ಶಾಸಕ ವರ್ತೂರು ಪ್ರಕಾಶ್ ವಿರುದ್ಧ ಎಫ್‍ಐಆರ್ ದಾಖಲು

Varturu-Prakash--02

ಕೋಲಾರ, ಜ.30- ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಜಮೀನನ್ನು ಕಬಳಿಸಿದ್ದಾರೆಂದು ಆರೋಪಿಸಿ ಶಾಸಕ ವರ್ತೂರು ಪ್ರಕಾಶ್ ಸೇರಿದಂತೆ ಹಲವರ ಮೇಲೆ ಬೆಗ್ಲಿ ಗ್ರಾಮದ ಚಿನ್ನಮ್ಮ ಎಂಬುವರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದು ಎಫ್‍ಐಆರ್ ಕೂಡ ದಾಖಲಾಗಿದೆ. ಕೋಲಾರ ತಾಲೂಕು ಕಸಬಾ ಹೋಬಳಿ ಚನ್ನೇನಹಳ್ಳಿ ಗ್ರಾಮದಲ್ಲಿ 1.3 ಎಕರೆ ಕುಷ್ಕಿ ಜಮೀನು ಚಿನ್ನಮ್ಮನ ವಶದಲ್ಲಿದ್ದು, ಅವರೇ ಅನುಭವಿಸುತ್ತಿದ್ದಾರೆ.  ಕೋಲಾರದ ದಿನೇಶ್‍ಬಾಬು ಎಂಬುವವರು ನಕಲಿ ದಾಖಲೆ ಮತ್ತು ನಕಲಿ ವ್ಯಕ್ತಿಯನ್ನು ಸೃಷ್ಟಿಸಿ 1.3 ಎಕರೆ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ.

ಇದಾದ ನಂತರ ಇದೇ ಜಮೀನನ್ನು ವರ್ತೂರು ಪ್ರಕಾಶ್ ಅವರ ಅಣ್ಣನ ಮಗ ರಾಕೇಶ್ ಎಂಬುವರಿಗೆ ಪರಭಾರೆ ಮಾಡಲಾಗಿತ್ತು. ಇತ್ತೀಚೆಗೆ ರಾಕೇಶ್ ಈ ಜಮೀನನ್ನು ನಾವು ಖರೀದಿ ಮಾಡಿದ್ದೇವೆ. ನೀವು ಜಾಗಬಿಟ್ಟು ಹೋಗಿ ಎಂದು ಚಿನ್ನಮ್ಮನಿಗೆ ಹೇಳಿದ್ದಾರೆ. ಹಾಗಾಗಿ ಚಿನ್ನಮ್ಮ ಗ್ರಾಮದ ಕೆಲವರೊಂದಿಗೆ ಸೇರಿ ದಾಖಲೆಗಳನ್ನು ಹುಡುಕಿದಾಗ ಜಮೀನಿನ ಮರ್ಮ ಗೊತ್ತಾಗಿದೆ.

ಕೂಡಲೇ ಶಾಸಕ ವರ್ತೂರು ಪ್ರಕಾಶ್ ಅವರೊಂದಿಗೆ ಚಿನ್ನಮ್ಮ ಈ ಸಂಬಂಧ ಮಾತನಾಡಿದ್ದಾರೆ. ಆಗ ಶಾಸಕರು ಅವಾಚ್ಯ ಪದ ಬಳಕೆ ಮಾಡಿ ಮಾತನಾಡಿದ್ದಲ್ಲದೆ ಬೆದರಿಕೆ ಹಾಕಿದ್ದಾರೆ ಎಂದು ಚಿನ್ನಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ.  ಇದೀಗ ವರ್ತೂರು ಪ್ರಕಾಶ್ ಸೇರಿದಂತೆ ಕೆಲವರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

Sri Raghav

Admin