ವೇದಿಕೆಯಲ್ಲಿ ತಮಗೆ ಆಸನ ಹಾಕದಿರುವುದಕ್ಕೆ ಸಿಡಿಮಿಡಿಗೊಂದು ನಿರ್ಗಮಿಸಿದ ರಾಮಚಂದ್ರೇಗೌಡ
ಬೆಂಗಳೂರು, ಜ.7-ತಮ್ಮ ವೇದಿಕೆಯಲ್ಲಿ ಆಸನ ಹಾಕದಿರುವುದಕ್ಕೆ ಸಿಡಿಮಿಡಿಗೊಂಡ ಬಿಜೆಪಿ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ರಾಮಚಂದ್ರೇಗೌಡ ನಿರ್ಗಮಿಸಿದ ಘಟನೆ ಇಂದು ನಡೆಯಿತು. ವಿಜಯನಗರದ ಬಿಜಿಎಸ್ ಮೈದಾನದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿಯನ್ನು ಇಂದು ಹಮ್ಮಿಕೊಳ್ಳಲಾಗಿತ್ತು. ವೇದಿಕೆಯಲ್ಲಿ ಕೆಲವೇ ಕೆಲವು ಗಣ್ಯರಿಗೆ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಪಿಯೂಷ್ ಗೋಯಲ್, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್ ಸೇರಿದಂತೆ ಕೆಲವೇ ಕೆಲವು ಆಯ್ದ ಗಣ್ಯರಿಗೆ ಮಾತ್ರ ವೇದಿಕೆಯಲ್ಲಿ ಆಸನ ಹಾಕಲಾಗಿತ್ತು. ಆದರೆ ಇದನ್ನು ಹರಿಯದ ರಾಮಚಂದ್ರಗೌಡರು ವೇದಿಕೆಗೆ ಬರುತ್ತಿದ್ದಂತೆ ನೇರವಾಗಿ ಆಸೀನರಾಗಲು ಮುಂದಾದರು. ಅವರಿಗೆ ಅಲ್ಲಿ ಸೀಟು ಕಾಯ್ದಿರಿಸಿರಲಿಲ್ಲ.
ಇದರಿಂದ ಕುಪಿತಗೊಂಡ ರಾಮಚಂದ್ರಗೌಡರು ವೇದಿಕೆಯಿಂದ ನಿರ್ಗಮಿಸಿದ್ದರು. ತಕ್ಷಣವೇ ಮಾಜಿ ಸಚಿವ ಹಾಗೂ ಕಾರ್ಯಕ್ರಮದ ಉಸ್ತುವಾರಿ ವಿ.ಸೋಮಣ್ಣ ಗೌಡರ ಮನವೊಲಿಸಲು ಪ್ರಯತ್ನಿಸಿದರು. ಅಚಾತುರ್ಯದಿಂದ ಹೀಗಾಗಿದೆ. ಆಸನದ ವ್ಯವಸ್ಥೆ ಕಲ್ಪಿಸಲಾಗುವುದು. ವೇದಿಕೆಗೆ ಬನ್ನಿ ಎಂದು ಮನವಿ ಮಾಡಿದರು. ಇದಕ್ಕೆ ಸೊಪ್ಪು ಹಾಕದ ಗೌಡರು ವೇದಿಕೆಯಿಂದ ನಿರ್ಗಮಿಸಿದರು.