ಸರ್ವಧರ್ಮ ಸಮನ್ವಯ ತಾಣ ಸೋಮಶೇಖರ ಮಠ

Spread the love

SRI

ಮುನವಳ್ಳಿಯ ನಡೆದಾಡುವ ದೇವರೆಂದೇ ಜನರಲ್ಲಿ ಬಿಂಬಿತವಾದ ಮುರುಘೇಂದ್ರ ಮಹಾಸ್ವಾಮಿಗಳ ಬದುಕು ಕೂಡ ಕಾಯಕಯೋಗಿಗಳಾಗಿ, ಶ್ರೀ ಮಠದ ಹೆಸರನ್ನು ಇಂದು ಜನಮಾನಸದಲ್ಲಿ ಚಿರಸ್ಥಾಯಿಗೊಳಿಸುವ ಜೊತೆಗೆ ಮುನವಳ್ಳಿ ಮುನಿಗಳ ಹಳ್ಳಿ ಎಂಬ ಪರಂಪರೆಯನ್ನು ಉಳಿಸಿಕೊಂಡು ಬರುವಲ್ಲಿ ತಮ್ಮದೇ ಆದ ಕಾಯಕದಲ್ಲಿ ತೊಡಗಿದ್ದು ಇತ್ತೀಚಿನ ಮಹದಾಯಿ ಹೋರಾಟದಲ್ಲಿಯೂ ಕೂಡ ಶ್ರೀಗಳ ಪಾತ್ರ ಮಹತ್ವದ್ದಾಗಿದೆ.

ಮಠದಿಂದ ಘಟವಲ್ಲ ಘಟದಿಂದ ಮಠ ಎಂಬ ಮಾತಿಗೆ ನಿದರ್ಶನರಾದ ಸ್ವಾಮೀಜಿಯವರು ಪ್ರತಿವರ್ಷ ಶ್ರಾವಣ ಮಾಸದಲ್ಲಿ ಬೆಳಗಿನ ಜಾವ ಧಾರ್ಮಿಕ ಪಥಸಂಚಲನ ನಡೆಸುವ ಪರಂಪರೆಗೆ ನಾಂದಿ ಹಾಡಿದ್ದು ಈ ಸಂದರ್ಭದಲ್ಲಿ ಓಂ ಶ್ರೀ ಗುರು ಬಸವಲಿಂಗಾಯ ನಮಃ ಎಂಬ ಬಸವ ಮಂತ್ರದ ಧ್ವನಿ ಎಲ್ಲೆಡೆ ಮೊಳಗುವಂತೆ ಮಾಡಿರುವರು.

ಭಾರತೀಯ ಇತಿಹಾಸದಲ್ಲಿ ಪುರಾಣ, ಚರಿತ್ರೆಗಳು ತನ್ನದೇ ಆದ ಸಾಂಸ್ಕೃತಿ ಕ ಮೌಲ್ಯ ಹೊಂದಿವೆ. ನಾವು ಪುರಾಣಗಳನ್ನು ಶ್ರಾವಣ ಮಾಸ, ಕಾರ್ತಿಕ ಮಾಸದಲ್ಲಿ ಮಠಮಾನ್ಯಗಳಲ್ಲಿ ಹಚ್ಚುವುದನ್ನು ನೋಡಿದ್ದೇವೆ. ಮುನವಳ್ಳಿಯ ಇತಿಹಾಸದಲ್ಲಿ ಇದೇ ವರ್ಷ ಜನೇವರಿ ತಿಂಗಳಿನಲ್ಲಿ ಬಸವ ಪುರಾಣ ಜರುಗಿತು. ಮುನವಳ್ಳಿ ಅಷ್ಟೇ ಅಲ್ಲ ಸುತ್ತಮುತ್ತಲಿನ ಗ್ರಾಮಗಳ ಅನೇಕ ಜನ ಸಹಸ್ರಾರು ಸಂಖ್ಯೆಯಲ್ಲಿ ಜಾತ್ರೆಯೋಪಾದಿ ಸೇರಿ ಬಸವಪುರಾಣವನ್ನು ಆಸ್ವಾದಿಸಿದ್ದು ಈಗ ಇತಿಹಾಸ. ನಿಜಕ್ಕೂ ಈ ವೈಶಿಷ್ಟ್ಯತೆ ನಾಡಿಗೆ ಆದರ್ಶಪ್ರಾಯವಾಗುವಂಥದ್ದು. ಬಸವಣ್ಣವರ ಬದುಕಿನ ಕಾಲಘಟ್ಟಕ್ಕೆ ಜರುಗಿದ ಘಟನೆಗಳಿಗೆ ಪೂರಕವಾಗಿ ಪುರಾಣದಲ್ಲಿ ಅವುಗಳ ಪುನರ್ ಸೃಷ್ಟಿಯಂತೆ ಜನರಿಗೆ ಅವರ ಬದುಕನ್ನು ತಿಳಿಸಿದ್ದು ಮಾದರಿಯಾಗಿದೆ.

ಉದಾಹರಣೆಗೆ ಬಸವಣ್ಣನವರ ಜನ್ಮದ ನಾಮಕರಣೋತ್ಸವ, ತಾಯಂದಿರಿಗೆ ಉಡಿ ತುಂಬುವ ಕಾರ್ಯ, ವಿವಾಹ ಮಹೋತ್ಸವ ಹೀಗೆ ಅವರ ಬದುಕಿನ ಕಾಲಘಟ್ಟಕ್ಕೆ ಪೂರಕವಾಗಿ 5,000 ತಾಯಂದಿರಿಗೆ ಉಡಿ ತುಂಬುವ ಕಾರ್ಯವಿರಬಹುದು, ನಾಮಕರಣ ಸಂದರ್ಭ ಅಂದಿನ ವೈಶಿಷ್ಟ್ಯತೆಯ ರೀತಿಯಲ್ಲಿ ಕಾರ್ಯ ಸಂಘಟಿಸಿದ್ದು ಅವರ ವಿವಾಹ ಸಂದರ್ಭ ವಿವಾಹ ಕಾರ್ಯ ಕೂಡ ಜರುಗಿಸಿದ್ದು ಹೀಗೆ ಇಡೀ ಪುರಾಣವೇ ದೃಶ್ಯ ರೂಪಕದಂತೆ ಕಾವ್ಯಾತ್ಮಕದಂತೆ ಬಸವ ಪುರಾಣ ಭಾಸ್ಕರ ಶ್ರೀ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಉಪ್ಪಿನ ಬೆಟಗೇರಿ ಶ್ರೀಗಳಿಂದ ಬಸವಪುರಾಣ ಮೂಡಿ ಬಂದಿದ್ದು ಪ್ರತಿ ದಿನ ಹತ್ತು ಸಾವಿರಕ್ಕೂ ಹೆಚ್ಚು ಜನರೂ ಜಾತಿ, ಮಥ, ಪಂಥವೆನ್ನದೇ ಪುರಾಣ ಶ್ರವಣಕ್ಕೆ ಆಗಮಿಸಿದ್ದು ಐತಿಹಾಸಿಕ ಚಾರಿತ್ರೆವೆನಿಸಿದೆ.

ಮುನವಳ್ಳಿಯಲ್ಲಿ ಸೋಮಶೇಖರ ಮಠದ 14ನೇ ಪೀಠಾಧಿಪತಿಗಳಾಗಿದ್ದ ಶ್ರೀ ಲಿಂ. ಬಸವಲಿಂಗ ಮಹಾಸ್ವಾಮಿಗಳವರ 60ನೇ ಪುಣ್ಯಸ್ಮರಣೋತ್ಸವ ಬಹು ವಿಜೃಂಭಣೆಯಿಂದ 3-1-2016ರಿಂದ 3-2-2016ರವರೆಗೆ ನಡೆಯಿತು. ಬಸವ ಪುರಾಣ ಭಾಸ್ಕರ ಶ್ರೀ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಉಪ್ಪಿನ ಬೆಟಗೇರಿ ಶ್ರೀಗಳಿಂದ ಬಸವಪುರಾಣ ಪ್ರಾರಂಭಿಸಿ ಪೆಭ್ರುವರಿ 1ರಿಂದ 3ರವರೆಗೆ 63 ಜೋಡಿ ಸಾಮೂಹಿಕ ವಿವಾಹ, ಅಧ್ಯಾತ್ಮಿಕ ಇತಿಹಾಸದಲ್ಲ್ಲಿಯೇ ಪ್ರಪ್ರಥಮ ಬಾರಿಗೆ 63 ಹಿರಿಯ ಪೂಜ್ಯರಿಗೆ ಒಂದೇ ಭವ್ಯ ವೇದಿಕೆಯಲ್ಲಿ ಏಕಕಾಲಕ್ಕೆ ತುಲಾಭಾರ, ರೈತ ಸಮಾವೇಶ, ಭಾವೈಕ್ಯ ಸಮ್ಮೇಳನ, ಮುರುಘಶ್ರೀ ಪ್ರಶಸ್ತಿ ಪ್ರಧಾನ ಹಾಗೂ ಜಂಗಮೋತ್ಸವ ಬಸವ ಪುರಾಣ ಮಂಗಲ ಹಾಗೂ ಶ್ರೀ ಮಠದ ಪೂಜ್ಯರಿಗೆ 18ನೇ ವರ್ಷದ ಪಟ್ಟಾಧಿಕಾರ ವಾರ್ಷಿಕೋತ್ಸವ ಸಮಾರಂಭ ಹೀಗೆ ಹತ್ತು ಹಲವು ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಮುನವಳ್ಳಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಪ್ರಸಿದ್ದ ಗ್ರಾಮ. ಮಲಪ್ರಭಾ ನದಿ, ರೇಣುಕಾ ಸಕ್ಕರೆ ಕಾರ್ಖಾನೆ ಜೊತೆಗೆ ಇತಿಹಾಸದ ಹಿನ್ನಲೆಯಲ್ಲಿ ಮುನಿಗಳ ನಾಡು. ಇಲ್ಲಿ ಮಠಮಾನ್ಯಗಳು, ದೇವಾಲಯಗಳು, ನಾಡಿನೆಲ್ಲೆಡೆ ಖ್ಯಾತಿ ಗಳಿಸಿದ ದೇವಗಿರಿ ಯಾದವರ ಕಾಲದಲ್ಲಿ ಜೀರ್ಣೋದ್ದಾರಗೊಂಡ ಪಂಚಲಿಂಗೇಶ್ವರ ದೇವಾಲಯ, ಕೋಟೆ, ಚಿದಂಬರ ದೀಕ್ಷಿತರ ಕೈವಲ್ಯಾಶ್ರಮ ಮಠ.ನದಿ ದಡದ ಒಂದು ಬದಿಗೆ ಆಲೂರಮಠ ಮತ್ತೊಂದೆಡೆ ವಿಠೋಭಾ ಮಂದಿರ, ವೆಂಕಟೇಶ್ವರ ದೇವಾಲಯ, ವಿಷ್ಣುತೀರ್ಥರ ಕಟ್ಟೆ, ಗ್ರಾಮದ ಸೂಲಕಟ್ಟಿ ಅಗಸಿ ಹತ್ತಿರ ಸೋಮಶೇಖರಮಠ ತನ್ನದೇ ಆದ ಕಾರ್ಯಗಳಿಂದ ಗಮನ ಸೆಳೆಯುತ್ತಿವೆ.

ಮುನವಳ್ಳಿಯನ್ನು ಮುನೀಂದ್ರವಳ್ಳಿ, ಮುನಿಗಳ ಹಳ್ಳಿ, ಮುನಿಪಳ್ಳಿ, ಮುನವಳ್ಳಿ ಎಂದು ಕರೆಯಲಾಗಿದ್ದು ಧಾರವಾಡ-ಹುಬ್ಬಳ್ಳಿ ಮತ್ತು ಬೆಳಗಾವಿ ಭಾಗಕ್ಕೆ ತೀರ ಹತ್ತಿರ. ಅಂದರೆ ಧಾರವಾಡದಿಂದ 56 ಕಿ.ಮೀ., ಬೆಳಗಾವಿಯಿಂದ 76 ಕಿ.ಮೀ., ಗೋಕಾಕದಿಂದ 40 ಕಿ.ಮೀ., ರಾಮದುರ್ಗದಿಂದ 40 ಕಿ.ಮೀ., ನರಗುಂದದಿಂದ 40 ಕಿ.ಮೀ. ಅಂತರ ಮತ್ತು ಎಲ್ಲ ಸ್ಥಳಗಳಿಂದಲೂ ರಸ್ತೆ ಮಾರ್ಗ ಹೊಂದಿದ್ದು ಸಾಕಷ್ಟು ವಾಹನ ಸೌಕರ್ಯ ಒಳಗೊಂಡಿದೆ.ಸೋಮಶೇಖರ ಮಠ ತನ್ನದೇ ಆದ ಮುನಿ ಪರಂಪರೆ ಹೊಂದಿದ್ದು ಇದರ 16ನೇ ಪೀಠಾಧಿಪತಿಗಳಾಗಿ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ದಯಮಾಡಿಸಿದ ಮೇಲೆ ಈ ಭಾಗದಲ್ಲಿ ನವ ಮನ್ವಂತರವೇ ಕಾಲಿಟ್ಟಿತು. ಪೂಜ್ಯರು ಪ್ರತಿವರ್ಷ ಶ್ರೀ ಲಿಂಗೈಕ್ಯ ಬಸವಲಿಂಗ ಮಹಾಸ್ವಾಮಿಗಳವರ ಪುಣ್ಯಸ್ಮರಣೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಧಾರ್ಮಿಕ ಪರಂಪರೆಯಲ್ಲಿ ವಿನೂತನ ಹೆಜ್ಜೆಯನ್ನಿರಿಸಿದರು.
ಶ್ರೀ ಲಿಂ. ಬಸವಲಿಂಗ ಮಹಾಸ್ವಾಮಿಗಳ 60ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮಗಳು ಜರುಗಿದವು. ಬಸವ ಪುರಾಣವಂತೂ ತಾಲೂಕಿನ ಎಲ್ಲ ಭಾಗದ ಜನರಲ್ಲಿ ವಚನಸಾಹಿತ್ಯದ ಹರಿಕಾರನ ಕುರಿತು ಹೊಸ ಸಂಚಲನವನ್ನೇ ಸೃಷ್ಟಿಸಿತು. ಸುತ್ತಮುತ್ತಲಿನ ಗ್ರಾಮದ ಜನಸಮೂಹವಂತೂ ಪುರಾಣ ಕಾರ್ಯಕ್ಕೆ ಸ್ಪಂಧಿಸಿದ ರೀತಿಯಂತೂ ಬರೀ ಶಬ್ದಗಳಿಂದ ವರ್ಣಿಸಲಸಾಧ್ಯ. ಪ್ರತಿದಿನ ಪ್ರತಿ ಗ್ರಾಮಗಳಿಂದ ಹಿರಿಯರೊಡಗೂಡಿ ಜನತೆ ತಮ್ಮದೇ ಆದ ರೀತಿಯಲ್ಲಿ ಚಕ್ಕಡಿ, ಟ್ಯಾಕ್ಟರ್‍ಗಳಲ್ಲಿ ಆಗಮಿಸುವ ಸಂಭ್ರಮ ಸಡಗರ ವೈಶಿಷ್ಟ್ಯಪೂರ್ಣವಾದುದು. ಅವರು ಪುರಾಣ ಕೇಳಲು ಬರುವ ರೀತಿ ಹೇಗಿದೆಯೆಂದರೆ ಪುರಾಣ ಮುಗಿದ ನಂತರ ಪುರಾಣಕ್ಕೆ ಆಗಮಿಸಿದ ಎಲ್ಲರಿಗೂ ಪ್ರಸಾದ ವ್ಯವಸ್ಥೆಗೆ ಅನುಕೂಲವಾಗುವ ತಮಗಿಷ್ಟವಾದ ವಿವಿಧ ರೀತಿಯ ಭಕ್ಷ್ಯಗಳು, ರೊಟ್ಟಿ, ಹಣ್ಣು-ಹಂಪಲಗಳನ್ನು ದವಸ ದಾನ್ಯಗಳನ್ನು ತಮ್ಮೂರಿನ ಸಕಲರೊಂದಿಗೆ ಮಾಡಿಕೊಂಡು ಕುಂಭಮೇಳ,ಆರುತಿ, ವಾದ್ಯಮೇಳದೊಂದಿಗೆ ಆಗಮಿಸಿ ಪುರಾಣ ಶ್ರವಣ ಮಾಡುವ ರೀತಿ ನಾಡಿಗೇ ಮಾದರಿ.
ಇಂಥ ಮಠ ಹಮ್ಮಿಕೊಂಡಿರುವ ಧಾರ್ಮಿಕ ಚಟುವಟಿಕೆಗಳು ನಿಜಕ್ಕೂ ಅಭೂತಪೂರ್ವ. ಶ್ರೀ ಮಠವು ಪುರಾತನವಾದುದು. ಈ ಮಠದ ಮುಂಭಾಗ ಹಳೆಯ ಕಲ್ಲುಗಳಿಂದ ಮಹಾದ್ವಾರ ಒಳಗೊಂಡಿದ್ದು ಒಳ ಪ್ರಾಂಗಣದಲ್ಲಿ ಕರ್ತೃ ಗದ್ದುಗೆ, ಪಕ್ಕದಲ್ಲಿ ಮಹಡಿ ಒಳಗೊಂಡಿದ್ದು ಹಳೆಯ ಕಾಲದ ಕಟ್ಟಿಗೆಯ ಬಳಸಿ ನಿರ್ಮಿಸಲಾಗಿದ್ದು, ಪಕ್ಕದಲ್ಲಿ ಸಭಾಭವನ ಹೊಂದಿದ್ದು ಪುರಾತನ ಇತಿಹಾಸದ ಜೊತೆಗೆ ಆಧುನಿಕ ಸ್ಪರ್ಶದ ಕಟ್ಟಡದೊಂದಿಗೆ ಮೇಳೈಸಿರುವ ಸೋಮಶೇಖರ ಮಠ ಮುನವಳ್ಳಿಯಲ್ಲಿ ಒಂದು ಮಾದರಿ ಮಠವಾಗಿ ಕಂಗೊಳಿಸುತ್ತಿದೆ.ಆರೇನೆಂದಡೂ ಓರಂತಿಪ್ಪುದೇ ಸಮತೆ, ಆರು ಜರಿದರೂಅವರೆನ್ನ ಮನದ ಕಾಳಿಕೆಯ ಕಳೆದರೆಂಬುದೇ ಸಮತೆಆರು ಸ್ತುತ್ಯ ಮಾಡಿದರೂ ಅವರೆನ್ನ ಜನ್ಮಜನ್ಮದ ಹಗೆಗಳೆಂಬುದೇ ಸಮತೆ
ಇಂತಿದು ಗುರುಕಾರುಣ್ಯ, ಮನ ವಚನ ಕಾಯದಲ್ಲಿ ಅವಿತತವಿಲ್ಲದಿರ್ದೆಡೆಕಪಿಲ ಸಿದ್ದಮಲ್ಲಿಕಾರ್ಜುನಾ, ನಿನ್ನವರ ನೀನೆಂಬುದೇ ಸಮತೆ.
ಎಂಬ ಶಿವಯೋಗಿ ಸಿದ್ದರಾಮನ ಸಮತಾದೃಷ್ಟಿಯ ವಚನವನ್ನು ನೆನೆಯುತ್ತ ಮುನವಳ್ಳಿಯ ನಡೆದಾಡುವ ದೇವರೆಂದೇ ಜನರಲ್ಲಿ ಬಿಂಬಿತವಾದ ಮುರುಘೇಂದ್ರ ಮಹಾಸ್ವಾಮಿಗಳ ಬದುಕು ಕೂಡ ಕಾಯಕಯೋಗಿಗಳಾಗಿ, ಶ್ರೀ ಮಠದ ಹೆಸರನ್ನು ಇಂದು ಜನಮಾನಸದಲ್ಲಿಚಿರಸ್ಥಾಯಿಗೊಳಿಸುವ ಜೊತೆಗೆ ಮುನವಳ್ಳಿ ಮುನಿಗಳ ಹಳ್ಳಿ ಎಂಬ ಪರಂಪರೆಯನ್ನು ಉಳಿಸಿಕೊಂಡು ಬರುವಲ್ಲಿ ತಮ್ಮದೇ ಆದ ಕಾಯಕದಲ್ಲಿ ತೊಡಗಿದ್ದು ಇತ್ತೀಚಿನ ಮಹದಾಯಿ ಹೋರಾಟದಲ್ಲಿಯೂ ಕೂಡ ಶ್ರೀಗಳ ಪಾತ್ರ ಮಹತ್ವದ್ದಾಗಿದೆ ಎಂದರೆ ಅತಿಶಯೋಕ್ತಿಯಲ್ಲ.ಮುನವಳ್ಳಿ ಸೋಮಶೇಖರ ಮಠಕ್ಕೆ ಬಹುದೊಡ್ಡ ಪರಂಪರೆಯಿದೆ. ಈ ಮಠಕ್ಕೆ 15 ಜನ ಮಹಾಸ್ವಾಮಿಗಳು ಆಗಿ ಹೋಗಿದ್ದಾರೆ. ಇಂತಹ ಸತ್ಪರಂಪರೆ ಹೊಂದಿದ ಮಠಕ್ಕೆ 16ನೇ ಪೀಠಾಧಿಕಾರಿಗಳಾಗಿ ಬಂದವರು ಶ್ರೀ ಮ.ನಿ.ಪ್ರ. ಮುರುಘೇಂದ್ರ ಮಹಾಸ್ವಾಮಿಗಳು, ಮಠಕ್ಕೆ ಬಂದ ಕೆಲವೇ ದಿನಗಳಲ್ಲಿ ಭಕ್ತರ ಪ್ರೀತಿಯನ್ನು ಸಂಪಾದಿಸಿ ತಮ್ಮ ಪೂಜಾಬಲ ಹಾಗೂ ಕಾಯಕದಿಂದ ಮುನವಳ್ಳಿಯ ನಡೆದಾಡುವ ದೇವರೆಂದು ಜನರಿಂದ ಬಿಂಬಿತವಾದವರು.

 

ಮುನವಳ್ಳಿಯ ಸುತ್ತಮುತ್ತಲಿನ ಅನೇಕ ಸ್ಥಳಗಳಲ್ಲಿ ಹಾಗೂ ಮುನವಳ್ಳಿಯಲ್ಲಿ ಯಾವುದೇ ಕಾರ್ಯಕ್ರಮಗಳಿರಲಿ, ಯಾವುದೇ ಜಾತಿ ಜನಾಂಗದ ಸಭೈ ಸಮಾರಂಭಗಳಿರಲಿ ಅಲ್ಲಿ ಪೂಜ್ಯರ ಸಾನಿಧ್ಯೆ ಇದ್ದದ್ದೇ. ಯಾವುದೇ ಸತ್ಕರ್ಮ ಕಾರ್ಯಗಳಿದ್ದರೂ ಪೂಜ್ಯರ ಸಲಹೆ ಕೇಳುವ ಮೂಲಕ ಮುಂದಡಿಯಿಡುವ ಮಟ್ಟಿಗೆ ಜನರಲ್ಲಿ ಪೂಜ್ಯರು ನೆಲೆಸಿರುವರು.
ಶ್ರೀಗಳ ಕಿರುಪರಿಚಯದ ನೋಟ : ಮುರುಘೇಂದ್ರ ಶರಣರು ಮೂಲತ:

ಸವದತ್ತಿ ತಾಲೂಕಿನ ಕುಶಲಾಪುರ ಎಂಬ ಗ್ರಾಮದ ಶರಣ ದಂಪತಿಗಳಾದ ಲಿಂ. ವೀರಯ್ಯಾ ಮತ್ತು ಸಿದ್ದಮ್ಮನವರ ಉದರದಲ್ಲಿ 10 ಜೂನ್ 1974ರಲ್ಲಿ ಜನ್ಮ ತಾಳಿದರು. ಇವರ ಮನೆಯಲ್ಲಿ ಮೊದಲಿನಿಂದಲೂ ಅಥಣಿಯ ಮುರುಘೇಂದ್ರ ಸ್ವಾಮಿಗಳ ಬಗ್ಗೆ ಅಪಾರ ಭಕ್ತಿ, ಮಮತೆ. ಹೀಗಾಗಿ ಇವರಿಗೆ ಮುರುಘೇಂದ್ರ ಎಂಬ ನಾಮಕರಣ ಮಾಡುವ ಮೂಲಕ ಇವರ ಮಾತಾಪಿತರು ಮುರುಘೇಂದ್ರರ ಹೆಸರು ಕರೆದರು.
ಬೆಳೆಯ ಸಿರಿ ಮೊಳಕೆಯಲ್ಲಿ ಎಂಬಂತೆ ಬಾಲ್ಯದಲ್ಲಿನ ಇವರ ತೇಜಸ್ಸು ಮುಂದೊಂದು ದಿನ ಈ ವ್ಯಕ್ತಿ ಸಮಾಜದಲ್ಲಿ ಹೆಸರುವಾಸಿಯಾಗುತ್ತಾನೆ ಎಂಬಂತಿತ್ತು. ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಕಲಿತು ಮುಂದೆ ಪ್ರೌಢ ಶಿಕ್ಷಣವನ್ನು ಯಕ್ಕುಂಡಿ ಗ್ರಾಮದಲ್ಲಿ ಪೂರೈಸಿದರು. ಬೆಳಗಾವಿಯ ಶ್ರೀ ಶಿವಬಸವ ಮಹಾಸ್ವಾಮಿಗಳು ಹಾಗೂ ಯಕ್ಕುಂಡಿಯ ಶ್ರೀ ವಿರುಪಾಕ್ಷ ಪೂಜ್ಯರ ಅನುಗ್ರಹದ ಮೇರೆಗೆ ಮತ್ತು ಗ್ರಾಮದ ಗುರುಹಿರಿಯರು ಹಿತೈಷಿಗಳು ಇವರನ್ನು ಧಾರ್ಮಿಕ ಶಿಕ್ಷಣ ಪಡೆಯಲು ಶಿವಯೋಗ ಮಂದಿರಕ್ಕೆ ಕಳುಹಿಸಿದರು.

 

ಶಿವಯೋಗಮಂದಿರದ ಪ್ರಭೈಯಲ್ಲಿ ಮಿಂದ ಇವರು ವಚನ ಸಾಹಿತ್ಯದ ದೀರ್ಘ ಅಧ್ಯಯನ, ಶಾಸ್ತ್ರ, ಅಧ್ಯಾತ್ಮ ಯೋಗ, ಸಾಂಸ್ಕೃತವನ್ನು ಸತತ ಮೂರು ವರ್ಷಗಳವರೆಗೆ ಅಧ್ಯಯನಗೈದರು. ಇನ್ನೂ ಹೆಚ್ಚಿನ ಅದ್ಯಯನ ಮಾಡಬೇಕೆಂಬ ಹಂಬಲದಿಂದ ಕಮತಗಿಯ ಪೂಜ್ಯರಾದ ಶ್ರೀ ಹುಚ್ಚೇಶ್ವರ ಸ್ವಾಮಿಗಳ ಹಾಗೂ ಅಲ್ಲಿಯ ಭಕ್ತರ ಬಳಿ ಬಂದಾಗ ಮೈಸೂರಿನ ಸುತ್ತೂರು ಮಠಕ್ಕೆ ಸಾಂಸ್ಕೃ ತದಲ್ಲಿ ಹೆಚ್ಚಿನ ವ್ಯಾಸಾಂಗ ಪಡೆಯಲು ಕಳುಹಿಸಿದರು, ಇಲ್ಲಿಯ ಜೆಎಸ್‍ಎಸ್ ಗುರುಕುಲ ವಿದ್ಯಾಪೀಠದಲ್ಲಿದ್ದುಕೊಂಡು ಶಕ್ತಿ ವಿಶಿಷ್ಟಾದ್ವೈತವನ್ನು ಮಹಾರಾಜ ಸಾಂಸ್ಕೃತ ಮಹಾವಿದ್ಯಾಲಯದಲ್ಲಿ ಪೂರೈಸಿದರು. ಸುತ್ತೂರು ಮಠ ಅಧ್ಯಾತ್ಮಿಕ ಒಲವಿನ ತಾಣ.

 

ಮೈಸೂರು ರಾಜ ಮನೆತನದ ಗುರುಗಳಾದ ಲಿಂ. ಶಿವರಾತ್ರೀಶ್ವರರ ಭಕ್ತಿಯ ಬಿಲ್ವವೇ ಈ ಮಠ. ಇಂತಹ ಮಠದಲ್ಲಿ ಜ್ಞಾನ ಸಂಪಾದನೆ ಕೂಡ ವಿಶಿಷ್ಟವೇ ಅದು ಮುರುಘೇಂದ್ರ ಮಹಾಸ್ವಾಮೀಜಿಯವರಿಗೆ ಸಿದ್ದಿಸುವ ಜೊತೆಗೆ ಜ್ಞಾನದ ಪ್ರಸರಣಕ್ಕೂ ಪ್ರೇರಣೆ ನೀಡಿತು,1999ನೇ ಜನೇವರಿ 24 ರಂದು ಮುನವಳ್ಳಿಯ ಸೋಮಶೇಖರ ಮಠಕ್ಕೆ ಪರಮಪೂಜ್ಯ ಹಾನಗಲ್ಲ ಕುಮಾರ ಸ್ವಾಮಿಗಳ ಅಪ್ಪಣೆಯ ಮೇರೆಗೆ ಹಾಗೂ ಇದೇ ಮಠದ 15 ನೆಯ ಪೀಠಾಧಿಪತಿಗಳಾಗಿದ್ದ ಶ್ರೀ ಚನ್ನಬಸವ ಮಹಾಸ್ವಾಮಿಗಳ ಸದಿಚ್ಚೆಯ ಮೇರೆಗೆ ಹಾನಗಲ್ಲ ಪರಮಪೂಜ್ಯರಾದ ಶ್ರೀ ಕುಮಾರ ಸ್ವಾಮಿಗಳು ಅಂದರೆ ಈಗಿನ ಹುಬ್ಬಳ್ಳಿಯ ಮೂರುಸಾವಿರ ಮಠದ ಜಗದ್ಗುರುಗಳಾದ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಗುರುಸಿದ್ದ ರಾಜಯೋಗೀಂದ್ರ ಮಹಾಸ್ವಾಮಿಗಳ ಅವರಿಂದ ಅಧಿಕಾರ ಪಡೆದು ಮುನವಳ್ಳಿಯ ಸೋಮಶೇಖರ ಮಠಕ್ಕೆ ಪೀಠಾಧಿಪತಿಗಳಾದರು.

 

ಸತ್ಪರಂಪರೆ ಹೊಂದಿದ ಶ್ರೀಮಠಕ್ಕೆ ಆಗಮಿಸಿದ ಸ್ವಾಮೀಜಿ ಗ್ರಾಮದ ಎಲ್ಲ ಹಿರಿಯರು, ಯುವಕರು, ಮಕ್ಕಳು, ಅಕ್ಕನ ಬಳಗದ ಮಾತೆಯರು ಹೀಗೆ ಎಲ್ಲರನ್ನು ಗಮನಕ್ಕೆ ತೆಗೆದುಕೊಂಡು ಕಾಯಕ ದಾಸೋಹದ ಅರಿವು ಮೂಡಿಸುವ ಜೊತೆಗೆ ಯಾವ ಜಾತಿ ಜಂಜಾಟಕ್ಕೆ ಸಿಲುಕದೇ ಎಲ್ಲ ಸಮಾಜದವರೊಂದಿಗೆ ಬೆರೆತು ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಜನಹಿತ ಧಾರ್ಮಿಕ ಚಿಂತನೆಗಳನ್ನು ಮಾಡುತ್ತ ಮುನವಳ್ಳಯಲ್ಲಿ ಶ್ರೀ ಮುರುಘರಾಜೇಂದ್ರ ಯೋಗ ವಿದ್ಯಾ ಕೇಂದ್ರ,ಶ್ರೀ ಅನ್ನದಾನೇಶ್ವರ ಸ್ವತಂತ್ರಪೂರ್ವ ಹಾಗೂ ಪದವಿ ಮಹಾವಿದ್ಯಾಲಯ, ಶ್ರೀ ಅನ್ನದಾನೇಶ್ವರ ಗ್ರಾಮೀಣ ಅಭಿವೃದ್ದಿ ಸಂಘ, ಶ್ರೀ ಅಕ್ಕನ ಬಳಗ, ಶ್ರೀ ಶರಣ ಬಳಗ, ಬೈಲಹೊಂಗಲದಲ್ಲಿ ಶ್ರೀ ವಿರುಪಾಕ್ಷ ಸ್ವಾಮಿ ವಿದ್ಯಾರ್ಥಿನಿಲಯ, ಭಂಡಾರಹಳ್ಳಿಯಲ್ಲಿ ಶ್ರೀಮತಿ ಅಂದಾನೆಮ್ಮ ಯಕ್ಕುಂಡಿಮಠ ಕನ್ನಡ ಪೂರ್ವಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆ ಅನ್ನದಾನೇಶ್ವರ ಗ್ರಾಮೀಣ ಅಭಿವೃದ್ದಿ ಸಂಘ ಸ್ಥಾಪಿಸುವ ಮೂಲಕ ಅನ್ನದಾಸೋಹ, ಜ್ಞಾನದಾಸೋಹ ಕಾರ್ಯಗಳಿಗೆ ಚಾಲನೆ ನೀಡಿರುವರು.

 

ತಾಲೂಕಿನಾದ್ಯಂತ ಅಷ್ಟೇ ಅಲ್ಲ ರಾಜ್ಯದ ವಿವಿದೆಡೆ ಧಾರ್ಮಿಕ ಪ್ರವಚನಗಳು, ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಜೊತೆಗೆ ಮುನವಳ್ಳಿಯ ನಾಡಹಬ್ಬ, ಹಾಗೂ ಜೇವೂರ ಗುರುಗಳ ಪ್ರತಿಷ್ಠಾನ ಸಮಾರಂಭಗಳಲ್ಲಿ ಭಾಗವಹಿಸುವ ಜೊತೆಗೆ ಅಲ್ಲದೇ ನಾಡಿನ ವಿವಿದೆಡೆ ಸಂಭವಿಸಿದ ಕ್ಷಾಮ, ಭೂಕಂಪ, ನೆರೆಸಂತ್ರಸ್ತ ಘಟನೆಗಳು ನಡೆದಾಗ ಗ್ರಾಮದ ಹಿರಿಯರು ಯುವಕರೊಡನೆ ಸೇರಿ ಸಂತ್ರಸ್ತ ಜನರಿಗೆ ನೆರವು ನೀಡುವ ಕಾರ್ಯಕ್ಕೆ ಧಾನ್ಯ, ಹಣ ಇತ್ಯಾದಿ ಸಂಗ್ರಹಿಸಿ ನೀಡುವ ಜನಪರ ಕಾಳಜಿಯುಳ್ಳ ಕಾರ್ಯಗಳನ್ನು ಸಂಘಟಿಸುತ್ತ ನಾಡು ನುಡಿಯ ಬಿತ್ತರಿಸುವಲ್ಲಿ ಕಾಳಜಿ ವಹಿಸಿರುವರು. ಪ್ರತಿವರ್ಷ ವರವಿಕೊಳ್ಳ ಸುಕ್ಷೇತ್ರದಲ್ಲಿ ಜನಸಾಮಾನ್ಯರೊಡನೆ ಶರಣರು ಎಂಬ ತತ್ವದಡಿಯಲ್ಲಿ ಇಷ್ಟಲಿಂಗಪೂಜಾ ವಿದಾನ, ಅದರ ಮಹಿಮೆ ಹಾಗೂ ಕಾಯಕನಿಷ್ಠೆ ಕುರಿತ ಕಾರ್ಯದಲ್ಲಿ ತೊಡಗಿರುವರು. ಶ್ರೀಮಠದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜೊತೆಗೆ ಪ್ರತಿವರ್ಷ ತಮ್ಮ ಹಿಂದಿನ ಗುರುಗಳಾದ ಲಿಂ. ಬಸವಲಿಂಗ ಮಹಾಸ್ವಾಮಿಗಳವರ

 

ಪುಣ್ಯಸ್ಮರಣೋತ್ಸವವನ್ನು ಹಮ್ಮಿಕೊಳ್ಳುತ್ತ ಬಂದಿದ್ದು ಮುನವಳ್ಳಿಯ ಸಕಲ ಸದ್ಬಕ್ತರು, ಶಾಸಕರು, ಸಂಸದರ ಸಹಾಯ ಸಹಕಾರಗಳಿಂದ ಅನ್ನದಾನೇಶ್ವರ ದಾಸೋಹ ಭವನ ನಿರ್ಮಿಸಿದ್ದು ಶ್ರೀ ಮಠದಲ್ಲಿನ ಕರ್ತೃ ಗದ್ದುಗೆಗೆ ನಿತ್ಯವೂ ಪೂಜೆ, ಅಭಿಷೇಕ, ಬಿಲ್ವಾರ್ಚನೆ ಕಾರ್ಯಗಳು ನಡೆಯುವಂತೆ ಮಾಡಿದ್ದು ಪೂಜಾನಿಷ್ಠರಾಗಿ ವೀರಶೈವ ತತ್ವದ ಪ್ರಕಾರ ಅಷ್ಟಾವರಣ, ಪಂಚಾಚಾರಗಳನ್ನು ಅಳವಡಿಸಿಕೊಂಡು ಇವುಗಳನ್ನು ಜನರಲ್ಲಿ ಬಿತ್ತಲು ಪ್ರಯತ್ನಿಸುತ್ತಿರುವರು.ನಡೆಯೊಳಗೆ ನುಡಿತುಂಬಿ, ನುಡಿಯೊಳಗೆ ನಡೆ ತುಂಬಿನಡೆ ನುಡಿ ಎರಡನು ಪರಿಪೂರ್ಣ ತುಂಬಿ ಲಿಂಗವ
ಕೂಡಬಲ್ಲಾತನೇ ಶರಣ ನೋಡಾ ಅಖಂಡೇಶ್ವರಾನಡೆ ನುಡಿ ಎರಡೂ ಸಮಪ್ರಮಾಣದಲ್ಲಿ ಪರಿಪೂರ್ಣ ತುಂಬಿ ಮಾನವತ್ವದಿಂದ ಶರಣತ್ವಕ್ಕೆ, ಪ್ರೀತಿ ತುಂಬಿದ ನುಡಿಯಿಂದ ಸಕಲಕ್ಕೂ ಕಾರಣರು ಮುನವಳ್ಳಿಯ ನಡೆದಾಡುವ ದೇವರು ಮುನಿಪುರಾಧೀಶರಾದ ಶ್ರೀ ಮ.ನಿ.ಪ್ರ. ಮುರುಘೇಂದ್ರ ಮಹಾಸ್ವಾಮಿಗಳು.

 

2011 ರಲ್ಲಿ ಲಿಂ. ಬಸವಲಿಂಗ ಸ್ವಾಮಿಗಳ ಪುಣ್ಯಸ್ಮರಣೆಯ ಕಾರ್ಯಕ್ರಮದ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಹನೀಯರನ್ನು ಗೌರವಿಸುವ ಜೊತೆಗೆ ಸ್ಥಳೀಯ ಗ್ರಾಮ ಪಂಚಾಯತಿಯಲ್ಲಿ ಸೇವೆಗೈಯುತ್ತಿರುವ ಕಾರ್ಮಿಕರನ್ನು 2012ರಲ್ಲಿ ಗ್ರಾಮದ ಎಲ್ಲ ಸಮಾಜದ ಹಿರಿಯರಿಗೆ ಗೌರವ ಸನ್ಮಾನವನ್ನೂ 2013 ಸೈನಿಕರನ್ನು 2014 ರಲ್ಲಿ ಪಾಕ ಪ್ರವೀಣರನ್ನು 2015 ರಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು, ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಲಾಯಿತು.ಅಷ್ಟೇ ಅಲ್ಲ ದೇಹದಾನ, ನೇತ್ರದಾನ, ರಕ್ತದಾನ, ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸುವ ಮೂಲಕ ಸಾಂಸ್ಕೃತಿ  ಸೊಬಗನ್ನು ಇಮ್ಮಡಿಗೊಳಿಸಿದ್ದಾರೆ. ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಓರ್ವರಿಗೆ ಪ್ರತಿವರ್ಷ ಮುರುಘಶ್ರೀ ಪ್ರಶಸ್ತಿ ಪ್ರಧಾನ ಮಾಡುತ್ತಿರುವರು. 2014ರಲ್ಲಿ ಈ ಪ್ರಶಸ್ತಿ ನಾಟ್ಯಭೂಷಣ ಏಣಗಿ ಬಾಳಪ್ಪನವರಿಗೆ, 2015ರಲ್ಲಿ ಜನಪದ ಕಲಾವಿದ

 

ಸಿದ್ದು ಮೋಟೆಯವರಿಗೆ, ಈ ವರ್ಷ ಡಾ. ಮಹಾಂತೇಶ ರಾಮಣ್ಣವರ ಖ್ಯಾತ ವೈದ್ಯರು ಬೈಲಹೊಂಗಲ ಇವರಿಗೆ ಪ್ರಧಾನ ಮಾಡುತಿದ್ದು, ಈ ವರ್ಷ ಪ್ರತಿ ದಿನ ಪುರಾಣದ ನಂತರದ ಅವಧಿಯಲ್ಲಿ ವಿವಿಧ ರಂಗ, ಪತ್ರಕರ್ತರು, ಪುರಾಣ ಕಾರ್ಯಕ್ರಮಕ್ಕೆ ವಿವಿಧ ರೀತಿಯ ಸೇವೆಗೈಯುತ್ತಿರುವ ಗ್ರಾಮದ ಹಾಗೂ ಸುತ್ತಮುತ್ತಲಿನ ಗುರು-ಹಿರಿಯರನ್ನು ಸನ್ಮಾನಿಸುತ್ತ ಬಂದಿದ್ದು ಪೆಬ್ರುವರಿ 1ರಿಂದ 3ರವರೆಗಿನ ಕಾರ್ಯಕ್ರಮಗಳಲ್ಲಿಯೂ ಕೂಡ ಗುರುರಕ್ಷೆ ಗೌರವ ಸನ್ಮಾನಗಳು ಜರುಗಿದವು.ಮುರುಘೇಂದ್ರ ಮಹಾಸ್ವಾಮೀಜಿಯವರ ಸಮಾಜಮುಖಿ-ಸರ್ವತೋಮುಖಿ ಕಾರ್ಯಗಳು ಜನಮಾನಸದಲ್ಲಿ ಯಶಸ್ವಿ ರೀತಿಯಲ್ಲಿ ಒಡಮೂಡಿ ಕಾರ್ಯಗತವಾಗುವ ಜೊತೆಗೆ ಎಲ್ಲ ಜನಾಂಗದವರೂ ಈ ಕಾರ್ಯದಲ್ಲಿ ಕೈಗೂಡಿ ಬಹುಜನ ಸಿಖಾಯ-ಬಹು ಜನ ಹಿತಾಯ ಎಂಬಂತೆ ಸಾಗಿರುವುದು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಇವ ನಮ್ಮವ ಇವ ನಮ್ಮವ ಎಂದು ಬಗೆದು ನಾಡ ಕಟ್ಟುವ ಧರ್ಮ ರಕ್ಷಿಸುವ ಕಾರ್ಯದಲ್ಲಿ ಈ ಚಿಕ್ಕ ವಯಸ್ಸಿನ ಶ್ರೀಗಳವರು ಹಲವು ಮಾನ ಸನ್ಮಾನಗಳಿಗೆ ಭಾಜನರಾಗಿರುವರು.

 

ಪೂಜ್ಯರು ಮುನವಳ್ಳಿಯಲ್ಲಿ ಯಾವುದೇ ಜನಹಿತ ಕಾರ್ಯಕ್ರಮವಿದ್ದರೂ ಅದರಲ್ಲಿ ಪಾಲ್ಗೊಳ್ಳುವ ಉತ್ತಮ ಕಾರ್ಯಕ್ಕೆ ತಮ್ಮ ಸಹಕಾರವಿದೆ ಎಂಬುದನ್ನು ರೂಢಿಸುತ್ತ ಬಂದಿದ್ದು ಮಹದಾಯಿ ಹೋರಾಟ, ಕನ್ನಡಪರ ಜಾಗೃತಿ, ಬಡಮಕ್ಕಳ ಶಿಕ್ಷಣ, ಯೋಗ ತರಗತಿಗಳು, ಪದವಿವರೆಗಿನ ಶಿಕ್ಷಣ ವ್ಯವಸ್ಥೆ ಹೊಂದಿದ ತಮ್ಮದೇ ಕಾಲೇಜು, ಶ್ರಮದಾನಹೀಗೆ ಎಲ್ಲ ವಿಧದ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮಾದರಿಯಾಗಿರುವರು.

-ವೈ.ಬಿ. ಕಡಕೋಳ, ಮುನವಳ್ಳಿ
ಫೋನ್  ನಂಬರ್: 8147275277, 9449518400

Sri Raghav

Admin