ಶಾಕಿಂಗ್ ನ್ಯೂಸ್ : ಸಮಾಜವಾದಿ ಪಕ್ಷದ ಸಂಸದನ ಆಪ್ತ ಕಾರ್ಯದರ್ಶಿಯೇ ಪಾಕ್ ಏಜೆಂಟ್…!
ನವದೆಹಲಿ, ಅ.29-ಭಾರತದಲ್ಲಿ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿರುವ ಪಾಕಿಸ್ತಾನದ ಗೂಢಚಾರರ ಜಾಲವನ್ನು ಭೇದಿಸುವ ಕಾರ್ಯಾಚರಣೆ ತೀವ್ರಗೊಂಡಿದ್ದು, ಉತ್ತರಪ್ರದೇಶ ಪೊಲೀಸರು ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮತ್ತು ರಾಜ್ಯಸಭಾ ಸದಸ್ಯ ಮುನಾವರ್ ಸಲೀಂ ಆಪ್ತ ಕಾರ್ಯದರ್ಶಿ ಫರಾತ್ನನ್ನು ಬಂಧಿಸಿದ್ದಾರೆ. ಈತ ಪಾಕಿಸ್ತಾನದ ಗೂಢಚಾರ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಭಾರತ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಹೊಂದಿದ್ದ ಆರೋಪಕ್ಕೆ ಗುರಿಯಾಗಿರುವ ಪಾಕಿಸ್ತಾನ ಹೈಕಮಿಷನರ್ ಕಚೇರಿ ಬೇಹುಗಾರಿಕೆಯ ವ್ಯವಸ್ಥಿತ ವ್ಯೂಹದ ಕಬಂಧ ಬಾಹುಗಳು ದೇಶದ ಹಲವೆಡೆ ವಿಸ್ತರಣೆಯಾಗಿರುವುದು ದೃಢಪಟ್ಟಿದೆ.
ಉತ್ತರ ಪ್ರದೇಶದ ಪೊಲೀಸರು ಕಳೆದ ರಾತ್ರಿ ಲಖನೌನಲ್ಲಿ ಪಾಕಿಸ್ತಾನ ಗೂಢಚಾರನೆಂದು ಹೇಳಲಾದ ಫರಾತ್ನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದು ಮಹತ್ವದ ಸಂಗತಿಗಳು ಬೆಳಕಿಗೆ ಬರುತ್ತಿವೆ. ಈ ಮಾಹಿತಿ ಆಧರಿಸಿ ಪಾಕ್ ಬೇಹುಗಾರಿಕೆ ಜಾಲವನ್ನು ಪತ್ತೆ ಮಾಡುವುದಾಗಿ ಅಪರಾಧ ತನಿಖಾ ವಿಭಾಗದ ಉನ್ನತಾಧಿಕಾರಿಯೊಬ್ಬರು ಹೇಳಿದ್ಧಾರೆ.
ಇದೇ ವೇಳೆ ಭಾರತದ ರಕ್ಷಣಾ ದಾಖಲೆಗಳನ್ನು ಹೊಂದಿದ್ದ ಪಾಕಿಸ್ತಾನ ಹೈಕಮಿಷನ್ ಕಚೇರಿಯ ಹಿರಿಯ ಅಧಿಕಾರಿ ಮೆಹಮೂದ್ ಅಖ್ತರ್ ಜೊತೆ ನಿಕಟ ಸಂಪರ್ಕ ಹೊಂದಿರುವ ಇತರ ಬೇಹುಗಾರರಿಗಾಗಿ ದೆಹಲಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದ, ವಿವಿಧ ರಾಜ್ಯಗಳ ಜೊತೆ ಸಂಪರ್ಕದಲ್ಲಿದ್ದಾರೆ.
ಈಗಾಗಲೇ ಈ ಗೂಢಚಾರಿಕೆ ಪ್ರಕರಣದಲ್ಲಿ ಮೌಲಾನಾ ರಂಜಾನ್ ಮತ್ತು ಸುಭಾಷ್ ಜಹಂಗೀರ್ನನ್ನು ಬಂಧಿಸಲಾಗಿದೆ. ಜೋಧ್ಪುರ್ನಲ್ಲಿ ವೀಸಾ ಏಜೆಂಟ್ ಶೋಯಿಬ್ನನ್ನು ಸೆರೆ ಹಿಡಿಯಲಾಗಿದೆ.