ಶೂಟೌಟ್ : ಧನಬಾದ್‍ ಮಾಜಿ ಉಪ ಮೇಯರ್ ನೀರಜ್ ಸಿಂಗ್ ಸೇರಿ ನಾಲ್ವರ ಭೀಕರ ಹತ್ಯೆ

Spread the love

Neeraj-Singh--01

ಧನ್‍ಬಾದ್, ಮಾ.22-ಮೋಟರ್ ಸೈಕಲ್‍ನಲ್ಲಿ ಬಂದ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಮಾಜಿ ಉಪ ಮೇಯರ್ ನೀರಜ್ ಸಿಂಗ್ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಭೀಕರ ಘಟನೆ ನಿನ್ನೆ ರಾತ್ರಿ ಜಾರ್ಖಂಡ್‍ನ ಧನಬಾದ್‍ನಲ್ಲಿ ನಡೆದಿದೆ. ಈ ಹತ್ಯಾಕಾಂಡದ ನಂತರ ನಗರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ತಲೆದೋರಿದ್ದು, ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.   ಧನ್‍ಬಾದ್ ಮಾಜಿ ಉಪ ಮೇಯರ್ ನೀರಜ್ ಸಿಂಗ್, ಅವರ ಸ್ನೇಹಿತ ಅಶೋಕ್ ಯಾದವ್, ಕಾರು ಚಾಲಕ ಲಾಲ್ಟು ಮತ್ತು ಅಂಗರಕ್ಷಕ ಸಂತೋಷ್ ತಿವಾರಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಆರ್.ಕೆ. ಮಾಲೀಕ್ ತಿಳಿಸಿದ್ದಾರೆ.

ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ ಈ ನಾಲ್ವರನ್ನು ಧನ್‍ಬಾದ್‍ನ ಸೆಂಟ್ರಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಪಡೆಯುತ್ತಿರುವಾಗಲೇ ಇವರು ಮೃತಪಟ್ಟರು.   ಧನ್‍ಬಾದ್‍ನ ರಘುಕುಲ್‍ನಲ್ಲಿರುವ ನೀರಜ್ ಸಿಂಗ್ ಅವರ ಮನೆ ಸಮೀಪವೇ ಈ ಕಗ್ಗೊಲೆಗಳು ನಡೆದಿವೆ. ಸ್ಕಾರ್ಪಿಯೋ ವಾಹನದಲ್ಲಿ ಸಿಂಗ್ ಮತ್ತು ಮೂವರು ಮನೆಗೆ ಹಿಂದಿರುಗುತ್ತಿದ್ದರು. ಸ್ಪೀಡ್‍ಬ್ರೇಕರ್ ಬಳಿ ಸ್ಕಾರ್ಪಿಯೋ ನಿಧಾನವಾಗುತ್ತಿದ್ದಂತೆ ಮೋಟಾರ್ ಬೈಕ್‍ನಲ್ಲಿ ಬಂದ ಯಮರೂಪಿ ಹಂತಕರು ಎಕೆ-47 ಬಂದೂಕದಿಂದ ಮನಬಂದಂತೆ ಗುಂಡು ಹಾರಿಸಿ ಪರಾರಿಯಾದರು ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವಾಹನದ ಮುಂಭಾಗದಲ್ಲಿ ಕುಳಿತಿದ್ದ ನೀರಜ್ ಸಿಂಗ್ ದೇಹವನ್ನು 17 ಬುಲೆಟ್‍ಗಳು ಛಿದ್ರಗೊಳಿಸಿವೆ. ಕಾರಿನಲ್ಲಿದ್ದ ಯಾದವ್, ಲಾಲ್ಟು ಮತ್ತು ತಿವಾರಿ ಅವರಿಗೂ ಅನೇಕ ಗುಂಡುಗಳು ತಗುಲಿವೆ. ಸ್ಥಳದಲ್ಲಿ ಎಕೆ-47 ಬಂದೂಕದ 50 ಬುಲೆಟ್ ಷೆಲ್‍ಗಳು ಪತ್ತೆಯಾಗಿವೆ.   ಈ ಕೃತ್ಯದ ಹಿಂದೆ ಕೌಟುಂಬಿಕ ಕಲಹ ಕಾರಣವೆಂದು ಶಂಕಿಸಲಾಗಿದೆ. ಬಿಜೆಪಿ ಶಾಸಕ ಸಂಜೀವ್ ಸಿಂಗ್ ಮತ್ತು ಮಾಜಿ ಉಪ ಮೇಯರ್ ನೀರಜ್ ಸಿಂಗ್ ನಡುವೆ ದ್ವೇಷವಿತ್ತು ಎಂದು ಹೇಳಲಾಗಿದ್ದು, ಆ ನಿಟ್ಟಿನಲ್ಲೂ ತನಿಖೆ ಮುಂದುವರಿದಿದೆ.   ಸಿನಿಮೀಯ ರೀತಿಯಲ್ಲಿ ನಡೆದ ನಾಲ್ಕು ಕೊಲೆಗಳಿಂದ ಧನಬಾದ್ ನಗರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಹಂತಕರ ಪತ್ತೆಗೆ ವ್ಯಾಪಕ ಬಲೆ ಬೀಸಲಾಗಿದೆ.

ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಜಾರ್ಖಂಡ್ ಮುಖ್ಯಮಂತ್ರಿ ರಘುವೀರ್ ದಾಸ್, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin