ಸರಣಿ ಅಪಘಾತ : ಬೈಕ್ ಸವಾರ ಸಾವು, ಶಾಲಾ ಮಕ್ಕಳು ಪಾರು

Bike-Accident

ನೆಲಮಂಗಲ, ಫೆ.24- ಹಿಂದಿನಿಂದ ಅತಿ ವೇಗವಾಗಿ ಬಂದ ಕೆಎಸ್‍ಆರ್‍ಟಿಸಿ ಬಸ್ ನಿಯಂತ್ರಣ ತಪ್ಪಿ ಶಾಲಾ ಬಸ್‍ಗೆ ಡಿಕ್ಕಿ ಹೊಡೆದಿದ್ದರಿಂದ ಈ ಬಸ್ ಮುಂದೆ ಹೋಗುತ್ತಿದ್ದ ಬೈಕ್‍ಗೆ ಅಪ್ಪಳಿಸಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಮೃತರನ್ನು ಬೆಂಗಳೂರಿನ ನಂದಿನಿ ಬಡಾವಣೆ ನಿವಾಸಿ ಹನುಮಂತಯ್ಯ (60) ಎಂದು ಗುರುತಿಸಲಾಗಿದೆ.

ನಿವೃತ್ತ ಎಚ್‍ಎಎಲ್ ನೌಕರರಾದ ಇವರು ಇಂದು ಬೆಳಗ್ಗೆ ಬೇರೆ ಕೆಲಸದ ನಿಮಿತ್ತ ಬೆಂಗಳೂರು ಕಡೆಯಿಂದ ನೆಲಮಂಗಲ ಕಡೆ ಬೈಕ್‍ನಲ್ಲಿ ಹೋಗುತ್ತಿದ್ದರು.
ರಾಷ್ಟ್ರೀಯ ಹೆದ್ದಾರಿ-4ರ ಬೆಂಗಳೂರು-ತುಮಕೂರು ರಸ್ತೆ ದಾಬಸ್‍ಪೇಟೆ ಸಮೀಪದ ರಾಯರಪಾಳ್ಯಗೇಟ್ ಬಳಿ ಇಂದು ಬೆಳಗ್ಗೆ 8 ಗಂಟೆಯಲ್ಲಿ ಬೆಂಗಳೂರಿನಿಂದ ಸಿಂಧನೂರಿಗೆ ಹೋಗುತ್ತಿದ್ದ ಬಸ್ ನಿಯತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ವಿದ್ಯಾ ಸಂಸ್ಥೆಗೆ ಸೇರಿದ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಪರಿಣಾಮವಾಗಿ ಶಾಲಾ ಬಸ್ ಚಾಲಕನ ನಿಯಂತ್ರಣ ತಪ್ಪಿ ಮುಂದೆ ಬೈಕ್‍ನಲ್ಲಿ ಹೋಗುತ್ತಿದ್ದ ಹನುಮಂತಯ್ಯ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಶಾಲಾ ಬಸ್‍ನಲ್ಲಿದ್ದ ಮೂರೂ ಮಕ್ಕಳು ಮಂಭಾಗದ ಸೀಟಿನಲ್ಲಿ ಕುಳಿತಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆಗ ತಾನೇ ಶಾಲಾ ಮಕ್ಕಳನ್ನು ಪಿಕ್ ಅಪ್ ಮಾಡಲು ಈ ಬಸ್ ತೆರಳುತ್ತಿದ್ದುದರಿಂದ ವಾಹನ ಮಾತ್ರ ಜಖಂಗೊಂಡಿದೆ.
ಸುದ್ದಿ ತಿಳಿಯುತ್ತಿದ್ದಂತೆ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಶವವನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಅಪಘಾತದಿಂದಾಗಿ ಈ ಮಾರ್ಗದಲ್ಲಿ ಕೆಲ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಸಂಚಾರಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Sri Raghav

Admin