ಸಮರ್ಥವಾಗಿ ವಾದ ಮಂಡಿಸದಿರುವುದೇ ಹಿನ್ನಡೆಗೆ ಕಾರಣ : ವೈ.ಎಸ್.ವಿ.ದತ್ತಾ

YSVD

ಬೆಂಗಳೂರು, ಸೆ.7-ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಪದೇ ಪದೇ ಹಿನ್ನಡೆಯಾಗಲು ರಾಜ್ಯದ ಪರವಾಗಿ ವಕೀಲರಿಂದ ಸಮರ್ಥವಾದ ವಾದ ಮಂಡನೆ ಆಗಿಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ವೈ.ಎಸ್.ವಿ.ದತ್ತಾ ಅಸಮಾದಾನ ವ್ಯಕ್ತಪಡಿಸಿದರು.  ಈ ಸಂಜೆಯೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ನಾವು ಅತಿಯಾಗಿ ವಕೀಲರ ಸಲಹೆ ಮೇಲೆ ಅವಲಂಭಿತವಾಗಿರುವುದು ಕೂಡ ಒಂದು ಪ್ರಮುಖ ಕಾರಣವಾಗಿದೆ. ಎಲ್ಲಾ ಸರ್ಕಾರಗಳು ಕೂಡ ವಕೀಲರ ಸಲಹೆಗೆ ಜೋತು ಬಿದ್ದಿದ್ದರಿಂದ ರಾಜ್ಯದ ಹಿತಾಸಕ್ತಿ ಉಳಿಸುವ ಬದಲು ಬಲಿ ಕೊಡುವಂತಾಗಿದೆ ಎಂದರು. ಬುದ್ಧಿವಂತಿಕೆಯಿಂದ ರಾಜಕೀಯ ನಿಲವು ತಳೆಯಲಿಲ್ಲ. ವಕೀಲರ ಸಲಹೆಗಿಂತ ಸಂದರ್ಭೋಚಿತವಾಗಿ ರಾಜಕೀಯ ನಿರ್ಧಾರ ಕೈಗೊಂಡಿದ್ದರೆ ಸುಪ್ರೀಂ ಕೋರ್ಟ್‍ನಲ್ಲಿ ರಾಜ್ಯ ಹಿನ್ನಡೆ ಅನುಭವಿಸಬೇಕಾಗಿರಲಿಲ್ಲ.

ರಾಜ್ಯದ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ವಾದ ಮಂಡಿಸುವ ವಕೀಲರ ತಂಡ ಸೂಕ್ತ ನ್ಯಾಯ ಒದಗಿಸಿಲ್ಲ. ಕಳೆದ 30 ವರ್ಷದಿಂದಲೂ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಸಿಕ್ಕಂತಹ ಅವಕಾಶವನ್ನು ರಾಜ್ಯ ಸರ್ಕಾರ ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಹೇಳಿದರು. ಕಳೆದ 2007ರಲ್ಲಿ ಕಾವೇರಿ ನ್ಯಾಯಾಧೀಕರಣದ ಅಂತಿಮ ತೀರ್ಪು ಬರುವ ಮುನ್ನವೇ ಗಾಂಧೀ ಸಾಹಿತ್ಯ ಸಂಘ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅರ್ಜಿಯಲ್ಲಿ ನ್ಯಾಯಾಧೀಕರಣದ ನ್ಯಾಯಾಧೀಶರ ನಡುವೆಯೇ ಸಂಘರ್ಷ ಉಂಟಾಗಿದೆ. ತೀರ್ಪು ತಾರತಮ್ಯದಿಂದ ಕೂಡಿರಲಿದೆ. ಒಪ್ಪುವಂಥ ತೀರ್ಪ ಬರುವುದಿಲ್ಲ ಎಂಬ ನಿಲುವನ್ನು ಸಂಘ ವ್ಯಕ್ತಪಡಿಸಿತ್ತು.

ಆಗ ಮುಖ್ಯಮಂತ್ರಿ ದರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಿಗೆ ಸೇರಿಕೊಂಡು ಸುಪ್ರೀಂ ಕೋರ್ಟಿನಲ್ಲಿ ಸಮರ್ಥ ವಾದ ಮಂಡಿಸಿದ್ದರೆ, ನ್ಯಾಯಾಧಿಕರಣದ ಅಂತಿಮ ತೀರ್ಪು ಬರುತ್ತಿರಲಿಲ್ಲ. ಆದರೆ, ಆ ಸರ್ಕಾರ ನಮಗೂ ಅರ್ಜಿಗೂ ಸಂಬಂಧವಿಲ್ಲ ಎಂಬ ರೀತಿ ವರ್ತಿಸಿದ್ದರಿಂದ ಆಗಲೂ ಹಿನ್ನಡೆಯಾಯಿತು.
ಕಳೆದ 2002, 2012 ಹಾಗೂ ಈಗ ತಮಿಳು ನಾಡಿಗೆ ನೀರು ಬಿಡುವಂತೆ ವಕೀಲರ ತಂಡ ಸಲಹೆ ಮಾಡಿದೆ. ನೀರು ಬಿಡಬೇಡಿ ನಾವು ಕೇಸನ್ನು ಗೆಲ್ಲುತ್ತೇವೆ ಎಂದು ವಕೀಲರ ತಂಡ ಯಾವಾಗಲೂ ಹೇಳಲಿಲ್ಲ. ಈಗ ನೀರು ಬಿಟ್ಟರೆ, ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ, ತೀರ್ಪು ವ್ಯತಿರಿಕ್ತವಾಗಬಹುದು ಎಂಬ ಅಭಿಪ್ರಾಯವನ್ನು ವಕೀಲರು ವ್ಯಕ್ತಪಡಿಸಿದ್ದಾರೆ. ಒಟ್ಟಾರೆ, ವಕೀಲರ ಮೇಲೆ ರಾಜ್ಯ ಸರ್ಕಾರದ ಅತಿಯಾದ ಅವಲಂಬನೆ ಸರಿಯಲ್ಲ. ಸಂದರ್ಭೋಚಿತವಾಗಿ ರಾಜಕೀಯ ನಿಲುವನ್ನು ತಳೆದು ರಾಜ್ಯದ ಹಿತ ಕಾಪಾಡಬೇಕು ಎಂದು ದತ್ತಾ ಆಗ್ರಹಿಸಿದರು.

► Follow us on –  Facebook / Twitter  / Google+

Sri Raghav

Admin