ಶೀಘ್ರದಲ್ಲೇ ಹೆಚ್ಚಾಗಲಿದೆ ವೈದ್ಯರು ಮತ್ತು ಇತರೆ ಆಸ್ಪತ್ರೆ ಸಿಬ್ಬಂದಿಗಳ ಸಂಬಳ

Doctors-Payment

ಬೆಂಗಳೂರು,ಫೆ.21-ಶೀಘ್ರದಲ್ಲೇ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರು ಮತ್ತು ಇತರೆ ಸಿಬ್ಬಂದಿಗಳ ವೇತನ ಏರಿಕೆಯಾಗಲಿದೆ. ಕಿರಿಯ ವೈದ್ಯರು, ನರ್ಸ್, ಡೋಬಿ, ಸಹಾಯಕರು, ತಾಂತ್ರಿಕ ವಿಭಾಗ ಪ್ರಯೋಗಾಲಯ ಸಿಬ್ಬಂದಿ, ಎಕ್ಸ್‍ರೇ ಸಹಾಯಕರು, ರೇಡಿಯೋ ಗ್ರಾಫರ್ಸ್ ಸೇರಿದಂತೆ ಮತ್ತಿತರರ ವೇತನ ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದೆ.   ಇನ್ನು ಮುಂದೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯ ಕಿರಿಯ ವಿಭಾಗದ ವೈದ್ಯರ ವೇತನ ಕನಿಷ್ಠ 40 ಸಾವಿರಕ್ಕೆ ನಿಗದಿಯಾಗಲಿದೆ. ಕಾರ್ಮಿಕ ಇಲಾಖೆ ಹೊರಡಿಸಿರುವ ಅಧಿಸೂಚನೆಯಂತೆ ಕರ್ನಾಟಕ ಕನಿಷ್ಠ ವೇತನ ಕಾಯ್ದೆ 2016ರ ಪ್ರಕಾರ ಅಲೋಪತಿ, ಹೋಮಿಯೋಪತಿ ವೈದ್ಯರ ವೇತನವನ್ನು 40 ಸಾವಿರಕ್ಕೆ ಸೀಮಿತಗೊಳಿಸಲಾಗಿದೆ.

ಬಿಎಸ್ಸಿ ಪೂರ್ಣಗೊಳಿಸಿದ ನರ್ಸ್‍ಗಳ ವೇತನ 10,140 ರಿಂದ 11,180 ಪ್ರಯೋಗಾಲಯ ಸಿಬ್ಬಂದಿಯ 10,140 ರಿಂದ 11,180 ಫಾರ್ಮಸಿಸ್ಟ್‍ಗಳಿಗೆ 10140 ರಿಂದ 11180, ಲಿಫ್ಟ್ ನಿರ್ವಹಣೆ ಮಾಡುವವರಿಗೆ 9100ರಿಂದ 10,010 ಹಾಗೂ ವಾರ್ಡ್ ಸಿಬ್ಬಂದಿಗಳಿಗೆ 9100ರಿಂದ 10,010 ವೇತನ ಏರಿಕೆಯಾಗಲಿದೆ.   ಇದೇ ರೀತಿ ಆಸ್ಪತ್ರೆಯ ಸೂಪರ್‍ವೈಸರ್‍ಗಳ ವೇತನವು 9802ರಿಂದ 10,779, ಪ್ರಯೋಗಾಲಯ ತಾಂತ್ರಿಕ ಸಿಬ್ಬಂದಿ, ಎಕ್ಸ್‍ರೇ ವಿಭಾಗ ಸೇರಿದಂತೆ ಮತ್ತಿತರ ವೇತನವನ್ನು ತಿಂಗಳಿಗೆ 9100ರಿಂದ 10,010ಕ್ಕೆ ನಿಗದಿಪಡಿಸಲಾಗಿದೆ.
ಇನ್ನು ವ್ಯವಸ್ಥಾಪಕರಿಗೆ 10 ಸಾವಿರ ನಿಗದಿಪಡಿಸಿದರೆ ಡೋಬಿ, ಸಹಾಯಕರು, ಮಾಲಿಗಳಿಗೆ 9,100ರಿಂದ 10,100 ರೂ.ಗೆ ಹೆಚ್ಚಳವಾಗಲಿದೆ. ಕಳೆದ ಕೆಲ ತಿಂಗಳ ಹಿಂದೆ ಸುಪ್ರೀಂಕೋರ್ಟ್ ನೀಡಿದ ಆದೇಶದ ಪ್ರಕಾರ ಪ್ರತಿಯೊಬ್ಬ ಸಿಬ್ಬಂದಿಗೆ ಕನಿಷ್ಟ ವೇತನವನ್ನು ನಿಗದಿಪಡಿಸಬೇಕೆಂದು ಆದೇಶ ನೀಡಿತ್ತು.

ಇದರಿಂದ ಸರ್ಕಾರ ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಿದೆ. ಕೆಲವು ಖಾಸಗಿ ನರ್ಸಿಂಗ್ ಹೋಮ್‍ಗಳಲ್ಲಿ ವೈದ್ಯರು ಹಾಗೂ ಇತರೆ ಸಿಬ್ಬಂದಿಗೆ ಅತಿಕಡಿಮೆ ಸಂಬಳವನ್ನು ನೀಡುತ್ತಿದ್ದರು. ಅದರಲ್ಲೂ ನರ್ಸ್ ಹಾಗೂ ಇನ್ನು ಕೆಳಹಂತದ ಸಿಬ್ಬಂದಿಗಳಿಗೆ ಕೇವಲ 7ರಿಂದ 8 ಸಾವಿರ ರೂ. ನಿಗದಿಯಾಗಿತ್ತು.   ಅಧಿಸೂಚನೆ ಪ್ರಕಾರ ಆಸ್ಪತ್ರೆಗಳನ್ನು ವಿಭಾಗಗಳನ್ನಾಗಿ ವಿಭಾಗಿಸಲಾಗಿದೆ. ಮೊದಲ ವಲಯದಲ್ಲಿ ರಾಜಧಾನಿ ಬೆಂಗಳೂರು, 2ನೇ ವಲಯದಲ್ಲಿ ಮಹಾನಗರಪಾಲಿಕೆಗಳು ಹಾಗೂ 3ನೇ ವಲಯದಲ್ಲಿ ಇತರೆ ನಗರಗಳು ಸೇರ್ಪಡೆಯಾಗಲಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Sri Raghav

Admin