ಶ್ರೀನಾಥ್ ಅರವಿಂದ್ ವೇಗದ ಅಸ್ತ್ರ : ರನ್ ಗಳಿಸಲು ತಿಣುಕಾಡಿದ ಅಸ್ಸಾಂ

Spread the love

Srinath-Arvind

ಮುಂಬೈ, ಅ.27– ಕರ್ನಾಟಕದ ವೇಗದ ಬೌಲರ್ ಶ್ರೀನಾಥ್ ಅರವಿಂದ್ ಅವರ ವೇಗದ ಅಸ್ತ್ರದ ಎದುರು ತಿಣುಕಾಡುತ್ತಿರುವ ಅಸ್ಸಾಂ ತಂಡವು ಭೋಜನ ವಿರಾಮದ ವೇಳೆಗೆ 113 ರನ್‍ಗಳಿಗೆ 4 ವಿಕೆಟ್‍ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇಂದಿನಿಂದ ಆರಂಭಗೊಂಡಿರುವ ಅಸ್ಸಾಂ ವಿರುದ್ಧದ ರಣಜಿ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡ ನಾಯಕ ಗೋಕುಲ್ ಶರ್ಮಾಗೆ ಆರಂಭದಲ್ಲೇ ಸಂಕಷ್ಟ ಎದುರಾಯಿತು.

ಅರವಿಂದ್ ಬೌಲಿಂಗ್ ಚಮತ್ಕಾರ:

ನವದೆಹಲಿ ವಿರುದ್ಧದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಶ್ರೀನಾಥ್ ಅರವಿಂದ್ ಅಸ್ಸಾಂ ವಿರುದ್ಧವೂ ಆರಂಭದಿಂದಲೂ ಆ ತಂಡದ ಬ್ಯಾಟ್ಸ್‍ಮನ್‍ಗಳನ್ನು ಕಾಡಿದರು.
ಪಂದ್ಯದ 2 ಓವರ್ ಮಾಡಿದ ಶ್ರೀನಾಥ್ ಅರವಿಂದ್ 3ನೆ ಎಸೆತದಲ್ಲೇ ರಾಹುಲ್ ಹಜಾರಿಕಾ (4)ರನ್ನು ಪೆವಿಲಿಯನ್‍ಗೆ ಅಟ್ಟಿದರೆ 5.5ನೆ ಓವರ್‍ನಲ್ಲಿ ಮತ್ತೊಬ್ಬ ಆರಂಭಿಕ ಆಟಗಾರ ರಿಶಾವ್ ದಾಸ್ ಅವರು ರಾಬಿನ್ ಉತ್ತಪ್ಪ ಹಿಡಿದ ಅದ್ಭುತ ಕ್ಯಾಚ್ ಬಲಿಯಾದರು. ನಂತರ ಬಂದ ನಾಯಕ ಗೋಕುಲ್ ಶರ್ಮಾ (8ರನ್) ಬೌಂಡರಿ ಬಾರಿಸುವ ಮೂಲಕ ದೊಡ್ಡ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದರೂ ಅರವಿಂದ್ ಶ್ರೀನಾಥ್‍ರ ಬೌಲಿಂಗ್‍ನಲ್ಲಿ ಸಮರ್ಥ್‍ಗೆ ಕ್ಯಾಚ್ ನೀಡಿದರು.

ಅಮಿತ್- ಕಾರ್ತಿಕ್ ಬೊಂಬಾಟ್ ಬ್ಯಾಟಿಂಗ್:

16 ರನ್‍ಗಳಾಗುವಷ್ಟರಲ್ಲಿ ಪ್ರಮುಖ 3 ವಿಕೆಟ್‍ಗಳನ್ನು ಕಳೆದುಕೊಂಡು ಅಸ್ಸಾಂ ಸಂಕಷ್ಟಕ್ಕೆ ಸಿಲುಕಿದ್ದಾಗ ಕ್ರೀಸ್‍ಗೆ ಇಳಿದ ವಿಕೆಟ್ ಕೀಪರ್ ಅರುಣ್‍ಕಾರ್ತಿಕ್ , ಅಮಿತ್‍ವರ್ಮಾ ಜೊತೆಗೂಡಿ ಕರ್ನಾಟಕದ ಬೌಲರನ್ನು ಕಾಡಿದರು. ಈ ಜೋಡಿಯು 4ನೆ ವಿಕೆಟ್‍ಗೆ 96 ರನ್‍ಗಳನ್ನು ಕಲೆ ಹಾಕಿದ್ದಾಗ ಉತ್ತಮ ಬೌಲಿಂಗ್ ಲಯದಿಂದ ಶ್ರೀನಾಥ್ ಅರವಿಂದ್ ಎಸೆದ ಚೆಂಡಿನಲ್ಲಿ ಅರುಣ್ ಕಾರ್ತಿಕ್ (35 ರನ್,4 ಬೌಂಡರಿ, 1 ಸಿಕ್ಸರ್) ಕ್ಲೀನ್ ಬೋಲ್ಡ್ ಆದರು. ಭೋಜನ ವಿರಾಮದ ವೇಳೆಗೆ ಅಸ್ಸಾಂ 4 ವಿಕೆಟ್‍ಗಳನ್ನು ಕಳೆದುಕೊಂಡಿದ್ದು 113 ರನ್‍ಗಳನ್ನು ಗಳಿಸಿತ್ತು. ಅಮಿತ್‍ವರ್ಮಾ (39 ರನ್, 7 ಬೌಂಡರಿ) ಹಾಗೂ ತರ್‍ಜಿಂದರ್ ಸಿಂಗ್ (15 ರನ್, 3 ಬೌಂಡರಿ) ಕ್ರೀಸ್‍ನಲ್ಲಿದ್ದರು.

► Follow us on –  Facebook / Twitter  / Google+

Sri Raghav

Admin