ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಎಡಪಾಡಿ ಪಳನಿಸ್ವಾಮಿ

Palaniswamy

ಚೆನ್ನೈ. ಫೆ.14 : ಎಐಎಡಿಎಂಕೆ ಪಕ್ಷದ ಶಶಿಕಲಾ ನಟರಾಜನ್ ಬಣದಿಂದ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಎಡಪಾಡಿ ಪಳನಿಸ್ವಾಮಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ರಾಜಭವನಕ್ಕೆ ತೆರಳಿ, ರಾಜ್ಯಪಾಲ ವಿದ್ಯಾಸಾಗರ ರಾವ್ ಅವರನ್ನು ಭೇಟಿ ಮಾಡಿ. ಸುಮಾರು 15 ನಿಮಿಷಗಳ ಕಾಲ ರಾಜ್ಯಪಾಲರೊಂದಿಗೆ ಚರ್ಚಿಸಿದ ಅವರು, 112 ಶಾಸಕರ ಬೆಂಬಲ ತಮಗಿರುವುದರಿಂದ ಸರ್ಕಾರ ರಚನೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದಾರೆ.  ಜೊತೆಗೆ ತಮಗೆ ಬೆಂಬಲ ನೀಡಿರುವ ಶಾಸಕರ ಸಹಿ ಇರುವ ಪತ್ರವನ್ನು ನೀಡಿದ್ದಾರೆ.
ಪಳನಿಸ್ವಾಮಿ ಅವರೊಂದಿಗೆ 10 ಶಾಸಕರು ಜೊತೆಗಿದ್ದರು. ಇದೇ ಸಂದರ್ಭದಲ್ಲಿ ರಾಜ್ಯಪಾಲರು, ಪನ್ನೀರ್ ಸೆಲ್ವಂ ಅವರ ಬಣ ಮತ್ತು ಬೆಳವಣಿಗೆಗಳ ಕುರಿತಾಗಿ ಪ್ರಶ್ನಿಸಿದ್ದಾರೆ.

ಪಳನಿಸ್ವಾಮಿ ಅವರೊಂದಿಗೆ ಚರ್ಚಸಿದ ರಾಜ್ಯಪಾಲರು ಯಾವುದೇ ಭರವಸೆಯನ್ನು ನೀಡಿಲ್ಲ ಎನ್ನಲಾಗಿದೆ. ನಾಳೆ ಮಧ್ಯಾಹ್ನದೊಳಗೆ ರಾಜ್ಯಪಾಲರು ತೀರ್ಮಾನ ಕೈಗೊಳ್ಳಲಿದ್ದು, ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಕೇಂದ್ರಕ್ಕೆ ವರದಿ ನೀಡಿದ್ದಾರೆ.  ಮತ್ತೊಂದೆಡೆ ಶಶಿಕಲಾ ತಮ್ಮ ಬೆಂಬಲಿಗ ಶಾಸಕರೊಂದಿಗೆ ಕೋವತ್ತೂರಿನ ಗೋಲ್ಡನ್ ಬೇ ರೆಸಾರ್ಟ್ ನಲ್ಲೇ ವಾಸ್ತವ್ಯ ಹೂಡಿದ್ದು,ಮುನ್ನೆಚ್ಚರಿಕೆ ಕ್ರಮವಾಗಿ 10 ಕಿಲೋ ಮೀಟರ್ ವ್ಯಾಪ್ತಿವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಪೊಲೀಸ್ ಬಿಗಿಬಂದೋಬಸ್ತ್ ಕೈಗೊಳ್ಳಲಾಗಿದೆ.

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರು ಅಕ್ರಮ ಆಸ್ತಿ ಪ್ರಕರಣದಲ್ಲಿ ತಪ್ಪಿತಸ್ಥೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತಿದ್ದಂತೆ ಮುಖ್ಯಮಂತ್ರಿ ಹುದ್ದೆಯ ರೇಸ್ ನಿಂದ ಹಿಂದೆ ಸರಿದ ಜಯಲಲಿತಾ ಆಪ್ತೆ, ರೆಸಾರ್ಟ್ ನಲ್ಲಿದ್ದ ತಮ್ಮ ಬೆಂಬಲಿಗ ಶಾಸಕರೊಂದಿಗೆ ಸಭೆ ನಡೆಸಿ, ಪಳನಿಸ್ವಾಮಿಯನ್ನು ನೂತನ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ್ದರು.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin