ಶಾಲೆಯ ಬಿಸಿಯೂಟದ ಬಿಸಿ ಸಾಂಬಾರ್ನಲ್ಲಿ ಬಿದ್ದು ಮಗು ಸಾವು
ಹೈದರಾಬಾದ್, ಡಿ.25-ಮಧ್ಯಾಹ್ನದ ಬಿಸಿಯೂಟಕ್ಕಾಗಿ ಸಿದ್ಧಪಡಿಸಲಾಗಿದ್ದ ಬಿಸಿ ಸಾಂಬಾರ್ ಪಾತ್ರೆಯೊಳಗೆ ಬಿದ್ದು 5 ವರ್ಷ ಬಾಲಕೊಬ್ಬ ದುರಂತ ಸಾವಿಗೀಡಾದ ಘಟನೆ ತೆಲಂಗಾಣದ ನಲಗೊಂಡ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಂಭವಿಸಿದೆ. ಈ ಘಟನೆ ಸಂಬಂಧ ಶಾಲಾ ಮುಖ್ಯೋಪಾಧ್ಯಾಯರನ್ನು ಸಸ್ಪೆಂಡ್ ಮಾಡಲಾಗಿದ್ದು, ಮೂವರ ವಿರುದ್ಧ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದುಲೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಊಟಕ್ಕಾಗಿ ಈ ಬಾಲಕ ವಿದ್ಯಾರ್ಥಿಗಳೊಂದಿಗೆ ಸಾಲಿನಲ್ಲಿ ನಿಂತಿದ್ದಾಗ, ನೂಕಾಟದಲ್ಲಿ ಬಿಸಿ ಸಾಂಬಾರ್ ಪಾತ್ರೆಯೊಳಗೆ ಬಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಶೇ.70ರಷ್ಟು ಬೆಂದ ಬೊಬ್ಬೆ ಗಾಯಗಳಾಗಿದ್ದ ಬಾಲಕನ್ನು ನಲಗೊಂಡದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಅಲ್ಲಿಂದ ಹೈದರಾಬಾದ್ನ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮುಂಜಾನೆ ಕೊನೆರಯುಸಿರೆಳೆದ ಎಂದು ನಕ್ರೆಕಲ್ ಪೊಲೀಸ್ ಠಾಣಾಧಿಕಾರಿ ವಿಶ್ವಪ್ರಸಾದ್ ಹೇಳಿದ್ದಾರೆ. ಮೃತ ಬಾಲಕನ ತಾತಾ ನೀಡಿದ ದೂರಿನ ಮೇರೆಗೆ ಕತನ್ಗೂರ್ ಪೊಲೀಸ್ ಠಾಣೆಯಲ್ಲಿ ಮೂವರು ಮಹಿಳೆಯರ ವಿರುದ್ಧ ಬೇಜವಾಬ್ದಾರಿತನದ ದೂರು ದಾಖಲಾಗಿದೆ. ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಕಲೆಕ್ಟರ್ ಮೃತ ಬಾಲಕನ ಕುಟುಂಬಕ್ಕೆ 2 ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ. ಆತನ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ಮತ್ತು ನಿವೇಶನ ನೀಡುವುದಾಗಿ ಭರವಸೆ ನೀಡಿದ್ದಾರೆ.