ಶೌಚಾಲಯದ ಬಾಗಿಲು ಹಾಕಿಕೊಂಡು ಮೂತ್ರವಿಸರ್ಜನೆ ಮಾಡು ಎಂದಿದ್ದಕ್ಕೆ ಕೊಂದೇಬಿಟ್ಟ..!

Murder-01

ಬೆಂಗಳೂರು, ಮಾ.24- ಶೌಚಾಲಯದ ಬಾಗಿಲು ಹಾಕಿಕೊಳ್ಳುವಂತೆ ಹೇಳಿದ್ದಕ್ಕೆ ಜಗಳ ತೆಗೆದು ಒಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಮತ್ತೊಬ್ಬನಿಗೆ ಗಾಯಗೊಳಿಸಿರುವ ಘಟನೆ ಅಂಜನಾಗರದಲ್ಲಿರುವ ದೇವರಾಜ ಅರಸು ಹಾಸ್ಟೆಲ್‍ನಲ್ಲಿ ನಡೆದಿದೆ. ಮಾಗಡಿ ರಸ್ತೆ ಅಂಜನಾನಗರ ಬಿಇಎಲ್‍ಲೇಔಟ್‍ನ ಒಂದನೇ ಹಂತದಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‍ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ರಾತ್ರಿ 10.30ರ ವೇಳೆ ಈ ಘಟನೆ ನಡೆದಿದೆ.
ಸೋಲೂರಿನವನಾದ ರೋಹಿತ್ (22) ಮೃತಪಟ್ಟ ವಿದ್ಯಾರ್ಥಿ, ಈತನ ಸ್ನೇಹಿತ ಅಮರೇಶ್ ಗಾಯಗೊಂಡಿದ್ದಾನೆ.

ಮೃತ ರೋಹಿತ್ ಹಾಗೂ ಗಾಯಗೊಂಡಿರುವ ಅಮರೇಶ್ ಇಬ್ಬರೂ ಈಸ್ಟ್‍ವೆಸ್ಟ್ ಇಂಜನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಾ ಹಾಸ್ಟೆಲ್‍ನಲ್ಲಿ ನೆಲೆಸಿದ್ದಾರೆ.  ವಿಜಯನಗರ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ರವೀಶ್ ಸಹ ಇದೇ ಹಾಸ್ಟೆಲ್‍ನಲ್ಲಿ ಇದ್ದು, ಪ್ರತೀ ದಿನ ರಾತ್ರಿ ತಡವಾಗಿ ಬರುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.  ನಿನ್ನೆ ರಾತ್ರಿ ಕುಡಿದು ಬಂದ ರವೀಶ್ ಶೌಚಾಲಯದ ಬಾಗಿಲು ಹಾಕದೆ ಮೂತ್ರವಿಸರ್ಜನೆ ಮಾಡುವಾಗ ರೋಹಿತ್ ಹಾಗೂ ಅಮರೇಶ್ ಬಾಗಿಲು ಹಾಕಿಕೊಳ್ಳುವಂತೆ ಹೇಳಿದ್ದಾರೆ.

ಇದರಿಂದ ಮಾತಿನ ಚಕಮಕಿ ನಡೆಸಿದ ರವೀಶ್ ಜಗಳ ತೆಗೆದು ತನ್ನ ಕೊಠಡಿಗೆ ಹೋಗಿ ಚಾಕು ತಂದು ರೋಹಿತ್‍ನ ಕುತ್ತಿಗೆಗೆ ಇರಿದಿದ್ದಾನೆ. ತಡೆಯಲು ಬಂದ ಅಮರೇಶ್‍ನ ಹಣೆ ಹಾಗೂ ಕೈಗೂ ಇರಿದಿದ್ದಾನೆ.  ವಿದ್ಯಾರ್ಥಿಗಳಿಂದ ವಾರ್ಡ್‍ನ್‍ಗೆ ವಿಷಯ ತಿಳಿದು ಗಾಯಗೊಂಡ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತೀವ್ರರಕ್ತಸ್ರಾವಗೊಂಡಿದ್ದ ರೋಹಿತ್‍ನನ್ನು ವೈದ್ಯರ ಸಲಹೆ ಮೇರೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದು, ಮಾರ್ಗಮಧ್ಯೆ ಆತ ಮೃತಪಟ್ಟಿದ್ದಾನೆ.  ವಾರ್ಡ್‍ನ್ ಕೇಶವಗೌಡ ಸಿ.ಪಾಟೀಲ್ ಅವರು ಇನ್‍ಚಾರ್ಜ್ ವಾರ್ಡ್‍ನ್‍ಗೆ ವಿಷಯ ತಿಳಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಬ್ಯಾಡರಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ರವೀಶ್‍ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin