ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರುವುದು ಪಕ್ಕಾ, ಆದರೆ ಈಗಲ್ಲ
ಬೆಂಗಳೂರು, ಅ.15-ಶಾಸಕ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ಸೋಮವಾರ ರಾಜೀನಾಮೆ ನೀಡಲಿರುವ ಮಾಜಿ ಸಚಿವ ಹಾಗೂ ಪ್ರಭಾವಿ ದಲಿತ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್ ಬಿಜೆಪಿಯತ್ತ ಒಲವು ತೋರಿದ್ದಾರೆ. ಸೋಮವಾರ ಬೆಳಗ್ಗೆ 11.30ಕ್ಕೆ ವಿಧಾನಸಭೆಯ ಸ್ಪೀಕರ್ ಕೆ.ಬಿ.ಕೋಳಿವಾಡ ಅವರನ್ನು ಖುದ್ದು ಭೇಟಿ ಮಾಡಲಿರುವ ಶ್ರೀನಿವಾಸ್ ಪ್ರಸಾದ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಮೂಲಕ ಬಹು ವರ್ಷಗಳ ಕಾಂಗ್ರೆಸ್ ಸಂಬಂಧಕ್ಕೆ ಅಧಿಕೃತವಾಗಿ ಗುಡ್ಬೈ ಹೇಳಲಿದ್ದಾರೆ. ರಾಜೀನಾಮೆ ನೀಡಿದ ತಕ್ಷಣವೇ ಶ್ರೀನಿವಾಸ್ ಪ್ರಸಾದ್ ವಿದ್ಯುಕ್ತವಾಗಿ ಬಿಜೆಪಿ ಸೇರುವುದಿಲ್ಲ. ಉಪಚುನಾವಣೆ ನಡೆಸಲು 6 ತಿಂಗಳ ಕಾಲ ಅವಕಾಶವಿರುತ್ತದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಅವರು ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯಕ್ಕೆ ತಮ್ಮ ರಾಜಕೀಯ ಕರ್ಮಭೂಮಿ ಎನಿಸಿದ ಮೈಸೂರು ಜಿಲ್ಲೆಯ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲೇ ವಾಸ್ತವ್ಯ ಹೂಡಲಿರುವ ಪ್ರಸಾದ್ ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳು ಸೇರಿದಂತೆ ಎಲ್ಲ ಸಮುದಾಯದ ಸಲಹೆ ಪಡೆಯಲಿದ್ದಾರೆ. ಕÉ್ಷೀತ್ರದಲ್ಲಿ ಬೀಡು ಬಿಡುವ ಅವರು ತಮಗೆ ಕಾಂಗ್ರೆಸ್ನಿಂದ ಅದರಲ್ಲೂ ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ರೀತಿ ಅನ್ಯಾಯ ಮಾಡಿದರು. ರಾಜೀನಾಮೆ ನೀಡುವ ಅನಿವಾರ್ಯತೆ ಏಕೆ ಉಂಟಾಯಿತು ಎಂಬುದನ್ನು ಕ್ಷೇತ್ರದ ಮತದಾರರ ಬಳಿ ನೋವನ್ನು ಹಂಚಿಕೊಳ್ಳಲಿದ್ದಾರೆ.
ಬಿಜೆಪಿಯತ್ತ ಒಲವು:
ಇನ್ನು ಕಾಂಗ್ರೆಸ್ ಸಂಬಂಧ ಕಳೆದುಕೊಳ್ಳಲಿರುವ ಶ್ರೀನಿವಾಸ್ ಪ್ರಸಾದ್ ಬಹುತೇಕ ಬಿಜೆಪಿಯತ್ತ ಒಲವು ತೋರಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿ ಅವರು ಸೇವೆ ಸಲ್ಲಿಸಿದ್ದರು. ಅಂದು ವಾಜಪೇಯಿ ಸಂಪುಟದಲ್ಲಿದ್ದು ಈಗ ನರೇಂದ್ರ ಮೋದಿ ಸಂಪುಟದಲ್ಲೂ ಪ್ರಭಾವಿ ಸಚಿವರೊಬ್ಬರು ಪಕ್ಷ ಸೇರ್ಪಡೆಯಾಗುವಂತೆ ಮನವಿ ಮಾಡಿಕೊಂಡಿದ್ದಾರೆ. ಪಕ್ಷಕ್ಕೆ ಬಂದರೆ ನಿಮ್ಮ ಸ್ಥಾನಮಾನಕ್ಕೆ ಸೂಕ್ತವಾದ ಹುದ್ದೆ ನೀಡಲಾಗುವುದು. ನಿಮ್ಮಂತಹ ಹಿರಿಯ ಸಜ್ಜನ ರಾಜಕಾರಣಿಗಳ ಸೇವೆ ಪಕ್ಷಕ್ಕೆ ಅಗತ್ಯವಿದೆ. ನೀವು ಎನ್ಡಿಎ ಅವಧಿಯಲ್ಲಿ ಸಚಿವರಾಗಿ ಹೇಗೆ ಕೆಲಸ ಮಾಡಿದ್ದೀರಿ ಎಂಬುದನ್ನು ಅರಿತಿದ್ದೇನೆ. ಪಕ್ಷಕ್ಕೆ ಬಂದರೆ ನಮಗೂ ಹೆಚ್ಚಿನ ಬಲ ಬರುತ್ತದೆ ಎಂದು ಕೋರಿಕೊಂಡಿದ್ದಾರೆ.
ಇದನ್ನು ಸಕರಾತ್ಮಕವಾಗಿ ತೆಗೆದುಕೊಂಡಿರುವ ಶ್ರೀನಿವಾಸ್ ಪ್ರಸಾದ್ ಬಿಜೆಪಿಯತ್ತ ಒಲವು ತೋರಿದ್ದಾರೆ. ಅಲ್ಲದೆ ತಾವು ಪ್ರತಿನಿಧಿಸುವ ನಂಜನಗೂಡು ಕ್ಷೇತ್ರದಲ್ಲಿ ಬಿಜೆಪಿ ಸಾಕಷ್ಟು ಪ್ರಬಲ ಸಂಘಟನೆ ಹೊಂದಿದೆ.
ಸಾಮಾನ್ಯವಾಗಿ ಉಪಚುನಾವಣೆ ನಡೆದರೆ ಆಡಳಿತಾರೂಢ ಪಕ್ಷಕ್ಕೆ ಇದು ಸವಾಲಾಗಿ ಪರಿಣಮಿಸುತ್ತದೆ. ಶತಾಗತಾಯ ಗೆಲ್ಲಲು ಏನೇನು ತಂತ್ರ ಹೆಣೆಯಬೇಕೊ ಅದೆಲ್ಲವನ್ನು ಮಾಡುತ್ತದೆ. ಹಣ ಬಲ, ತೋಳ್ಬಲ, ಅಧಿಕಾರ ದುರುಪಯೋಗ ಸೇರಿದಂತೆ ಇಡೀ ವ್ಯವಸ್ಥೆಯೇ ಸರ್ಕಾರದ ಕೈಯಲ್ಲಿರುತ್ತದೆ. ಇದೆಲ್ಲವನ್ನೂ ಗಮನಿಸಿರುವ ಶ್ರೀನಿವಾಸ್ ಪ್ರಸಾದ್ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಸೆಡ್ಡು ಹೊಡೆಯಬೇಕಾದರೆ ಬಿಜೆಪಿಯೇ ಅನಿವಾರ್ಯ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಇನ್ನು ಜೆಡಿಎಸ್ ಕ್ಷೇತ್ರದಲ್ಲಿ ಅಷ್ಟು ಪ್ರಭಾವಿ ಹೊಂದದಿರುವುದು ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಭಾವ ಹೆಚ್ಚಿರುವ ಕಾರಣ ಬಿಜೆಪಿ ಆಯ್ಕೆಯೇ ಸರಿಯಾದ ತೀರ್ಮಾನ ಎಂಬುದು ಅವರ ಲೆಕ್ಕಾಚಾರ.
ಈಗಾಗಲೇ ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ , ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕರು ಪ್ರಸಾದ್ ಅವರನ್ನು ಮನವೊಲಿಸಿದ್ದಾರೆ. ರಾಜೀನಾಮೆ ನೀಡಿದ ಬಳಿಕ ಕಾರ್ಯಕರ್ತರ ಜೊತೆ ಚರ್ಚಿಸಿ ತಮ್ಮ ಅಂತಿಮ ನಿರ್ಧಾರವನ್ನು ಪ್ರಕಟಿಸುವುದಾಗಿ ಪ್ರಸಾದ್ ಹೇಳಿದ್ದಾರೆ.
► Follow us on – Facebook / Twitter / Google+