ಶಾಸಕಾಂಗ-ನ್ಯಾಯಾಂಗದ ನಡುವೆ ಸಂಘರ್ಷಕ್ಕೆ ನಾಂದಿ ಹಾಡಲಿದೆಯೇ ವಿಶೇಷ ಅಧಿವೇಶನ
ಬೆಂಗಳೂರು, ಅ.2-ನಾಳೆ ನಡೆಯಲಿರುವ ರಾಜ್ಯ ಉಭಯ ಸದನಗಳ ವಿಶೇಷ ಅಧಿವೇಶನವು ಶಾಸಕಾಂಗ ಮತ್ತು ನ್ಯಾಯಾಂಗದ ನಡುವಿನ ನೇರ ಸಂಘರ್ಷಕ್ಕೆ ನಾಂದಿ ಹಾಡಲಿದೆಯೇ ಎಂಬ ಕುತೂಹಲ ಕೆರಳಿಸಿದೆ. ತಮಿಳುನಾಡಿಗೆ ನೀರನ್ನು ಕಾವೇರಿ ಜಲಾನಯನ ಭಾಗದಿಂದ ಹರಿಸಲಾಗುತ್ತದೆಯೋ ಅಥವಾ ಕಾನೂನು ಹೋರಾಟವನ್ನು ಮುಂದುವರೆಸಲಾಗುತ್ತದೆಯೋ ಎಂಬ ಜಿಜ್ಞಾಸೆಗೆ ನಾಳಿನ ವಿಶೇಷ ಅಧಿವೇಶನ ತೆರೆ ಎಳೆಯಲಿದೆ. ಸುಪ್ರೀಂಕೋರ್ಟ್ ತೀರ್ಪನ್ನು ಪಾಲನೆ ಮಾಡಲು ಅಧಿವೇಶನದಲ್ಲಿ ಸರ್ವಾನುಮತದ ಒಪ್ಪಿಗೆ ದೊರೆತರೆ ನ್ಯಾಯಾಂಗ ನಿಂದನೆಯಿಂದ ಸರ್ಕಾರವೂ ಪಾರಾಗಲಿದೆ. ಸಂಘರ್ಷಕ್ಕೂ ಅವಕಾಶವಿರುವುದಿಲ್ಲ.
ಆದರೆ ಪ್ರತಿಪಕ್ಷಗಳು ಈಗಾಗಲೇ ಸರ್ವಪಕ್ಷಗಳ ಸಭೆಯಲ್ಲಿ ನಮಗೆ ಕುಡಿಯಲು ನೀರಿಲ್ಲದಿರುವಾಗ ತಮಿಳುನಾಡಿಗೆ ಬೆಳೆ ಬೆಳೆಯಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಸರ್ಕಾರದ ಮುಂದಿಟ್ಟಿವೆ. ಈ ಹಿನ್ನೆಲೆಯಲ್ಲಿ ನಾಳೆ ಮಹತ್ವದ ವಿಧಾನಸಭೆ ಮತ್ತು ವಿಧಾನಪರಿಷತ್ನ ಅಧಿವೇಶನಗಳು ನಡೆಯಲಿವೆ. ಉಭಯ ಸದನಗಳ ಅಧಿವೇಶನದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ತಮಿಳುನಾಡಿಗೆ ನೀರು ಬಿಡಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಚರ್ಚೆಯಾಗಿ ನಿರ್ಣಯ ಕೈಗೊಳ್ಳವ ಸಾಧ್ಯತೆಗಳಿವೆ. ಇದುವರೆಗಿನ ರಾಜಕೀಯ ಪಕ್ಷಗಳು ಹಾಗೂ ಸರ್ಕಾರದ ನಿಲುವನ್ನು ಗಮನಿಸಿದರೆ ತಮಿಳುನಾಡಿಗೆ ನೀರು ಹರಿಸುವ ಸ್ಥಿತಿಯಲ್ಲಿ ರಾಜ್ಯವಿಲ್ಲ ಎಂದೆನಿಸುತ್ತದೆ. ನಿನ್ನೆ ನಡೆದ ಸರ್ವಪಕ್ಷ ಸಭೆಯ ನಂತರ ತುರ್ತು ಮಂತ್ರಿ ಪರಿಷತ್ ಸಭೆ ನಡೆಸಿದ ಮುಖ್ಯಮಂತ್ರಿ ವಿಶೇಷ ಅಧಿವೇಶನ ನಡೆಸಲು ತೀರ್ಮಾನಿಸಿದ್ದಾರೆ.
ತಮಿಳುನಾಡಿಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಸೆ.20ರಂದು ಆದೇಶ ನೀಡಿದ್ದರ ಬಗ್ಗೆ ಸೆ.23ರಂದು ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಆ ಅಧಿವೇಶನದಲ್ಲಿ ಎಚ್ಚರಿಕೆಯ ನಿರ್ಣಯವನ್ನು ತೆಗೆದುಕೊಂಡು ಕಾವೇರಿ ಜಲಾನಯನ ಭಾಗದ ನಾಲ್ಕು ಜಲಾಶಯಗಳಲ್ಲಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬೇಕೆಂಬ ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ನಂತರ ಸೆ.27ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಮತ್ತೆ ನೀರು ಬಿಡುವಂತೆ ಆದೇಶಿಸಿತ್ತು. ಆಗಲೂ ಕೂಡ ರಾಜಕೀಯ ಪಕ್ಷಗಳು ಮತ್ತು ಸರ್ಕಾರ ಉಭಯ ಸದನಗಳ ನಿರ್ಣಯಕ್ಕೆ ಬದ್ಧವಾಗಿದ್ದವು.
ಇದಾದ ನಂತರ ಸೆ.30ರಂದು ಸುಪ್ರೀಂಕೋರ್ಟ್ ಮತ್ತೆ 6 ದಿನಗಳ ಕಾಲ ತಮಿಳುನಾಡಿಗೆ ಒಟ್ಟು 36 ಸಾವಿರ ಕ್ಯೂಸೆಕ್ಸ್ ನೀರು ಹರಿಸುವಂತೆ ಆದೇಶ ನೀಡಿದೆ ಅಲ್ಲದೆ ಮಂಗಳವಾರದೊಳಗೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ಹೀಗಾಗಿ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದು, ತಮಿಳುನಾಡಿಗೆ ನೀರು ಹರಿಸಿದರೆ ಸುಪ್ರೀಂಕೋರ್ಟ್ನ ಆದೇಶ ಪಾಲನೆ ಮಾಡಿದರೆ ಸದನದ ಹಕ್ಕುಚ್ಯುತಿಯಾಗಲಿದೆ. ಒಂದು ವೇಳೆ ತಮಿಳುನಾಡಿಗೆ ನೀರು ಹರಿಸದಿದ್ದರೆ ನ್ಯಾಯಾಂಗ ನಿಂದನೆಗೆ ಗುರಿಯಾಗಬೇಕಾಗುತ್ತದೆ. ಅಲ್ಲದೆ ರಾಜ್ಯದ ಹಿತವನ್ನು ಹೇಗೆ ಕಾಪಾಡಬೇಕು ಎಂಬ ಸಂದಿಗ್ಧ ಪರಿಸ್ಥತಿಯಲ್ಲಿ ಸರ್ಕಾರವಿದೆ.
ರಾಜ್ಯ ಎದುರಿಸುತ್ತಿರುವ ಸಂಕಷ್ಟ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಕಾನೂನಿನ ತೊಡಕಿಲ್ಲದೆ ಎದುರಿಸುವ ಉದ್ದೇಶದಿಂದ ಸೂಕ್ತ ನಿರ್ಣಯ ಕೈಗೊಳ್ಳಲು ಅಧಿವೇಶನವನ್ನು ಕರೆಯಲಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಸದನ ಕೈಗೊಂಡಿರುವ ನಿಲುವಿಗೆ ಅಂಟಿಕೊಂಡಿವೆ. ನಾಳಿನ ಅಧಿವೇಶನದಲ್ಲೂ ಇದೇ ನಿರ್ಣಯವನ್ನು ಮುಂದುವರೆಸಿದರೆ ನ್ಯಾಯಾಂಗ ಮತ್ತು ಶಾಸಕಾಂಗದ ನಡುವೆ ಸಂಘರ್ಷ ಉಂಟಾಗುವ ಸಾಧ್ಯತೆಗಳೇ ಹೆಚ್ಚಾಗಿವೆ.