ವೈಫೈನಿಂದ ಹೈಫೈ ಆಗಲಿವೆ ರಾಜ್ಯದ 115 ರೈಲ್ವೇ ನಿಲ್ದಾಣಗಳು
ಬೆಂಗಳೂರು, ಜೂ. 25 : ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮತ್ತು ಯಶವಂತಪುರ ರೈಲು ನಿಲ್ದಾಣ ಸೇರಿದಂತೆ 115 ರೈಲ್ವೇ ನಿಲ್ದಾಣಗಳು ಹೈ ಸ್ಪೀಡ್ ವೈಫೈ ಸೌಲಭ್ಯ ಪಡೆಯಲಿವೆ. ನೈರುತ್ಯ ರೈಲ್ವೇಯ 115 ರೈಲು ನಿಲ್ದಾಣಗಳು 18 ತಿಂಗಳಿನಲ್ಲಿ ಹೈಸ್ಪೀಡ್ ವೈಫೈ ಪಡೆಯಲಿದ್ದು, ಈಗಾಗಲೇ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಯಶವಂತಪುರ ಮತ್ತು ಮೈಸೂರು, ಹುಬ್ಬಳ್ಳಿ ರೈಲು ನಿಲ್ದಾಣಗಳು ಫ್ರೀ ವೈಫೈ ಸೌಲಭ್ಯ ಪಡೆದಿವೆ.
ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಡಿ ರೈಲು ಪ್ರಯಾಣಿಕರಿಗೆ ಉಚಿತ ವೈಫೈ ಸೌಲಭ್ಯ ಪ್ರಸ್ತುತ ರಾಜ್ಯದ 115 ನಿಲ್ದಾಣಗಳಿಗೆ ವಿಸ್ತರಣೆಯಾಗಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಡಿಜಿಟಲ್ ಇಂಡಿಯಾ ಯೋಜನೆಯಡಿ ದೇಶದ 400 ಪ್ರಮುಖ ರೈಲು ನಿಲ್ದಾಣದಲ್ಲಿ ಹೈಸ್ಪೀಡ್ ವೈಫೈ ಸೇವೆ ನೀಡಲು ರೈಲ್ವೆ ಇಲಾಖೆ 2016 ರಲ್ಲಿ ನಿರ್ಧರಿಸಿತ್ತು. ಮೊದಲ ಹಂತದಲ್ಲಿ ದೇಶದ 100 ರೈಲು ನಿಲ್ದಾಣಗಳನ್ನು ಇಲಾಖೆ ಆಯ್ಕೆ ಮಾಡಿಕೊಂಡಿದೆ. ರೈಲ್ ವೈಯರ್ ಹೆಸರಿನಲ್ಲಿ ಈ ವೈಫೈ ಲಭ್ಯವಾಗುತ್ತಿದೆ.
ಬೆಂಗಳೂರು, ಯಶವಂತಪುರ, ಮೈಸೂರು, ಹುಬ್ಬಳ್ಳಿ ಸೇರಿ ಪ್ರಮುಖ ರೈಲು ನಿಲ್ದಾಣಗಳಲ್ಲಿ ವೈಫೈ ಸೌಲಭ್ಯವಿದ್ದು, ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿರುವ ರೈಲು ನಿಲ್ದಾಣಗಳಲ್ಲೂ ವೈಫೈ ಸೇವೆ ಪ್ರಸ್ತುತ ಲಭ್ಯವಿದೆ. ವೈಫೈ ಸೇವೆ ಪ್ರತಿ ಪ್ರಯಾಣಿಕನಿಗೆ ನಿತ್ಯ 30 ನಿಮಿಷ ಮಾತ್ರ ಉಚಿತವಾಗಿದೆ.
ಈಗ ಜಗತ್ತು ಡಿಜಿಟಲ್ ಲೋಕಕ್ಕೆ ತೆರೆದುಕೊಂದಿರುವ ಕಾರಣ ಹೈ ಸ್ಪೀಡ್ ವೈಫೈ ಸೌಲಭ್ಯ ನೀಡಿ ರೈಲ್ವೇ ಇಲಾಖೆಯಲ್ಲಿ ಮತ್ತಷ್ಟು ಗುಣಮಟ್ಟ ಹೆಚ್ಚಿಸುವ ಇಂಗಿತವನ್ನು ಇಲಾಖೆ ಹೊಂದಿದೆ. 2016 ಕೇಂದ್ರ ಬಜೆಟ್ ನಲ್ಲಿ ಈ ಪ್ರಸ್ತಾಪವನ್ನಿಡಲಾಗಿತ್ತು. ಪ್ರಯಾಣಿಕರು 30 ನಿಮಿಷಗಳಲ್ಲಿ ಅಪ್ಲೋಡ್ ಗೆ ಸೆಕೆಂಡಿಗೆ 1mb ಮತ್ತು ಡೌನ್ ಲೋಡ್ ಗೆ ಸೆಕೆಂಡಿಗೆ 3mb ಸ್ಪೀಡ್ ನಲ್ಲಿ ಅಂತರ್ಜಾಲವನ್ನು ಉಪಯೋಗಿಸಬಹುದಾಗಿದೆ. ಇದು ಮೊದಲ 30 ನಿಮಿಷ ಮಾತ್ರ. ನಂತರ ಕ್ರಮೇಣ ಸ್ಪೀಡ್ ಕಡಿಮೆಯಾಗುತ್ತ ಹೋಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.