ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ

Spread the love

Tanveer-Sait

ಬೆಳಗಾವಿ, ನ.30- ಸರ್ಕಾರಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಅಗತ್ಯ ಇರುವ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಿಕೊಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‍ಸೇಠ್ ವಿಧಾನಸಭೆಗೆ ತಿಳಿಸಿದರು. ಜಯನಗರ ಕ್ಷೇತ್ರದ ಶಾಸಕ ಬಿ.ಎನ್.ವಿಜಯ್‍ಕುಮಾರ್ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ರಾಜ್ಯ ಹೈಕೋರ್ಟ್ ರಿಟ್‍ಪಿಟೇಷನ್ ಒಂದರ ವಿಚಾರಣೆ ನಡೆಸಿ 2011ರ ಅಕ್ಟೋಬರ್ 30ರೊಳಗೆ ಎಲ್ಲಾ ಶಾಲೆಗಳಿಗೂ ಶೌಚಾಲಯ ನಿರ್ಮಿಸಿ ಕೊಡಲು ಆದೇಶ ನೀಡಿದೆ. ಖಾಯಂ ಶೌಚಾಲಯ ಸಾಧ್ಯವಾಗದಿದ್ದರೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಸೂಚಿಸಲಾಗಿದೆ. ಸರ್ಕಾರ ನ್ಯಾಯಾಲಯದ ಸೂಚನೆಯನ್ನು ಪಾಲಿಸಿದೆ ಎಂದರು.

ರಾಜ್ಯದಲ್ಲಿ 60 ಸಾವಿರ ಸರ್ಕಾರಿ ಶಾಲೆಗಳಿದ್ದು, 25 ಮಕ್ಕಳಿಗೆ ಒಂದು ಶೌಚಾಲಯ ನಿರ್ಮಿಸ ಬೇಕೆಂದು ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಅದರ ಪ್ರಕಾರ ಶೌಚಾಲಯ ನಿರ್ಮಿಸಿದರೆ ನಿರ್ವಹಣೆ ಮಾಡುವುದು ಕಷ್ಟ. ಹೀಗಾಗಿ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲು ಮತ್ತು ನಿರ್ವಹಣೆಗೆ ನಗರಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯ ನೆರವು ಪಡೆಯಲಾಗುತ್ತಿದೆ. ಅಗತ್ಯ ಇರುವ ಕಡೆ ಖಾಸಗಿ ಸಂಸ್ಥೆಗಳ ನೆರವು ಪಡೆಯಲಾಗುತ್ತಿದೆ ಎಂದು ಹೇಳಿದರು.

ರಾಜ್ಯ ವಲಯದಡಿ 204 ಸರ್ಕಾರಿ ಪ್ರಾಥಮಿಕ ಮತ್ತು 204 ಸರ್ಕಾರಿ ಪ್ರೌಢಶಾಲೆಗಳಿಗೆ ತಲಾ ಒಂದರಂತೆ 408 ಶೌಚಾಲಯಗಳನ್ನು ನಿರ್ಮಿಸಲಾಗಿದೆ. ನ್ಯಾಯಲಯದ ಸೂಚನೆಯಂತೆ ಪ್ರಾಥಮಿಕ ಶಾಲೆ ಗಳಲ್ಲಿ 3133, ಪ್ರೌಢಶಾಲೆಗಳಲ್ಲಿ 298 ಶೌಚಾಲಯಗಳನ್ನು ಸ್ಥಾಪಿಸಲಾಗಿದೆ. ಇದಕ್ಕಾಗಿ 624.24 ಲಕ್ಷ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಅವರು ತಿಳಿಸಿದರು. ಮಕ್ಕಳ ದಾಖಲಾತಿಯನ್ನು ಅನುಸರಿಸಿ ಹೆಚ್ಚುವರಿ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin