ಸರ್ಕಾರಿ ಶಾಲೆಯಲ್ಲಿ ವಿದೇಶಿ ವಿದ್ಯಾರ್ಥಿಗಳಿಂದ ಪಾಠ

Spread the love

Mysuru-Schol

ಮೈಸೂರು, ಜು.19- ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರಿಗೇನು ಕಡಿಮೆಯಿಲ್ಲ. ಅದಕ್ಕೆ ಉದಾಹರಣೆಗಳು ಇಲ್ಲದಿಲ್ಲ. ಇತ್ತೀಚೆಗಂತೂ ನಮ್ಮವರೇ ಸರ್ಕಾರಿ ಶಾಲೆಗಳನ್ನು ಮೂಲೆಗುಂಪು ಮಾಡಿರುವ ಅದೆಷ್ಟೋ ನಿದರ್ಶನಗಳು ಸಿಗುತ್ತವೆ. ಅಂತಹವರ ಮಧ್ಯೆ ವಿದೇಶಿಗರು ಮಾಡಿರುವ ಈ ಕೆಲಸ ಮಾದರಿಯಾಗಿದೆ. ಸ್ಪೇನ್‍ನ 15 ವಿದ್ಯಾರ್ಥಿಗಳ ತಂಡ ವಿಜಯನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಹಲವಾರು ವಿಷಯಗಳ ಬಗ್ಗೆ ಮಾಹಿತಿ ನೀಡಿ ಅವರಲ್ಲಿ ಸ್ವಚ್ಛತೆ, ಕಲಿಕೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ಇಂಗ್ಲಿಷ್, ಕನ್ನಡ ಅಥವಾ ಇನ್ನಾವುದೇ ವಿಷಯವನ್ನಾಧರಿಸಿ ಪಾಠ ಮಾಡದ ಈ ತಂಡ ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಬಗ್ಗೆ ಅದರಲ್ಲೂ ಬೆಳಗ್ಗೆ ಎದ್ದ ಕೂಡಲೇ ಹಲ್ಲುಜ್ಜಿ, ಸ್ನಾನ ಮಾಡಿ ಆಹಾರ ಸೇವನೆ ಮಾಡಬೇಕು. ಶುದ್ಧ ಬಟ್ಟೆ ಧರಿಸಬೇಕು ಎಂಬಿತ್ಯಾದಿ ಸ್ವಚ್ಛತೆ ಪಾಠ ಮಾಡಿರುವುದಲ್ಲದೆ ನಮ್ಮ ಅಂಗಾಂಗಗಳ ಕಾರ್ಯವೈಖರಿ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ. ಶಾಲೆಯ ಗೋಡೆಗಳಿಗೆ ಬಣ್ಣ ಹಚ್ಚಿ ಚಿತ್ರ ಬಿಡಿಸುವ ಮೂಲಕ ಕಲೆಗಳ ಬಗೆಗೂ ಆಸಕ್ತಿ ಮೂಡಿಸಿದ್ದಾರೆ. ಸ್ಪೇನ್‍ನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಸಾರಾ, ಮಾರ್ಥಾ, ಲೂಸಿಯಾ ಒಳಗೊಂಡ 15 ಜನರ ತಂಡ ತಮ್ಮ ಚಟುವಟಿಕೆಯಿಂದ ಮಕ್ಕಳಲ್ಲಿ ಹಲವಾರು ವಿಷಯಗಳ ಮಾಹಿತಿ ಬಿತ್ತಿದ್ದಾರೆ.

ಬೆಂಗಳೂರಿನ ಎಫ್‍ಎಸ್‍ಎಲ್ ಇಂಡಿಯಾ ಸಂಸ್ಥೆ ವತಿಯಿಂದ ಮೈಸೂರಿಗೆ ಆಗಮಿಸಿರುವ ಈ ತಂಡ ಮೈಸೂರು ಹಾಗೂ ಹುಣಸೂರು ತಾಲೂಕುಗಳ ಸರ್ಕಾರಿ ಶಾಲಾ ಮಕ್ಕಳಿಗೆ ವಿಶೇಷ ಪಾಠ ಮಾಡಿದ್ದಾರೆ. ಈ ಮೂಲಕ ಆ ಮಕ್ಕಳಲ್ಲೂ ಹೆಚ್ಚಿನ ಕಲಿಕೆಗೆ ಪ್ರೋತ್ಸಾಹ ನೀಡಿದಂತಾಗಿದೆ. ವಿನಾಯಕನಗರದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ರುಕ್ಮಿಣಿ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರಲ್ಲದೆ ಮಕ್ಕಳಲ್ಲಿ ಅರಿವು ಮೂಡಿಸುವ ಮೂಲಕ ವಿದೇಶಿಗರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin