ಸಂಧಾನ ಸಫಲ : ಪ್ರತಿಭಟನೆ ಕೈಬಿಟ್ಟ ಬಿಎಂಟಿಸಿ ಸಿಬ್ಬಂದಿ
ಬೆಂಗಳೂರು, ಸೆ.19- ಬಿಎಂಟಿಸಿ ಚಾಲಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಇಂದು ಬೆಳಗ್ಗೆ ಶಾಂತಿನಗರ ಡಿಪೋದಲ್ಲಿ ನಡೆದಿದೆ. ಅಧಿಕಾರಿಗಳು ಕಿರುಕುಳ ನೀಡಿ ದ್ದಾರೆಂದು ಆರೋಪಿಸಿ ಚಾಲಕ ಮಧು ಎಂಬುವವರು ವಿಷಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಇಂದು ಬೆಳಗ್ಗೆ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದೆ ಡಿಪೋ ಮ್ಯಾನೇಜರ್ ಕಚೇರಿ ಮುಂದೆ ಪ್ರತಿಭಟನೆಗಿಳಿದರು. ಸುಮಾರು 4 ತಾಸುಗಳ ಕಾಲ ಧರಣಿ ನಡೆಸಿದ್ದರಿಂದ ಈ ಡಿಪೋದಿಂದ ಯಾವುದೇ ಬಸ್ಗಳು ಸಂಚಾರ ನಡೆಸದಿದ್ದರಿಂದ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಹಿರಿಯ ಅಧಿಕಾರಿಗಳು ಆಗಮಿಸಿ ಸಂಧಾನ ನಡೆಸಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ್ದ ಮಧು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.