ಸಹಜ ಸ್ಥಿತಿಯತ್ತ ಮರಳುತ್ತಿರುವ ತಮಿಳುನಾಡು

Jayalalitha-0001

ಚೆನ್ನೈ, ಡಿ.7-ಪುರುಚ್ಚಿ ತಲೈವಿ ಜಯಲಲಿತಾ ನಿಧನದಿಂದಾಗಿ ಕಳೆದೆರಡು ದಿನಗಳಿಂದ ಸ್ತಬ್ಧಗೊಂಡಿದ್ದ ತಮಿಳುನಾಡು ನಿಧಾನವಾಗಿ ಸಹಜ ಸ್ಥಿತಿಯತ್ತ ಮರುಳುತ್ತಿದೆ. ನಾಯಕಿಯ ಅಗಲಿಕೆಯ ದು:ಖದ ನಡುವೆಯೂ ಜನಜೀವನ ಯಥಾಪ್ರಕಾರ ಸಾಗಿದೆ. ರಾಜಧಾನಿ ಚೆನ್ನೈ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಇಂದು ಬೆಳಿಗ್ಗೆಯಿಂದ ವ್ಯಾಪಾರ-ವಹಿವಾಟು ನಡೆಯುತ್ತಿದೆ. ಸರ್ಕಾರಿ ಕಚೇರಿಗಳು, ಬ್ಯಾಂಕ್‍ಗಳು, ವಾಣಿಜ್ಯ ಸಂಸ್ಥೆಗಳು, ಖಾಸಗಿ ಉದ್ಯಮಗಳು ಮತ್ತು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.  ಸರ್ಕಾರಿ ಬಸ್‍ಗಳು ಮತ್ತಿತರ ವಾಹನಗಳ ಸಂಚಾರ ಎಂದಿನಂತಿದೆ. ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ಹೊರ ರಾಜ್ಯಗಳ ಬಸ್ ಸಂಚಾರ ಸೇವೆ ಪುನರಾರಂಭಗೊಂಡಿದೆ. ಶಾಲೆ-ಕಾಲೇಜುಗಳ ರಜೆಯನ್ನು ಇಂದೂ ವಿಸ್ತರಿಸಲಾಗಿದೆ. ಜಯಲಲಿತಾ ನಿಧನಕ್ಕೆ ರಾಜ್ಯದ್ಯಾಂತ ಏಳು ದಿನಗಳ ಶೋಕಾಚರಣೆ ಘೋಷಿಸಲಾಗಿದೆ.

ಜಯಾ ಸಮಾಧಿ ಮುಂದೆ ನೆರೆದಿರುವ ಜನಸಾಗರ

ಚೆನ್ನೈ, ಡಿ.7-ತಮಿಳುನಾಡಿನ ಬಡವರ ಪಾಲಿನ ಅಧಿದೇವತೆ ಎಂದೇ ಬಿಂಬಿತವಾಗಿದ್ದ ಜಯಲಲಿತಾ ಸಮಾಧಿ ಇರುವ ಮರೀನಾ ಬೀಚ್‍ಗೆ ಇಂದು ಮುಂಜಾನೆಯಿಂದಲೇ ಸಹಸ್ರಾರು ದು:ಖತಪ್ತ ಅಭಿಮಾನಿಗಳು, ಮತ್ತು ಕಾರ್ಯಕರ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಸಮಾಧಿ ಬಳಿ ಇಂದೂ ಸಹ ಜನಸಾಗರವೇ ಹರಿದು ಬಂದಿದೆ.  ಮರೀನಾ ಬೀಚ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಇಂದೂ ಕೂಡ ಜನಪ್ರವಾಹವೇ ನೆರೆದಿರುವುದರಿಂದ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮುಂದುವರಿಸಲಾಗಿದೆ.  ನಿನ್ನೆ ತಮ್ಮ ಆರಾಧ್ಯದೈವ ಅಮ್ಮನ ಅಂತಿಮ ದರ್ಶನ ಪಡೆಯಲು ಸಾಧ್ಯವಾಗದ ಮಂದಿ ಹಾಗೂ ತಮಿಳುನಾಡಿನ ವಿವಿಧ ಜಿಲ್ಲೆಗಳ ಅಸಂಖ್ಯಾತ ಜನರು ಇಂದು ಬೆಳಿಗ್ಗೆ ಸಮಾಧಿ ಮುಂದೆ ಜಮಾಯಿಸಿ ಕಂಬನಿ ಮಿಡಿಯುತ್ತಿರುವ ದೃಶ್ಯ ಕಂಡುಬಂದಿತು. ಅನೇಕರು ಕಣ್ಣೀರು ಸುರಿಸುತ್ತಲೇ ಸಮಾಧಿ ಮುಂದೆ ನಿಂತು ಪ್ರಾರ್ಥಿಸುತ್ತಿದ್ದರು.  ಕಾಲಕ್ರಮೇಣ ಜನರ ಸಂಖ್ಯೆ ಏರುತ್ತಿದ್ದಂತೆ ಅವರನ್ನು ನಿಯಂತ್ರಿಸಲು ಪೊಲೀಸರು ಪರಿಶ್ರಮಪಡಬೇಕಾಯಿತು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin