ಷೇರುಪೇಟೆ ವಹಿವಾಟಿನಲ್ಲಿ ಸರ್ವಕಾಲಿಕ ದಾಖಲೆ
ಮುಂಬೈ, ಅ.27-ಷೇರುಪೇಟೆ ಸಂವೇದಿ ಸೂಚ್ಯಂಕ(ಬಿಎಸ್ಇ) ಇಂದಿನ ವಹಿವಾಟಿನಲ್ಲಿ 33,270.62 ಅಂಶಗಳ ಏರಿಕೆ ಕಂಡಿದ್ದು, ಇದು ಸರ್ವಕಾಲಿಕ ದಾಖಲೆಯಾಗಿದೆ. ಕಳೆದ ಬುಧವಾರವಷ್ಟೇ ವಹಿವಾಟಿನಲ್ಲಿ ಮೊದಲ ಬಾರಿಗೆ 33,000 ಗಡಿ ದಾಟಿ ಹೊಸ ದಾಖಲೆ ಸೃಷ್ಟಿಯಾಗಿತ್ತು(33.042).
ದೇಶಿ ಅರ್ಥ ವ್ಯವಸ್ಥೆಗೆ ಚೇತರಿಕೆ ನೀಡಲು ಕೇಂದ್ರ ಸರ್ಕಾರ ಪ್ರಕಟಿಸಿರುವ 9 ಲಕ್ಷ ಕೋಟಿ ರೂ.ಗಳ ಕೊಡುಗೆಯು ಷೇರುಪೇಟೆಯಲ್ಲಿಯೂ ಗಮನಾರ್ಹ ಪ್ರಮಾಣದಲ್ಲಿ ಖರೀದಿ ಉತ್ಸಾಹ ಮೂಡಿಸಿದೆ.
ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ 10.366 ಅಂಶಗಳಲ್ಲಿ ದಿನದ ವಹಿವಾಟು ಆರಂಭಿಸಿದ್ದು, ಹೊಸ ಎತ್ತರ ತಲುಪಿದೆ. ದಿನದ ವಹಿವಾಟಿನಲ್ಲಿ ಗಣನೀಯ ಏರಿಕೆ ಕಾಣುತ್ತಿರುವ ಸೂಚ್ಯಂಕವು ಈ ವರ್ಷದ ಮೇ 25ರ ನಂತರ ಮೊದಲ ಬಾರಿಗೆ ದಿನದ ಗರಿಷ್ಠ ಏರಿಕೆ (33,042 ಅಂಶಗಳು) ದಾಖಲಿಸಿತ್ತು. ಸೂಚ್ಯಂಕವು ಈ ತಿಂಗಳ 16ರಂದು 32,634 ಅಂಶಗಳವರೆಗೆ ಏರಿಕೆ ಕಂಡಿತ್ತು. ದ್ವಿತೀಯ ತ್ರೈಮಾಸಿಕದಲ್ಲಿ ಉದ್ಯಮ ಸಂಸ್ಥೆಗಳ ಹಣಕಾಸು ಪ್ರಗತಿಯು ನಿರೀಕ್ಷೆಗಿಂತ ಉತ್ತಮವಾಗಿರುವುದು ಪೇಟೆಯಲ್ಲಿ ಖರೀದಿ ಉತ್ಸಾಹ ಹೆಚ್ಚಿಸಿದೆ. ದೇಶಿ ಸಾಂಸ್ಥಿಕ ಹೂಡಿಕೆದಾರರೂ ನಿರಂತರವಾಗಿ ಷೇರು ಖರೀದಿಯಲ್ಲಿ ತೊಡಗಿದ್ದಾರೆ ಎಂದು ಮಾರುಕಟ್ಟೆ ಪರಿಣಿತರು ಹೇಳಿದ್ದಾರೆ.