ಶಶಿಕಲಾ ತುಮಕೂರು ಜೈಲಿಗೆ ಸ್ಥಳಾಂತರ…?

Sasikala--01

ತುಮಕೂರು, ಮಾ.7-ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ತಮಿಳುನಾಡಿನ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಮತ್ತು ಆಕೆಯ ಆಪ್ತೆ ಇಳವರಸಿ ತುಮಕೂರು ಜೈಲಿಗೆ ಸ್ಥಳಾಂತರಗೊಳ್ಳುವರೇ…? ಹೌದು, ಇಲ್ಲಿನ ಜೈಲು ಸಿಬ್ಬಂದಿಗಳು ಬಂಧೀಖಾನೆಯನ್ನು ಸಿದ್ಧಗೊಳಿಸುತ್ತಿರುವುದನ್ನು ಗಮನಿಸಿದರೆ ಶೀಘ್ರದಲ್ಲೇ ಶಶಿಕಲಾ ಮತ್ತು ಇಳವರಸಿ ತುಮಕೂರು ಜೈಲಿಗೆ ಸ್ಥಳಾಂತರಗೊಳ್ಳುವ ಸೂಚನೆಗಳಿವೆ.  ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾ ಅವರನ್ನು ಭೇಟಿಯಾಗಲು ತಮಿಳುನಾಡಿನ ಸಚಿವರು ಪದೇ ಪದೇ ಜೈಲಿಗೆ ಭೇಟಿ ನೀಡಿರುವುದನ್ನು ತಪ್ಪಿಸುವ ಉದ್ದೇಶದಿಂದ ಆಕೆ ಮತ್ತು ಇಳವರಸಿಯನ್ನು ತುಮಕೂರು ಜೈಲಿಗೆ ಸ್ಥಳಾಂತರಿಸುವಂತೆ ಚೆನ್ನೈನ ಡಾ.ಕೆ.ಆರ್.ರಾಮಸ್ವಾಮಿ ಎಂಬುವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಪರಪ್ಪನ ಜೈಲು ತಮಿಳುನಾಡಿನ ಹೊಸೂರಿಗೆ ಹೊಂದಿಕೊಂಡಂತೆ ಇರುವುದರಿಂದ ಪ್ರತಿನಿತ್ಯ ಜೈಲಿನಲ್ಲಿರುವ ಶಶಿಕಲಾ ಅವರನ್ನು ಹಲವಾರು ತಮಿಳುನಾಡು ಸಚಿವರು ಭೇಟಿಯಾಗಿ ಸಲಹೆ, ಸೂಚನೆಗಳನ್ನು ಪಡೆಯುತ್ತಿರುವುದರಿಂದ ಪರೋಕ್ಷವಾಗಿ ತಮಿಳುನಾಡಿನಲ್ಲಿ ಆಕೆಯ ದರ್ಬಾರ್ ನಡೆಯುತ್ತಿದೆ. ಇದನ್ನು ತಪ್ಪಿಸಲು ಶಶಿಕಲಾ ಮತ್ತು ಇಳವರಸಿಯನ್ನು ತುಮಕೂರು ಜೈಲಿಗೆ ಸ್ಥಳಾಂತರಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.  ಶಶಿಕಲಾ ಮತ್ತು ಇಳವರಸಿಯನ್ನು ತುಮಕೂರು ಜೈಲಿಗೆ ಸ್ಥಳಾಂತರಿಸುವಂತೆ ಕೋರಲಾಗಿರುವ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ಆರಂಭವಾಗುವ ಮುನ್ನವೇ ತುಮಕೂರು ಜೈಲಿನ ಅಧಿಕಾರಿಗಳು ಬಂಧೀಖಾನೆಯನ್ನು ಸಜ್ಜುಗೊಳಿಸುತ್ತಿದ್ದಾರೆ.

ನ್ಯಾಯಾಲಯ ಯಾವುದೇ ಸಂದರ್ಭದಲ್ಲೂ ಆದೇಶ ನೀಡಿದರೂ ಶಶಿಕಲಾ ಮತ್ತು ಇಳವರಸಿಯನ್ನು ಇಲ್ಲಿನ ಮಹಿಳಾ ಕಾರಾಗೃಹದಲ್ಲಿಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಉನ್ನತ ಮೂಲಗಳು ಈ ಸಂಜೆಗೆ ತಿಳಿಸಿವೆ.  ಇಬ್ಬರಿಗೂ ವಿಶೇಷ ಕೊಠಡಿ ಸಿದ್ಧಪಡಿಸುವ ಕುರಿತಂತೆ ಗೃಹ ಸಚಿವರ ಜೊತೆ ಹಿರಿಯ ಪೊಲೀಸ್ ಅಧಿಕಾರಿಗಳು ಮೂರು ಸುತ್ತಿನ ಮಾತುಕತೆ ನಡೆಸಿದ್ದು, ಶಶಿಕಲಾ ಮತ್ತು ಇಳವರಸಿಯನ್ನು ತುಮಕೂರು ಜೈಲಿಗೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ ಎನ್ನಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin