ಸಂಬಾರ ಪದಾರ್ಥಗಳ ರಫ್ತು ವಹಿವಾಟಿನಲ್ಲಿ ದಾಖಲೆ ಮಟ್ಟದಲ್ಲಿ ಏರಿಕೆ

Indian-Spice

ನವದೆಹಲಿ, ಜು.16-ಭಾರತೀಯ ಸಂಬಾರಗಳು ಮತ್ತು ಮಸಾಲೆ ಪದಾರ್ಥಗಳ ರಫ್ತು, ಮೌಲ್ಯ ಮತ್ತು ಪ್ರಮಾಣದಲ್ಲಿ ದಾಖಲೆ ಮಟ್ಟದ ಗಣನೀಯ ಏರಿಕೆ ಕಂಡುಬಂದಿದೆ. ಭಾರತದ ಸಂಬಾರಗಳು ಮತ್ತು ಅದರ ಉತ್ಪನ್ನಗಳಿಗೆ ಜಗತ್ತಿನಾದ್ಯಂತ ಅಪಾರ ಮನ್ನಣೆ, ಸ್ವೀಕಾರ ಮತ್ತು ಮಾರುಕಟ್ಟೆ ವೃದ್ದಿಯ ಮಾನ್ಯತೆ ಲಭಿಸಿದೆ.  2016-17ರ ಹಣಕಾಸು ವರ್ಷದಲ್ಲಿ ಭಾರತದಿಂದ 17,664.61 ಕೋಟಿ ರೂ.ಗಳ (2,633.30 ದಶಲಕ್ಷ ಡಾಲರ್) ಮೌಲ್ಯದ ಒಟ್ಟು 9,47,790 ಟನ್ನುಗಳಷ್ಟು ಸಂಬಾರಗಳು ಮತ್ತು ಸಂಬಾರ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. 2015-16ನೇ ಸಾಲಿನಲ್ಲಿ 16,238.23 ಕೋಟಿ ರೂ.ಗಳ (2,482.83 ದಶಲಕ್ಷ ಡಾಲರ್) ಮೌಲ್ಯದ 843,255 ಟನ್ನುಗಳಷ್ಟು ಮಸಾಲೆ ಪದಾರ್ಥಗಳು ರಫ್ತು ಆಗಿತ್ತು. ಇದು ಪ್ರಮಾಣದಲ್ಲಿ ಶೇ.12ರಷ್ಟು, ರೂಪಾಯಿ ಮೌಲ್ಯದಲ್ಲಿ ಶೇ.9ರಷ್ಟು ಹಾಗೂ ಡಾಲರ್‍ಗಳ  ಮೌಲ್ಯದಲ್ಲಿ ಶೇ.6ರಷ್ಟು ಹೆಚ್ಚಳವಾಗಿದೆ.

2016-17ರ ಅವಧಿಗಾಗಿ ನಿಗದಿಕೊಳಿಸಲಾದ ಗುರಿಗೆ ಹೋಲಿಸಿದಲ್ಲಿ, ಪ್ರಮಾಣ ಮತ್ತು ಮೌಲ್ಯ ಇವೆರಡರಲ್ಲಿ ಗೊತ್ತುಪಡಿಸಲಾದ ಗುರಿಗೂ ಮೀರಿ ಸಂಬಾರ ಪದಾರ್ಥಗಳ ಒಟ್ಟು ರಫ್ತು ವಹಿವಾಟು ಸಾಧನೆಯಾಗಿರುವುದು ಗಮನಾರ್ಹ ಸಂಗತಿ. 2016-17ನೇ ವಿತ್ತ ವರ್ಷಕ್ಕಾಗಿ 15,725.12 ಕೋಟಿ ರೂ.ಗಳ (2,419.25 ದಶಲಕ್ಷ ಡಾಲರ್)  ಮೌಲ್ಯದ 8,70,000 ಟನ್ನುಗಳಷ್ಟು ಗುರಿಗೆ ತುಲನೆ ಮಾಡಿದಲ್ಲಿ, ಇದು ಪ್ರಮಾಣದಲ್ಲಿ ಶೇ.109ರಷ್ಟು, ರೂಪಾಯಿ ಮೌಲ್ಯದಲ್ಲಿ ಶೇ.112ರಷ್ಟು ಹಾಗೂ ಡಾಲರ್‍ಗಳ ಮೌಲ್ಯದಲ್ಲಿ ಶೇ.109ರಷ್ಟು ವೃದ್ದಿಯಾಗಿದೆ.

2016-17ರ ಅವಧಿಯಲ್ಲಿ ಏಲಕ್ಕಿ(ದೊಡ್ಡ), ಮೆಣಸಿನ ಕಾಯಿ, ಅರಿಶಿಣ, ಜೀರಿಗೆ, ಬೆಳ್ಳುಳ್ಳಿ ಹಾಗೂ ಜಾಯಿಕಾಯಿ ಮತ್ತು ಜಾಪತ್ರೆ ರಫ್ತು ವಹಿವಾಟು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಪ್ರಮಾಣ ಮತ್ತು ಮೌಲ್ಯ ಇವೆರಡರಲ್ಲಿ ಹೆಚ್ಚಳವಾಗಿರುವುದನ್ನು ಭಾರತೀಯ ಸಂಬಾರಗಳ ಮಂಡಳಿಯ ಅಂಕಿ-ಅಂಶಗಳು ತೋರಿಸಿವೆ. ಸಂಬಾರ ಪುಡಿ/ಪೇಸ್ಟ್ ಹಾಗೂ ಸಂಬಾರ ತೈಲಗಳು ಮತ್ತು ತೈಲರಾಳ (ಸಾರವರ್ಧಿತ ತೈಲ) ಇತ್ಯಾದಿಯಂಥ ಮೌಲ್ಯವರ್ಧಿತ ಉತ್ಪನ್ನಗಳ ರಫ್ತು ವಹಿವಾಟು 2015-16ನೇ ಆರ್ಥಿಕ ವರ್ಷಕ್ಕೆ ಹೋಲಿಸಿದಲ್ಲಿ ಪ್ರಮಾಣ ಮತ್ತು ಮೌಲ್ಯ ಇವೆರಡರಲ್ಲಿ ವೃದ್ಧಿಯಾಗಿರುವುದನ್ನು ಸಾಂಖ್ಯಿಕ ವಿವರಗಳು ಪ್ರದರ್ಶಿಸುತ್ತವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Sri Raghav

Admin