ಸದ್ಯದಲ್ಲೇ ಕರೆಂಟ್ ಶಾಕ್ : ಪ್ರತಿ ಯುನಿಟ್‍ಗೆ 1.40 ರೂ. ಏರಿಕೆಗೆ ಎಸ್ಕಾಂಗಳು ಮನವಿ

Spread the love

Electric-Shock

ಬೆಂಗಳೂರು, ಡಿ.8-ದುಬಾರಿ ಬದುಕಿನಿಂದ ಬೇಸತ್ತಿರುವ ನಾಗರಿಕರಿಗೆ ಚಳಿಗಾಲದಲ್ಲಿಯೂ ಬೆವರಿಳಿಸುವಂತ ಸುದ್ದಿ ನೀಡಲು ಎಸ್ಕಾಂಗಳು ನಿರ್ಧರಿಸಿವೆ. ಪ್ರತಿ ಯುನಿಟ್‍ಗೆ 1.40 ರೂ. ಏರಿಕೆ ಮಾಡಬೇಕು ಎಂದು ಎಸ್ಕಾಂಗಳು ಕರ್ನಾಟಕ ವಿದ್ಯುತ್‍ಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್‍ಸಿ)ಕ್ಕೆ ಪ್ರಸ್ತಾವನೆ ಸಲ್ಲಿಸಿವೆ ಎಂದು ತಿಳಿದುಬಂದಿದೆ. ಎಸ್ಕಾಂಗಳು ಈ ತನಕ ಸಲ್ಲಿಸಿದ ಬೆಲೆ ಏರಿಕೆ ಪ್ರಸ್ತಾವದಲ್ಲಿ ಇದು ಅತಿ ಹೆಚ್ಚು ದುಬಾರಿಯಾಗಿದೆ.  ಬರ ಹಿನ್ನೆಲೆಯಲ್ಲಿ ಶರಾವತಿ ಸೇರಿ ಜಲ ವಿದ್ಯುತ್ ಯೋಜನೆಗಳಿಗೆ ನೀರಿನ ಕೊರತೆ ಎದುರಾಗಿದ್ದು, ವಿದ್ಯುತ್ ಖರೀದಿ ಮಾಡುವುದು ಅನಿವಾರ್ಯವಾಗಿದ್ದರಿಂದ ವಿದ್ಯುತ್ ಬೆಲೆ ಏರಿಕೆ ಮಾಡುವುದು ಅನಿವಾರ್ಯ ಎಂದು ಎಸ್ಕಾಂಗಳು ಪ್ರತಿಪಾದಿಸಿವೆ.

ಕಳೆದ ವರ್ಷ ಪ್ರತಿ ಯುನಿಟ್‍ಗೆ 1.02 ರೂ. ಬೆಲೆ ಏರಿಕೆ ಮಾಡುವಂತೆ ಎಸ್ಕಾಂಗಳು ಕೇಳಿದ್ದವು. ಆದರೆ, ಕೆಇಆರ್‍ಸಿ ಪ್ರತಿ ಯುನಿಟ್‍ಗೆ 30 ಪೈಸೆ ಏರಿಕೆಗೆ ಅವಕಾಶ ಮಾಡಿಕೊಟ್ಟಿತ್ತು. 2014ರಲ್ಲಿ ಎಸ್ಕಾಂಗಳು ಪ್ರತಿ ಯುನಿಟ್‍ಗೆ 80 ಪೈಸೆ ಹೆಚ್ಚಳ ಕೇಳಿದ್ದರು. ಆದ್ರೆ ಕೆಇಆರ್‍ಸಿ ಯುನಿಟ್‍ಗೆ 13 ಪೈಸೆ ಏರಿಕೆ ಮಾಡಿತ್ತು.  ಈ ಬಾರಿ 1.40 ರೂ. ಏರಿಕೆ ಮಾಡಲು ಕೇಳಿರುವುದರಿಂದ ಬೆಲೆ ಏರಿಕೆ ತುಸು ಹೆಚ್ಚು ಆಗಬಹುದು ಎನ್ನಲಾಗಿದೆ. ಎಸ್ಕಾಂಗಳ ಪ್ರಸ್ತಾವನೆ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಕೆಇಆರ್‍ಸಿ ಬೆಲೆ ಏರಿಕೆ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಯೋಚನೆ ಆರಂಭಿಸಿದೆ.

ಎಸ್ಕಾಂಗಳು ಕೇಳಿರುವ ಬೆಲೆ ಏರಿಕೆ ಬಗ್ಗೆ ಜನವರಿಯಲ್ಲಿ ಸಾರ್ವಜನಿಕ ಅದಾಲತ್ ನಡೆಸಲು ಮುಂದಾಗಿದೆ. ಸಾರ್ವಜನಿಕ ಅಹವಾಲು ಆಲಿಸಿದ ಬಳಿಕ ಮಾರ್ಚ್ ಅಂತ್ಯದೊಳಗಾಗಿ ಕೆಇಆರ್‍ಸಿ ಪ್ರತಿ ಯುನಿಟ್‍ಗೆ ಎಷ್ಟು ಬೆಲೆ ಏರಿಕೆ ಮಾಡಬೇಕು ಎನ್ನುವುದನ್ನು ತನ್ನ ತೀರ್ಪಿನಲ್ಲಿ ಪ್ರಕಟಿಸಲಿದೆ. ಹೊಸ ದರ ಏಪ್ರಿಲ್‍ನಿಂದ ಜಾರಿಗೆ ಬರಲಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin