ಶುರುವಾಯ್ತು ಔರಂಗಜೇಬನ ಆಡಳಿತ : ರಾಹುಲ್ ಪಟ್ಟಾಭಿಷೇಕಕ್ಕೆ ಮೋದಿ ವ್ಯಂಗ

Rahul-Modi--02

ಧರ್ಮಾಪುರ್(ಗುಜರಾತ್),ಡಿ.4-ಕಾಂಗ್ರೆಸ್ ಯುವಕನಾಯಕ ರಾಹುಲ್ ಗಾಂಧಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಕಾಂಗ್ರೆಸ್ ಮೊಘಲ್ ಚಕ್ರವರ್ತಿ ಔರಂಗಜೇಬನ ಆಡಳಿತಕ್ಕೆ ಮೊರೆ ಹೋಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ. ತವರು ರಾಜ್ಯ ಗುಜರಾತ್‍ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಅಖಾಡಕ್ಕೆ ಧುಮುಕಿರುವ ಮೋದಿ, ಯುವ ನಾಯಕನೊಬ್ಬನಿಗೆ ಇಂದು ಪಟ್ಟಾಭಿಷೇಕ ನಡೆಯುತ್ತಿದೆ. ದೇಶದಲ್ಲಿ ಔರಂಗಜೇಬನ ಆಡಳಿತ ನಿಮಗೆ ನೆನಪಿರಬೇಕಲ್ಲವೇ ಎಂದು ಪರೋಕ್ಷವಾಗಿ ರಾಹುಲ್‍ಗಾಂಧಿಗೆ ಟಾಂಗ್ ನೀಡಿದರು.  ಇಂದು ಗುಜರಾತ್‍ನ ಧರ್ಮಾಪುರ್, ಭಾವ್‍ನಗರ, ಜುನಘಡ ಮತ್ತು ಜಾಮ್‍ನಗರದಲ್ಲಿ ಬಹಿರಂಗ ಪ್ರಚಾರ ನಡೆಸಿದ ಅವರು, ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ಹಾಗೂ ಅದರ ವಂಶ ಪಾರಂಪರ್ಯ ಆಡಳಿತವನ್ನು ವಾಚಾಮಾಗೋಚರವಾಗಿ ಟೀಕೆ ಮಾಡಿದರು.

ಯಾವ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇರುವುದಿಲ್ಲವೋ ಅಂತಹ ಕಡೆ ವಂಶಪಾರಂಪರ್ಯಕ್ಕೆ ಒತ್ತು ನೀಡುತ್ತಾರೆ. ಒಬ್ಬರ ಆರೋಪವನ್ನು ಸಹಿಸಿಕೊಳ್ಳಲು ಆಗದ ನಿಮ್ಮಲ್ಲಿ ಅದ್ಯಾವ ಪ್ರಜಾಪ್ರಭುತ್ವವಿದೆ ಎಂದು ಪ್ರಶ್ನಿಸಿದರು. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಂಡು ಬಂದಿರುವ ಕಾಂಗ್ರೆಸ್ ದೇಶಕ್ಕೆ ಮಾರಕ. ಗೊತ್ತು-ಗುರಿ ಇಲ್ಲದ ಭವಿಷ್ಯವೇ ಇಲ್ಲದ ಈ ಪಕ್ಷದಿಂದ ದೇಶಕ್ಕೆ ಒಳಿತಂತೂ ಆಗುವುದಿಲ್ಲ. ಗುಜರಾತ್‍ನಲ್ಲೂ ನಿಮಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಭವಿಷ್ಯ ನುಡಿದರು.

ನೋಟು ಅಮಾನೀಕರಣದ ನಂತರ ಕಾಂಗ್ರೆಸ್ ನನ್ನ ವಿರುದ್ಧ ಸುಳ್ಳು ಆರೋಪಗಳನ್ನೇ ಮಾಡುತ್ತಾ ಬಂದಿದೆ. ದೇಶವನ್ನು ಅತಿಹೆಚ್ಚು ಲೂಟಿ ಮಾಡಿದವರು ಈ ಪಕ್ಷದ ನಾಯಕರು. ನಾನು ಲೂಟಿ ಮಾಡುವವರನ್ನು ತಡೆದೆ ಎಂಬ ಕಾರಣಕ್ಕಾಗಿ ಈ ರೀತಿ ಟೀಕೆ ಮಾಡುತ್ತಿದೆ ಎಂದು ಹರಿಹಾಯ್ದರು. ಕಾಂಗ್ರೆಸ್ ಹೊರತುಪಡಿಸಿದರೆ ನೋಟು ಅಮಾನೀಕರಣವನ್ನು ಬೇರೆ ಯಾರೊಬ್ಬರು ವಿರೋಧಿಸಿಲ್ಲ. ದೇಶವನ್ನು 10 ವರ್ಷ ಆಡಳಿತ ನಡೆಸಿದ ಇವರು ಆಕಾಶ ಭೂಮಿಯನ್ನು ಬಿಡದೆ ಭ್ರಷ್ಟಾಚಾರ ನಡೆಸಿದರು. ನಾನು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಅಮಾನೀಕರಣಗೊಳಿಸಿದೆ. ಇದರಿಂದ ಬಡವರಿಗೆ, ದಲಿತರಿಗೆ, ಆದಿವಾಸಿಗಳು ಸೇರಿದಂತೆ ಮಧ್ಯಮ ವರ್ಗದವರಿಗೆ ಅನ್ಯಾಯವಾಯಿತೇ? ಎಂದು ನೆರೆದಿದ್ದ ಜನಸ್ತೋಮವನ್ನು ಪ್ರಶ್ನಿಸಿದರು. ಆಗ ಸಭಿಕರಿಂದ ಇಲ್ಲ ಎಂಬ ಉತ್ತರ ಬಂದಿತು.

ಬಡವರ ಪರ ಎಂದು ಯೋಚಿಸದ ಕಾಂಗ್ರೆಸ್ ಈಗ ಮೊಸಳೆ ಕಣ್ಣೀರು ಹಾಕುತ್ತಾ ಮತಯಾಚನೆ ಮಾಡುತ್ತಿದೆ. ಯಾವುದೇ ಕಾರಣಕ್ಕೂ ನೀವು ಹಸ್ತದ ಗುರುತಿಗೆ ಮತ ಹಾಕಬೇಡಿ. ಅಭಿವೃದ್ದಿಪರವಾದ ಬಿಜೆಪಿಗೆ ಮತ ಹಾಕಬೇಕೆಂದು ಪ್ರಧಾನಿ ಮನವಿ ಮಾಡಿದರು. ನಿನ್ನೆಯಿಂದ ಗುಜರಾತ್‍ನಲ್ಲಿ ಠಿಕ್ಕಾಣಿ ಹೂಡಿ ಅಬ್ಬರದ ಪ್ರಚಾರ ನಡೆಸುತ್ತಿರುವ ಮೋದಿ, ಮತದಾರರ ಮನಗೆಲ್ಲಲು ಹರಸಾಹಸ ಮಾಡುತ್ತಿದ್ದಾರೆ. ಇದೇ 9 ಮತ್ತು 14ರಂದು ಮತದಾನ ನಡೆಯಲಿದ್ದು , 18ರಂದು ಫಲಿತಾಂಶ ಪ್ರಕಟಗೊಳಲ್ಲಿದೆ. ಇದಕ್ಕಾಗಿ ಇಡೀ ದೇಶದ ಜನತೆ ಗುಜರಾತ್‍ನತ್ತ ಕಾದು ಕುಳಿತಿದೆ.

Sri Raghav

Admin