ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲಿ ಕಡತಗಳ ಪರಿಶೀಲನೆ

ee-sanje

ಕುಣಿಗಲ್,ಆ.17-ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಪಟ್ಟಣ ಸಬ್‍ರಿಜಿಸ್ಟ್ರಾರ್ ಕಚೇರಿಗೆ ಎಸಿಬಿ ಇನ್ಸ್‍ಪೆಕ್ಟರ್ ಗುರುಪ್ರಸಾದ್ ಮತ್ತು ಸಿಬ್ಬಂದಿಗಳ ದಿಢೀರ್ ಭೇಟಿ ನೀಡಿ ಗಣಕಯಂತ್ರದಲ್ಲಿನ ಕಡತಗಳನ್ನು ಪರಿಶೀಲಿಸಿದರು.  ದೂರಿನ ಮೇರೆಗೆ ನಿನ್ನೆ ಮಧ್ಯಾಹ್ನ ಸಬ್‍ರಿಜಿಸ್ಟ್ರಾರ್ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ ಇನ್‍ಸ್ಪೆಕ್ಟರ್ ಗುರುಪ್ರಸಾದ್ ಅಲ್ಲಿನ ದಾಖಲೆಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿದರು. ಪರಿಶೀಲಿಸಿದರು. ದಾಳಿ ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ಬಹಿರಂಗ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಪನೋಂದಣಿ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನೋಂದಣಿ ಅಧಿಕಾರಿ ರೋಹಿಣಿ ಎಷ್ಟೇ ಸಮಯವಾದರೂ ಬಂದಿರಲಿಲ್ಲ. ನಂತರ ಬಂದ ಅಧಿಕಾರಿಯನ್ನು ಪ್ರಶ್ನಿಸಿದರೆ ಬೇಜವಾಬ್ದಾರಿ ಹೇಳಿಕೆ ನೀಡಿದ್ದರಿಂದ ಎಸಿಬಿ ಇನ್‍ಸ್ಪೆಕ್ಟರ್ ಗುರುಪ್ರಸಾದ್ ಕೆಂಡಾಮಂಡಲರಾದರು. ನೋಂದಣಿ ಅಧಿಕಾರಿ ರೋಹಿಣಿ ಅವರು ಕಳೆದ ಐದಾರು ವರ್ಷಗಳಿಂದಲೂ ಇಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದು, ಹಲವು ಭೂ ನೋಂದಣಿ ವಿಚಾರದಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ನೋಂದಣಿ ಮಾಡಿದ್ದಾರೆಂಬ ಗಂಭೀರ ಆರೋಪ ಇವರ ಮೇಲೆ ಕೇಳಿ ಬಂದಿದೆ.  ಆದರೆ ಯಾವುದಕ್ಕೂ ಜಗ್ಗದ ಇವರು ಬಲವಾಗಿ ಇಲ್ಲೇ ಬೇರೂರಿದ್ದು , ಮಧ್ಯವರ್ತಿಗಳ ಮತ್ತು ಸ್ಟ್ಯಾಂಪ್ ವೆಂಡರ್‍ಗಳ ಕೃಪಾಕಟಾಕ್ಷದಿಂದ ಇಲ್ಲೇ ಉಳಿದುಕೊಂಡಿದ್ದು , ಇಲ್ಲಿನ ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದು ಹೇಳಲಾಗುತ್ತಿದೆ.  ಇದೇ ಮೊದಲ ಬಾರಿಗೆ ಸಬ್‍ರಿಜಿಸ್ಟ್ರಾರ್ ಕಚೇರಿಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿರುವುದು ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆಯೂ ಆಗಿದೆ.

 

► Follow us on –  Facebook / Twitter  / Google+

Sri Raghav

Admin