ಶಾಸಕ ಕೊತ್ತನೂರು ಮಂಜುನಾಥ್ ನಾಮಪತ್ರ ಅಸಿಂಧು ಸಾಧ್ಯತೆ..?

Kottanuru-Manjunath--01
ಕೋಲಾರ, ಏ.25- ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಶಾಸಕ ಕೊತ್ನೂರು ಮಂಜುನಾಥ್ ಉಮೇದುವಾರಿಕೆ ಅಸಿಂಧುಗೊಳ್ಳುವ ಸಾಧ್ಯತೆಗಳಿವೆ. ಶಾಸಕ ಕೊತ್ನೂರು ಮಂಜುನಾಥ್ ಅವರು ಸಲ್ಲಿಸಿದ್ದ ಜಾತಿ ಪ್ರಮಾಣ ಪತ್ರ ಅಸಿಂಧು ಎಂದು ರಾಜ್ಯ ಉಚ್ಚ ನ್ಯಾಯಾಲಯ ಇಂದು ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಈ ಬಾರಿ ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದಿಂದ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸಲ್ಲಿಸಿರುವ ನಾಮಪತ್ರ ತಿರಸ್ಕøತಗೊಳ್ಳುವ ಸಾಧ್ಯತೆಗಳಿವೆ.  ಮಂಜುನಾಥ್ ಅವರು ಬೈರಾಗಿ ಜನಾಂಗದವರಾಗಿದ್ದು, ಕಳೆದ 2013ರಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ಸಂದರ್ಭದಲ್ಲಿ ಬುಡುಗ ಜಂಗಮದವರೆಂದು ಪ್ರಮಾಣಪತ್ರ ಸಲ್ಲಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ಮಂಜುನಾಥ್ ಗೆಲುವಿನ ನಂತರ ಮುನಿ ಆಂಜಿನಪ್ಪ ಎಂಬುವವರು ನ್ಯಾಯಾಲಯದ ಮೆಟ್ಟಿಲೇರಿ ಶಾಸಕರು ಬುಡುಗ ಜಂಗಮ ಜನಾಂಗಕ್ಕೆ ಸೇರಿದವರಲ್ಲ. ಅವರು ಬೈರಾಗಿ ಜನಾಂಗದವರಾಗಿರುವುದರಿಂದ ಅವರ ಶಾಸಕತ್ವವನ್ನು ರದ್ದುಪಡಿಸಬೇಕೆಂದು ವಾದಿಸಿದ್ದರು. ಮುನಿ ಆಂಜಿನಪ್ಪ ಅವರ ವಾದಕ್ಕೆ ಪುಷ್ಟಿ ನೀಡುವಂತೆ ಕೋಲಾರ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಬುಡುಗ ಜನಾಂಗದವರೇ ಇಲ್ಲ ಎಂಬ ಮಾಹಿತಿ ನೀಡಿದ್ದರು.  ವಾದ-ವಿವಾದ ಆಲಿಸಿದ ನ್ಯಾಯಾಲಯ ಇಂದು ಕೊತ್ನೂರು ಮಂಜುನಾಥ್ ಅವರು ಸಲ್ಲಿಸಿದ್ದ ಜಾತಿ ಪ್ರಮಾಣ ಪತ್ರವನ್ನು ಅಸಿಂಧು ಎಂದು ತೀರ್ಪು ನೀಡಿರುವುದಲ್ಲದೆ 25 ಸಾವಿರ ರೂ.ಗಳ ದಂಡ ವಿಧಿಸಿದೆ.

ಮೇ 12ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಿನ್ನೆ ಕಡೆಯ ದಿನವಾಗಿದ್ದು, ಕೊತ್ನೂರು ಮಂಜು ಅವರು ಈ ಬಾರಿಯೂ ಬುಡುಗ ಜನಾಂಗದ ಪ್ರಮಾಣ ಪತ್ರ ನೀಡಿ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.  ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅವರು ಸಲ್ಲಿಸಿರುವ ನಾಮಪತ್ರ ತಿರಸ್ಕøತಗೊಳ್ಳುವ ಸಾಧ್ಯತೆಗಳಿವೆ.   ಮುಂದೇನು..? ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಾಮಪತ್ರ ತಿರಸ್ಕøತಗೊಳ್ಳುವ ಸಾಧ್ಯತೆಗಳನ್ನು ಮನಗಂಡಿದ್ದ ಸಂಸದ ಕೆ.ಎಚ್.ಮುನಿಯಪ್ಪ ಅವರು ತಮ್ಮ ಪುತ್ರಿ ನಂದಿನಿ ಅವರಿಂದ ಮುಳಬಾಗಿಲು ವಿಧಾನಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಮುನಿಯಪ್ಪ ಅವರ ಪುತ್ರಿ ನಂದಿನಿ ಅವರೇ ಕಾಂಗ್ರೆಸ್‍ನ ಅಧಿಕೃತ ಅಭ್ಯರ್ಥಿಯಾಗುವ ಸಾಧ್ಯತೆಯಿದೆ.
ಈ ಮಧ್ಯೆ ಕೊತ್ನೂರು ಮಂಜು ಅವರು ಕೋಲಾರ ಸಾಮಾನ್ಯ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದರಿಂದ ಅವರು ಆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬಹುದಾಗಿದೆ.

Sri Raghav

Admin