ಶಾಕಿಂಗ್ ಸ್ಟೋರಿ : ದೆಹಲಿ-ಬೆಂಗಳೂರು ವಿಮಾನದಲ್ಲಿ ಕಳ್ಳ ಪೈಲೆಟ್’ನ ಕಾಟ..!

Pilot

ನವದೆಹಲಿ, ಸೆ. 18-ಹಿಂದಿನ ಕಾಲದಲ್ಲಿ ಕಳ್ಳಕಾಕರು ಹಡಗುಗಳಲ್ಲಿ ಅವಿತಿಟ್ಟುಕೊಂಡು ಪುಕ್ಕಟ್ಟೆ ಪ್ರಯಾಣ ಮಾಡಿರುವುದನ್ನು ನಾವು ಕೇಳಿದ್ದೇವೆ. ಆದರೆ ಕಳ್ಳ ಪೈಲೆಟ್ ಒಬ್ಬ ಎರಡು ಬಾರಿ ಕಾಕ್‍ಪಿಟ್‍ನಲ್ಲಿ (ಚಾಲಕನ ಜಾಗ) ಪ್ರಯಾಣಿಸಿದ್ದೇ ಅಲ್ಲದೆ, ಒಂದು ಬಾರಿ ವಿಮಾನವನ್ನೂ ಚಾಲನೆ ಮಾಡಿ ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗೆ ಆತಂಕ ತಂದೊಡ್ಡಿದ್ದಾನೆ. ಜೆಟ್ ಏರ್‍ವೇಸ್ ವಿಮಾನದ ಈ ಗೋಸ್ಟ್ ಪೈಲೆಟ್ (ಭೂತ ನಾವಿಕ) ಪ್ರಹಸನ ನಿಗೂಢವಾಗಿದ್ದು, ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ತನಿಖೆಗೆ ಆದೇಶಿಸಿದೆ.  ಮೊದಲ ಪ್ರಕರಣ : ಅರ್ಹ ವಿಮಾನ ಹಾರಾಟ ಲೈಸನ್ಸ್ ಇಲ್ಲದೇ ಈ ಕಳ್ಳ ಪೈಲೆಟ್ ದೆಹಲಿ-ಬೆಂಗಳೂರು-ದೆಹಲಿ ವಿಮಾನವನ್ನು ಚಾಲನೆ ಮಾಡಿದ್ದಾನೆ. ತಾನು ವಿಮಾನ ಚಾಲನೆ ಮಾಡಿದ ಸುಳಿವನ್ನು ಮರೆಮಾಚಲು ಹಾರಾಟದ ಎಲ್ಲ ದಾಖಲೆಗಳನ್ನು ಅಳಿಸಿ ಹಾಕಿದ್ದಾನೆ.

ಎರಡನೇ ಪ್ರಕರಣ : ಇದೇ ಕಳ್ಳ ಪೈಲೆಟ್ ನಂತರ ಎಲ್ಲೂ ಯಾವುದೇ ದಾಖಲೆಯ ಕುರುಹು ಇಲ್ಲದಂತೆ ದೆಹಲಿಯಿಂದ ಬೆಂಗಳೂರಿಗೆ ಪುಕ್ಕಟ್ಟೆ ಪ್ರಯಾಣ ಮಾಡಿದ್ದಾನೆ. ಜೆಟ್ ಏರ್‍ವೇಸ್‍ಗೆ ಸೇರಿದ ಲೈಸನ್ಸ್ ಅವಧಿ ಮುಗಿದಿರುವ ಪೈಲೆಟ್ ಈ ಕೃತ್ಯ ಎಸಗಿರುವ ಶಂಕೆ ಇದ್ದು, ಎಲ್ಲ ಪೈಲೆಟ್‍ಗಳು ಮತ್ತು ಸಿಬ್ಬಂದಿಯನ್ನು ವ್ಯಾಪಕ ತನಿಖೆಗೆ ಒಳಪಡಿಸಲಾಗುತ್ತಿದೆ. ಈ ಭದ್ರತಾ ಲೋಪವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಎರಡೂ ಪ್ರಕರಣಗಳಲ್ಲೂ ಆತ ವಿಮಾನದ ಕಾಕ್‍ಪಿಟ್‍ನಲ್ಲಿದ್ದ ಬಗ್ಗೆ ನಮ್ಮ ಪ್ರಾಥಮಿಕ ತನಿಖೆ ದೃಢಪಡಿಸಿದೆ. ಆತ ಯಾವುದೇ ಸುಳಿವು ಇಲ್ಲದಂತೆ ಎಲ್ಲ ಹಾರಾಟ ದಾಖಲೆಗಳನ್ನು ಅಳಿಸಿ ಹಾಕಿದ್ದಾನೆ. ಬಿಗಿಭದ್ರತೆ ನಡುವೆ ಸಿಬ್ಬಂದಿಯ ಕಣ್ಗಾವಲು ತಪ್ಪಿಸಿ ಓರ್ವ ಪೈಲೆಟ್ ವಿಮಾನದ ಕಾಕ್‍ಪಿಟ್‍ನಲ್ಲಿ ಪ್ರಯಾಣಿಸಿರುವ ಈ ಪ್ರಕರಣಗಳನ್ನು ನಾಗರಿಕ ವಿಮಾನಯಾನ ಭದ್ರತಾ ಮಂಡಳಿಗೆ ವಹಿಸಲಾಗುವುದು ಹಾಗೂ ಕಳ್ಳ ಪೈಲೆಟ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ನಾಗರಿಕ ವಿಮಾನಯಾನ ಇಲಾಖೆಯ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

ಪೈಲೆಟ್‍ಗಳಿಗೆ ತರಬೇತಿ ನೀಡಿ ಪ್ರಮಾಣ ಪತ್ರಗಳನ್ನು ನೀಡುವ ಅಧಿಕಾರ ಇರುವ ಹಿರಿಯ ಕಮಾಂಡರ್‍ನನ್ನು ಈ ಪ್ರಕರಣದ ತನಿಖೆಗೆ ನಿಯೋಜಿಸಲಾಗಿದೆ. ಈ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ. ತನಿಖೆಗೆ ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ನಮಗೆ ಅತಿ ಮುಖ್ಯ ಎಂದು ಜೆಟ್ ಏರ್‍ವೇಸ್‍ನ ಉನ್ನತಾಧಿಕಾರಿಗಳು ಹೇಳಿದ್ದಾರೆ.  ಪೈಲೆಟ್ ಕಾರ್ಯಕ್ಷಮತೆ ತಪಾಸಣೆ (ಪಿಪಿಸಿ) ಪರೀಕ್ಷೆ ಅವಧಿ ಮುಗಿದಿದ್ದ ಪೈಲೆಟ್ ಒಬ್ಬ ಕೆಲವು ತಿಂಗಳ ಹಿಂದೆ ನಿಯಮವನ್ನು ಉಲ್ಲಂಘಿಸಿ ವಿಮಾನವೊಂದರ ಪರೀಕ್ಷಾರ್ಥ ಹಾರಾಟ ನಡೆಸಿ ಸಿಕ್ಕಿ ಬಿದ್ದಿದ್ದ. ಮತ್ತೊಬ್ಬ ಪೈಲೆಟ್ ತನ್ನ ಲೈಸನ್ಸ್ ಲ್ಯಾಪ್ಸ್ ಆಗಿದ್ದರೂ ಅದನ್ನು ಗಮನಕ್ಕೆ ಉನ್ನತಾಧಿಕಾರಿಗಳ ಗಮನಕ್ಕೆ ತರದೇ ಪ್ರಯಾಣಿಕರ ವಿಮಾನ ಚಾಲನೆ ಮಾಡಿ ಸಂಸ್ಥೆಗೆ ತಲೆನೋವಾಗಿದ್ದ.

► Follow us on –  Facebook / Twitter  / Google+

Sri Raghav

Admin