ಶ್ರೀನಗರ ಉಪ ಚುನಾವಣೆ ವೇಳೆ ಹಿಂಸಾಚಾರ, ಗೋಲಿಬಾರ್ : ಇಬ್ಬರ ಬಲಿ, ಅನೇಕರಿಗೆ ಗಾಯ

Jammu-Kashmir

ಶ್ರೀನಗರ/ನವದೆಹಲಿ, ಏ.9-ಉಗ್ರರ ಉಪಟಳದ ಆತಂಕದ ನಡುವೆಯೂ ಕಾಶ್ಮೀರದ ರಾಜಧಾನಿ ಶ್ರೀನಗರದ ಪ್ರತಿಷ್ಠಿತ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಇಂದು ಮತದಾನದ ವೇಳೆ ನಿರೀಕ್ಷೆಯಂತೆ ಹಿಂಸಾಚಾರ ಭುಗಿಲೆದ್ದಿದೆ. ಪ್ರತಿಭಟನಾಕಾರರು ಮತ್ತು ಭದ್ರತಾಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ. ಈ ಗಲಭೆಯಿಂದಾಗಿ ಬಹುತೇಕ ಮತಗಟ್ಟೆಗಳಲ್ಲಿ ಮತದಾನ ಕ್ಷೀಣಿಸಲು ಕಾರಣವಾಗಿದೆ. ಜನರು ತಮ್ಮ ಹಕ್ಕುಗಳನ್ನು ಚಲಾಯಿಸಲು ಅಡ್ಡಿ ಉಂಟು ಮಾಡುವುದಾಗಿ ಪ್ರತ್ಯೇಕತಾವಾದಿಗಳು ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿತ್ತು. ಆದಾಗ್ಯೂ, ಮಧ್ಯ ಕಾಶ್ಮೀರದ ಬಗ್ದಮ್ ಮತ್ತು ಗುಂದೇರ್‍ಬಲ್ ಜಿಲ್ಲೆಗಳ ಕೆಲವು ಮತಗಟ್ಟೆಗಳ ಬಳಿ ಮತದಾನದ ಸಂದರ್ಭದಲ್ಲಿ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿ ಹಿಂಸಾಚಾರಕ್ಕೆ ಇಳಿದರು.

ಶ್ರೀನಗರ ಲೋಕಸಭಾ ಕ್ಷೇತ್ರದ ಚಾರಾರ್-ಎ-ಷರೀಫ್ ಪ್ರದೇಶದ ಪಖಾರ್‍ಪೋರ್‍ನಲ್ಲಿ ಕಲ್ಲು ತೂರಾಟದಲ್ಲಿ ತೊಡಗಿದ್ದ ಉದ್ರಿಕ್ತ ಗುಂಪನ್ನು ಚದುರಿಸಲು ಬಿಎಸ್‍ಎಫ್ ಗೋಲಿಬಾರ್ ನಡೆಸಿದರು. ಈ ಘಟನೆಯಲ್ಲಿ ಒಬ್ಬ ಯುವಕ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ.   ಮಧ್ಯ ಕಾಶ್ಮೀರದ ಹಿಂಸಾಚಾರದಲ್ಲಿ ತೊಡಗಿದ್ದ ಉದ್ರಿಕ್ತರನ್ನು ಹತ್ತಿಕ್ಕಲು ಪೊಲೀಸರು ನಡೆಸಿದ ಬಲ ಪ್ರಯೋಗ ಮತ್ತು ಗೋಲಿಬಾರ್‍ನಲ್ಲಿ ಮತ್ತೊಬ್ಬ ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ.

ಹಿಂಸಾಚಾರ ಮತ್ತು ಗೋಲಿಬಾರ್ ನಂತರ ಈ ಕ್ಷೇತ್ರದಲ್ಲಿ ಪರಿಸ್ಥಿತಿ ಪ್ರಕ್ಚುಬ್ಧವಾಗಿದ್ದು, ಹಿಂಸಾಕೃತ್ಯಗಳು ಮರುಕಳಿಸದಂತೆ ಭಾರೀ ಭದ್ರತಾ ಏರ್ಪಾಡುಗಳನ್ನು ಮಾಡಲಾಗಿದೆ. ಈ ಘಟನೆ ನಂತರ ಅನೇಕ ಮತಗಟ್ಟೆಗಳಲ್ಲಿ ಮತದಾನ ಪ್ರಮಾಣ ಗಣನೀಯವಾಗಿ ಕಡಿವೆಯಾಗಿದೆ.   ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರದ ಮಾಜಿ ಸಚಿವ ಫಾರೂಖ್ ಅಬ್ದುಲ್ಲಾ ಕಣದಲ್ಲಿರುವ ಸ್ಪರ್ಧಿಗಳಲ್ಲಿ ಪ್ರಮುಖರಾಗಿದ್ದಾರೆ.  ಇದೇ ವೇಳೆ ಮಧ್ಯಪ್ರದೇಶದ ಭೀಂಡ್ ಜಿಲ್ಲೆಯ ಅಟೆರ್ ವಿಧಾನಸಭಾ ಕ್ಷೇತ್ರದಲ್ಲೂ ಹಿಂಸಾಚಾರ ಉಲ್ಬಣಗೊಂಡು ಮತಗಟ್ಟೆಗಳ ಬಳಿ ದುಷ್ಕರ್ಮಿಗಳು ಹಿಂಚಾಚಾರಕ್ಕೆ ಇಳಿದು ಗುಂಡು ಹಾರಿಸಿದ್ದಾರೆ. ಈ ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದಾರೆ. ಅನೇಕ ವಾಹನಗಳು ಧ್ವಂಸಗೊಂಡಿವೆ.   ಉಮಾರಿಯಾ ಜಿಲ್ಲೆಯ ಬಾಂಧವ್‍ಘರ್ ವಿಧಾನಸಭೆಗೆ ನಡೆದ ಮತದಾನ ಶಾಂತಿಯುತವಾಗಿತ್ತು.
ದೆಹಲಿ ವರದಿ :

ಕೇಂದ್ರಾಡಳಿತ ಪ್ರದೇಶ ನವದೆಹಲಿ ಸೇರಿದಂತೆ ಕೆಲವು ರಾಜ್ಯಗಳಲ್ಲಿ ವಿಧಾನಸಭೆಗಳಿಗೆ ಇಂದು ಭಾರೀ ಭದ್ರತೆ ನಡುವೆ ಉಪ ಚುನಾವಣೆ ನಡೆಯಿತು. ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಉಳಿದೆಡೆ ಮತದಾನ ಶಾಂತಿಯುತವಾಗಿತ್ತು.  ದೆಹಲಿಯ ರಜೌರಿ ಗಾರ್ಡನ್ ವಿಧಾನಸಭೆ ಉಪ ಚುನಾವಣೆಗೆ ಇಂದು ಮುಂಜಾನೆ 8 ಗಂಟೆಯಿಂದಲೇ 166 ಮತಗಟ್ಟೆಗಳಲ್ಲಿ ಬಿರುಸಿನ ಮತದಾನವಾಗಿದೆ. ಅಮ್ ಆದ್ಮಿ ಪಕ್ಷದ ಜರ್ನೈಲ್ ಸಿಂಗ್ ಪಂಜÁಬ್ ವಿಧಾನಸಭೆ ಚುನಾವಣೆಗಳಲ್ಲಿ ಸ್ಪರ್ಧಿಸಲು ರಾಜೀನಾಮೆ ನೀಡಿದ್ದರಿಂದ ಈ ಕೇತ್ರದಲ್ಲಿ ಉಪ ಚುನಾವಣೆ ನಡೆದಿದೆ. ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಈ ಕ್ಷೇತ್ರದಲ್ಲಿ ಮತದಾರರ ಪರಿಶೀಲನಾ ಪತ್ರ ಪರಿಶೀಲನೆ ವಿಧಾನದ(ವಿವಿಪಿಎಟಿಗಳು) ಜೊತೆ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂಗಳು) ಬಳಸಲಾಗಿದೆ.
ಜೈಪುರ ವರದಿ:

ಮರುಭೂಮಿ ರಾಜ್ಯ ಧೋಲ್‍ಪುರ್ ವಿದಾನಸಭಾ ಕ್ಷೇತ್ರದಲ್ಲಿ ಮತದಾನ ಶಾಂತಿಯುತವಾಗಿತ್ತು.

ಗುವಾಹತಿ ವರದಿ:

ಈಶಾನ ರಾಜ್ಯ ಅಸ್ಸಾಂನ ಧೀಮಜಿ ವಿಧಾನಸಭೆ ಕ್ಷೇತ್ರಕ್ಕೆ ಇಂದು ಬೆಳಗ್ಗೆಯಿಂದಲೇ ಚುರುಕಿನ ಮತದಾನ ನಡೆಯಿತು. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿಯ ಈ ಉಪ ಚುನಾವಣೆ ಫಲಿತಾಂಶ ಕುತೂಹಲ ಕೆರಳಿಸಿದೆ.
ಶಿಮ್ಲಾ ವರದಿ:

ಹಿಮಾಚಲ ಪ್ರದೇಶದ ಭೋರಂಜಿ ವಿಧಾನಸಭಾ ಕ್ಷೇತ್ರಕ್ಕೆ ವ್ಯಾಪಕ ಬಂದೋಬಸ್ತ್ ನಡುವೆ ಮತದಾನವಾಗಿದೆ. ಪಶ್ಚಿಮ ಬಂಗಾಳದ ಕಾಂಠಿ ಮತ್ತು ಜಾರ್ಖಂಡ್‍ನ ಫಂದ್ ವಿಧಾನಸಭಾ ಕ್ಷೇತ್ರಗಳಿಗೂ ಸಹ ಇಂದು ಉಪಚುನಾವಣೆ ನಡೆದು ಮತದಾರರು ತಮ್ಮ ಹಕ್ಕುಗಳನ್ನು ಚಲಾಯಿಸಿದ್ದಾರೆ.

ಕರ್ನಾಟಕದ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಲ್ಲೂ ಉಪ ಚುನಾವಣೆ ನಡೆದು ಮತದಾನ ಶಾಂತಿಯುತವಾಗಿತ್ತು.
9 ರಾಜ್ಯಗಳ 10 ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಏ.13ರಂದು ಪ್ರಕಟಗೊಳ್ಳಲಿದೆ.

[ ಇದನ್ನೂ ಓದಿ :  ನಂಜನಗೂಡು-ಗುಂಡ್ಲುಪೇಟೆ ಮಿನಿ ಫೈಟ್ (Live Updates) ]

Sri Raghav

Admin