ಸರಣಿ ಗೆಲ್ಲಲು ನಾಳೆ ವಿಶಾಖಪಟ್ಟಣಂನಲ್ಲಿ ಭಾರತ -ನ್ಯೂಜಿಲೆಂಡ್ ಬಿಗ್ ಫೈಟ್

Spread the love

Dhoni01

ವಿಶಾಖಪಟ್ಟಣ,ಅ.28- ಇಲ್ಲಿನ ಡಾ.ವೈ.ಎಸ್.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಈಗಾಗಲೇ ಉಭಯ ತಂಡಗಳು ಸರಣಿಯಲ್ಲಿ 2-2 ಸಮಬಲ ಸಾಧಿಸಿದ್ದು ಪ್ರವಾಸಿ ಹಾಗೂ ಅತಿಥೇಯ ತಂಡ ನಡುವೆ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿವೆ. ಟೆಸ್ಟ್ ಸರಣಿಯಲ್ಲಿ ಈಗಾಗಲೇ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ ತಂಡ ಏಕದಿನ ಸರಣಿಯನ್ನೂ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಆದರೆ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿರುವ ಕಿವೀಸ್ ಪಡೆ ಏಕದಿನ ಸರಣಿಯಲ್ಲಿ ತಿರುಗೇಟು ನೀಡಿ ಸಮಬಲ ಸಾಧಿಸಿದೆ. ಭಾರತ ಮೊದಲ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡಿತ್ತು. ಆದರೆ 2ನೇ ಪಂದ್ಯದಲ್ಲಿ ಕಿವೀಸ್ ತಿರುಗೇಟು ನೀಡಿ 1-1 ಸಮಬಲ ಕಾಯ್ದುಕೊಂಡಿದೆ. ಮೂರನೇ ಪಂದ್ಯದಲ್ಲಿ ಧೋನಿ ಪಡೆ ಜಯ ಸಾಧಿಸಿ 2-1ರಿಂದ ಮುನ್ನಡೆ ಸಾಧಿಸಿತ್ತು. 4ನೇ ಪಂದ್ಯದಲ್ಲಿ ಸರಣಿ ಜಯಿಸುವ ತವಕದಲ್ಲಿದ್ದ ಭಾರತಕ್ಕೆ ಕಿವೀಸ್ ಕೇವಲ 19 ರನ್‍ಗಳ ಗೆಲುವು ಸಾಧಿಸಿ ತಿರುಗೇಟು ನೀಡಿದೆ.

ಪ್ರಶಸ್ತಿಗೆ ಕಣ್ಣಿಟ್ಟ ಧೋನಿ ಪಡೆ:

ನಾಯಕ ಮಹೇಂದ್ರ ಸಿಂಗ್ ನೇತೃತ್ವದ ತಂಡ ಕಿವೀಸ್ ತಂಡವನ್ನು ಮಣಿಸಲು ರಣತಂತ್ರ ರೂಪಿಸಿದ್ದು, ಗೆಲುವ ತವಕದಲ್ಲಿದೆ. ಆದರೆ ಆರಂಭಿಕ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದು ,ಇದು ತಂಡಕ್ಕೆ ತಲೆನೋವಾಗಿದೆ. ಆದರೆ ಬೌಲರ್‍ಗಳು ಸಾಂಘಿಕ ಪ್ರದರ್ಶನ ನೀಡಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ಸೇಡು ತೀರಿಸಿಕೊಳ್ಳುವ ತವಕದಲ್ಲಿ ಕಿವೀಸ್:

ಟೆಸ್ಟ್ ಸರಣಿಯಲ್ಲಿ ಸೋಲನ್ನುಭವಿಸಿರುವ ಪ್ರವಾಸಿ ತಂಡ ಏಕದಿನ ಸರಣಿಯಲ್ಲಿ ಪ್ರತಿರೋಧ ನೀಡಿದೆ. ನಾಳೆ ಅಂತಿಮ ಪಂದ್ಯಕ್ಕೆ ನಾಯಕ ವಿಲಿಯಮ್‍ಸನ್ ಪಡೆ ಪ್ರವಾಸಿ ತಂಡವನ್ನು ಮಣಿಸಿ ಪ್ರಶಸ್ತಿ ಗೆಲ್ಲಲು ಕಾತರದಲ್ಲಿದೆ. ಆದರೆ ತಂಡದ ಆಧಾರಸ್ತಂಭ ರಾಸ್‍ಟೇಲರ್, ಮಾರ್ಟಿನ್ ಗುಪ್ಟಿಲ್ ಸೇರಿದಂತೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳು ಫಾರ್ಮ್‍ನಲ್ಲಿರುವುದರಿಂದ ತಂಡಕ್ಕೆ ಮೈನಸ್ ಪಾಯಿಂಟ್ ಆಗಿದೆ.  ಇನ್ನು ಬೌಲಿಂಗ್ ವಿಭಾಗದಲ್ಲಿ ಟೀಂ ಸೌಥಿ, ಟ್ರೆಂಟ್ ಬೌಟ್ ಅಂತಹ ಪ್ರಸಿದ್ದ ವೇಗದ ಬೌಲರ್‍ಗಳನ್ನು ಹೊಂದಿದ್ದು ಬೌಲಿಂಗ್ ವಿಭಾಗದಲ್ಲಿ ಭಾರತ ತಂಡಕ್ಕಿಂತ ಬಲಾಢ್ಯ ಹೊಂದಿದೆ. ಹೀಗಾಗಿ ನಾಳೆ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿ ಹೋರಾಟ ನಡೆಯಲಿದ್ದು, ಪಂದ್ಯ ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

► Follow us on –  Facebook / Twitter  / Google+

Sri Raghav

Admin