ವೆಬ್‍ಸೈಟ್‍ನಲ್ಲಿ ಪಿಯುಸಿ ಮಾದರಿ ಉತ್ತರ ಪತ್ರಿಕೆ, ಮೇ ಮೊದಲ ವಾರದಲ್ಲಿ ರಿಸಲ್ಟ್

PUC--01

ಬೆಂಗಳೂರು, ಮಾ.28- ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪದವಿ ಪೂರ್ವ ಶಿಕ್ಷಣ ಮಂಡಳಿ ಮಾದರಿ ಉತ್ತರ ಪತ್ರಿಕೆಗಳನ್ನು ಬಿಡುಗಡೆ ಮಾಡಿದೆ. ಈವರೆಗೂ ಪರೀಕ್ಷೆ ಮುಗಿದ ಮರುದಿನವೇ ಮಾದರಿ ಉತ್ತರ ಪತ್ರಿಕೆಗಳನ್ನು ಬಿಡುಗಡೆ ಮಾಡಿದ ನಿದರ್ಶನವಿಲ್ಲ. ಸಾಮಾನ್ಯವಾಗಿ ಫಲಿತಾಂಶ ಪ್ರಕಟಗೊಂಡ ಬಳಿಕ ಯಾವುದಾದರೂ ಗೊಂದಲವಿದ್ದರೆ ಮಾತ್ರ ಮಾದರಿ ಉತ್ತರ ಪತ್ರಿಕೆಗಳನ್ನು ಬಿಡುಗಡೆ ಮಾಡುತ್ತಿತ್ತು.
ಇದೀಗ ಮಂಡಳಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಅನುಕೂಲ ಕಲ್ಪಿಸಲೆಂದು ಇಂದಿನಿಂದಲೇ ವೆಬ್‍ಸೈಟ್‍ನಲ್ಲಿ ಮಾದರಿ ಉತ್ತರ ಪತ್ರಿಕೆಗಳನ್ನು ಬಿಡುಗಡೆ ಮಾಡಿದೆ.

ವಿದ್ಯಾರ್ಥಿಗಳು ತಾವು ಬರೆದಿರುವ ಪರೀಕ್ಷೆಯಲ್ಲಿ ಗೊಂದಲವಿದ್ದರೆ ಬಗೆಹರಿಸಿಕೊಳ್ಳಬಹುದು ಎಂದು ಮಂಡಳಿ ಮನವಿ ಮಾಡಿದೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಆನ್‍ಲೈನ್‍ನಲ್ಲೇ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.  ವಿಜ್ಞಾನ, ಕಲಾ ವಿಭಾಗ ಹಾಗೂ ವಾಣಿಜ್ಯ ವಿಭಾಗ ಸೇರಿದಂತೆ ಒಟ್ಟು 34 ವಿಷಯಗಳ ಕುರಿತಾಗಿ ವೆಬ್‍ಸೈಟ್‍ನಲ್ಲಿ ಸ್ಕೀಮ್ ಆಫ್ ಇವ್ಯಾಲ್ಯುಯೇಷನ್ ಬಿಡುಗಡೆ ಮಾಡಲಾಗಿದೆ.

164.100.133.209ಗೆ ಲಾಗ್‍ಆನ್ ಮಾಡಿ ಬಳಿಕ ಒಟಿಪಿ ದಾಖಲಿಸಿ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳಬೇಕು. ನಂತರ ವೆಬ್‍ಸೈಟ್‍ಗೆ ಲಾಗ್‍ಆನ್ ಮಾಡಿದರೆ ಉತ್ತರ ಪತ್ರಿಕೆಯನ್ನು ನೋಡಬಹುದು. ಇದರಿಂದ ವಿದ್ಯಾರ್ಥಿಗಳು, ಪೋಷಕರು ಮತ್ತು ಉಪನ್ಯಾಸಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬುದು ಪದವಿ ಪೂರ್ವ ಶಿಕ್ಷಣ ಮಂಡಳಿಯ ಅಭಿಪ್ರಾಯವಾಗಿದೆ.

+ ಪ್ರತಿಭಟನೆ ವಾಪಸ್:

ದ್ವಿತೀಯ ಪಿಯು ಪರೀಕ್ಷೆ ಪೂರ್ಣಗೊಂಡಿದ್ದು, ಏ.4ರಿಂದ ಮೌಲ್ಯಮಾಪನ ಕಾರ್ಯ ಪ್ರಾರಂಭವಾಗಲಿದೆ. ಪಿಯು ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕಾರವನ್ನು ಈ ವರ್ಷವೂ ಘೋಷಿಸಿ ಪ್ರತಿಭಟನೆಗೆ ಮುಂದಾಗಿದ್ದರು. ಆದರೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವಿರ್ ಸೇಠ್ ಫಲಪ್ರದ ಮಾತುಕತೆ ನಡೆಸಿದ್ದರಿಂದ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆಯಲು ನಿರ್ಧರಿಸಿದ್ದಾರೆ.  ಇದರಿಂದ ದ್ವಿತಿಯ ಪಿಯು ಮೌಲ್ಯಮಾಪನ ಈ ವರ್ಷ ನಿರಾತಂಕವಾಗಿ ಜರುಗಲಿದೆ ಎಂದು ಆಶಿಸಲಾಗುತ್ತಿದೆ. ಉಪಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ನೀತಿ-ಸಂಹಿತೆ ಜಾರಿಯಲ್ಲಿದ್ದು, ಉಪನ್ಯಾಸಕರ ಬೇಡಿಕೆ ಈಡೇರಿಕೆ ಸಂಬಂಧ ಏ.13ರಿಂದ 20ರ ಮಧ್ಯೆ ಮತ್ತೊಂದು ಸಭೆ ಕರೆಯುವುದಾಗಿ ಸಚಿವರು ಲಿಖಿತ ಹೇಳಿಕೆ ನೀಡಿರುವುದರಿಂದ ಸಂಘಟನೆಯು ಬಹಿಷ್ಕಾರ ನಿರ್ಧಾರವನ್ನು ತಾತ್ಕಾಲಿಕವಾಗಿ ಹಿಂಪಡೆದಿದೆ. ಒಂದು ವೇಳೆ ಪರಿಹಾರ ಕಲ್ಪಿಸದಿದ್ದಲ್ಲಿ ಮತ್ತೆ ಹೊರಾಟದ ಹಾದಿ ತುಳಿಯುವುದು ಖಚಿತ ಎಂದು ಸಂಘಟನೆ ಸ್ಪಷ್ಟಪಡಿಸಿದೆ.

ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹಾಗೂ ಪ್ರಾಂಶುಪಾಲರ ಸಂಘ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವಿರ್ ಸೇಠ್ ಅವರೊಂದಿಗೆ ಶಾಸಕರ ಭವನದಲ್ಲಿ ಸಭೆ ನಡೆಸಿದ್ದಾರೆ. ವೇತನ ತಾರತಮ್ಯ ನಿವಾರಣೆ ನಿಟ್ಟಿನಲ್ಲಿ 7ನೆ ವೇತನ ಆಯೊಗ ಶಿಫಾರಸು ಮಾಡಲು ಹಾಗೂ ಪ್ರಾಚಾರ್ಯರಿಗೆ ಪ್ರತ್ಯೆಕ ವೇತನ ಶ್ರೆಣಿ ನಿಗದಿಪಡಿಸಲು ಸರ್ಕಾರದ ಮಟ್ಟದಲ್ಲಿ ತಿರ್ಮಾನಿಸಲಾಗುವುದು. ಅಲ್ಲದೆ, ಸಚಿವ ಸಂಪುಟದಲ್ಲಿ ರ್ಚಚಿಸಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.  30 ಜಿಲ್ಲೆಗಳ ಪದಾಧಿಕಾರಿಗಳು ಚರ್ಚೆ ನಡೆಸಿ ಒಮ್ಮತಕ್ಕೆ ಬಂದಿದ್ದೇವೆ. ಸಚಿವರ ಭರವಸೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹೊರಾಟ ಹಿಂಪಡೆಯುತ್ತಿದ್ದೇವೆ ಎಂದು ಪಿಯು ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದ್ದಾರೆ.
+ ಫಲಿತಾಂಶ ಮೇ ಮೊದಲ ವಾರ:

ದ್ವಿತೀಯ ಪಿಯು ಪರೀಕ್ಷೆ ಸೊಮವಾರ ಅಂತ್ಯಗೊಂಡಿದ್ದು, ಏ.4ರಿಂದ ಮೌಲ್ಯಮಾಪನ ಕಾರ್ಯ ಪ್ರಾರಂಭವಾಗಲಿದೆ. ಮೇ ಮೊದಲ ವಾರದಲ್ಲಿ ಫಲಿತಾಂಶ ನೀಡಲು ಪಿಯು ಇಲಾಖೆ ಸಿದ್ಧತೆ ನಡೆಸುತ್ತಿದೆ. ಮೇ 2 ಮತ್ತು 3ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೃತ್ತಿ ಶಿಕ್ಷಣ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಮೇ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

+ ಯಶಸ್ವಿಯಾದ ಪರೀಕ್ಷೆ :

2016-17ನೆ ಸಾಲಿನ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಸೋಮವಾರಕ್ಕೆ ಮುಕ್ತಾಯವಾಗಿದ್ದು, ಇಂಗ್ಲಿಷ್ ಪರೀಕ್ಷೆ ನಡೆದಿದ್ದು, ನಾಲ್ಕು ಜನ ಡಿಬಾರ್ ಆಗಿದ್ದಾರೆ. ಈ ಬಾರಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದೇ ಪಿಯು ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಮುಂದಿನ ಏ. 5ರಿಂದ ಮËಲ್ಯಮಾಪನ ಆರಂಭವಾಗಲಿದೆ. ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯನ್ನು 6.84 ಲಕ್ಷ ವಿದ್ಯಾರ್ಥಿಗಳು ಬರೆದಿದ್ದು, ಇಂದಿನದ್ದು ಸೇರಿ ಒಟ್ಟು 38 ಮಂದಿ ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕಿ ಶಿಖಾ ತಿಳಿಸಿದರು.

+ ಈ ಬಾರಿ ಏನೇನು ಸುಧಾರಣೆಯಾಗಿತ್ತು:

ಕಳೆದ ವರ್ಷ ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆ ಎರಡು ಬಾರಿ ಸೋರಿಕೆಯಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿಡುವ ಖಜಾನೆ (ಸ್ಟ್ರಾಂಗ್ ರೂಂ) ಬಳಿ ಯಾರದ್ದೇ ಚಲನವಲನ ಕಂಡರೂ ತಕ್ಷಣ ಅದರ ವಿಡಿಯೋ ತುಣುಕು ಸಮೇತ ‘ಅಲರ್ಟ’ ಮಾಡುವಂತಹ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯನ್ನು ಈ ಬಾರಿ ಅಳವಡಿಸಿತ್ತು. ಖಜಾನೆಯ ಕಣ್ಗಾವಲು ಪ್ರದೇಶದ ವ್ಯಾಪ್ತಿಯೊಳಗೆ ಯಾರದ್ದೇ ಚಲನವಲನ ಕಂಡರೂ ಅದರ 15 ಸೆಕೆಂಡ್ ವಿಡಿಯೋ ತುಣುಕು ಸಮೇತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಜಿಲ್ಲಾ ಖಜಾನೆ ಅಧಿಕಾರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಮತ್ತು ಜಿಲ್ಲಾ ಉಪನಿರ್ದೇಶಕರ ಮೊಬೈಲ್ಗಳಿಗೆ ಸಂದೇಶ ರವಾನೆ ಆಗುವಂತಹ ಈ ವ್ಯವಸ್ಥೆಯಿಂದಾಗಿ ಈ ಬಾರಿ ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin