ಸಮಾಜವಾದಿ ಪಕ್ಷದಿಂದ ಅಖಿಲೇಶ್ ಯಾದವ್ ಉಚ್ಛಾಟನೆ..!
ಲಕ್ನೋ.ಡಿ. 30 : ಉತ್ತರ ಪ್ರದೇಶದ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು ತಮ್ಮ ತಂದೆಯ ವಿರುದ್ಧವೇ ಬಂಡಾಯವೆದ್ದಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರನ್ನು ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಶುಕ್ರವಾರ ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿದ್ದಾರೆ. ಪಕ್ಷವನ್ನು ಉಳಿಸುವ ಉದ್ದೇಶದಿಂದ ಈ ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು ಎಂದು ಶುಕ್ರವಾರ ಮುಲಾಯಂ ತಿಳಿಸಿದ್ದಾರೆ. ಅಖಿಲೇಶ್ ಅವರೊಂದಿಗೆ ಅವರ ಸೋದರ ಸಂಬಂಧಿ ರಾಮ್ ಗೋಪಾಲ್ ಯಾದವ್ ಅವರನ್ನೂ 6 ವರ್ಷದವರೆಗೆ ಉಚ್ಚಾಟಿಸಲಾಗಿದೆ.
ರಾಮ್ ಗೋಪಾಲ್ ಯಾದವ್ ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು ಮತ್ತು ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಪಕ್ಷವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದರು. ಇಷ್ಟು ಮಾತ್ರವಲ್ಲ ಅಖಿಲೇಶ್ ಅವರ ದಾರಿ ತಪ್ಪಿಸುತ್ತಿದ್ದರು ಎಂದು ಮುಲಾಯಂ ಆರೋಪಿಸಿದ್ದಾರೆ.
ಶೋಕಾಸ್ ನೋಟಿಸ್ :
ಅಭ್ಯರ್ಥಿಗಳ ಪಟ್ಟಿಗೆ ಸಂಬಂಧಿಸಿದಂತೆ ತಂದೆಯ ವಿರುದ್ಧವೇ ತಿರುಗಿಬಿದ್ದ ಅಖಿಲೇಶ್ ಯಾದವ್ ಅವರು ನಿನ್ನೆ ತಮ್ಮ ಬೆಂಬಲಿಗರನ್ನೊಳಗೊಂಡ 167 ಅಭ್ಯರ್ಥಿಗಳ ಪ್ರತ್ಯೇಕ ಪಟ್ಟಿ ಬಿಡುಗಡೆ ಮಾಡಿದ್ದರು. ಈ ಸಂಬಂಧ ಅಖಿಲೇಶ್ ಯಾದವ್ ಹಾಗೂ ಅವರ ಸಹೋದರ ಸಂಬಂಧಿ ರಾಮ್ ಗೋಪಾಲ್ ಯಾದವ್ ಅವರಿಗೆ ಮುಲಾಯಂ ಸಿಂಗ್ ಯಾದವ್ ಅವರು ಇಂದು ಶೋಕಾಸ್ ನೋಟಿಸ್ ನೀಡಿದ್ದರು.
ಸಿಎಂ ಸ್ಥಾನಕ್ಕೆ ಸಂಚಕಾರ :
ಪಕ್ಷದಿಂದ ಉಚ್ಚಾಟನೆಗೊಂಡ ಬಳಿಕ ಅಖಿಲೇಶ್ ಯಾದವ್ ಅವರ ಸಿಎಂ ಸ್ಥಾನಕ್ಕೆ ಸಂಚಕಾರ ಬಂದಂತಾಗಿದೆ. ಮುಲಾಯಂ ಅವರು ಹೊಸ ಸಿಎಂ ಅಭ್ಯರ್ಥಿಯ ಶೋಧದಲ್ಲಿದ್ದಾರೆ. ಶೀಘ್ರದಲ್ಲೇ ನೂತನ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರು ಘೋಷಣೆಯಾಗಲಿದೆ.
ಹೊಸ ಪಕ್ಷ ಸ್ಥಾಪನೆ :
ಸಮಾಜವಾದಿ ಪಕ್ಷದಿಂದ ಉಚ್ಚಾಟಿತರಾಗಿರುವ ಉ.ಪ್ರ. ಸಿಎಂ ಅಖಿಲೇಶ್ ಯಾದವ್ ತಮ್ಮ ಚಿಕ್ಕಪ್ಪ ರಾಮಗೋಪಾಲ್ ಯಾದವ್ ಅವರೊಂದಿಗೆ ಸೇರಿ ಹೊಸ ಪಕ್ಷ ಸ್ಥಾಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ.