಮಾನತುಗೊಳಿಸಿದ್ದಾರೆ ಎನ್ನಲಾಗಿದೆ. ಅಶೋಕ್ ಅವರ ಈ ನಡೆಗೆ ಈಶ್ವರಪ್ಪ ಗರಂ ಆಗಿದ್ದಾರೆ. ಏಕೆಂದರೆ ಎಲ್ಲರಿಗೂ ತಿಳಿದಿರುವಂತೆ ಯಡಿಯೂರಪ್ಪ ಎಂಬ ಅಶ್ವಮೇಧ ಯಾಗವನ್ನು ಕಟ್ಟಿ ಹಾಕಲು ಸಂಗೊಳ್ಳಿ ರಾಯಣ್ಣ ಬ್ರಿಗೇಡ್‍ಗೆ ಬೆಂಬಲವಾಗಿ ನಿಂತವರಲ್ಲಿ ಅಶೋಕ್ ಕೂಡ ಪ್ರಮುಖರು. ಇದ್ದಕ್ಕಿದ್ದಂತೆ ತಮ್ಮ ಬೆಂಬಲಿಗನನ್ನು ಅಮಾನತುಗೊಳಿಸಿರುವುದರಿಂದ ಈಶ್ವರಪ್ಪ ಕಣ್ಣು ಕೆಂಪಾಗುವಂತೆ ಮಾಡಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin