ಸಾಂಖ್ಯಿಕ ಇಲಾಖೆಯ ಕಾರ್ಯಕ್ಕೆ ಸಚಿವರ ಮೆಚ್ಚುಗೆ
ಹಾಸನ, ಅ.25- ಸಂಖ್ಯಾ ಸಂಗ್ರಹಣಾ ಇಲಾಖೆ ವಿವಿಧ ಇಲಾಖೆಗಳ ನಡುವಿನ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದೆ. ಸರ್ಕಾರದ ಯೋಜನೆಗಳ ತಯಾರಿಗೆ ಅಗತ್ಯವಿರುವ ಅಂಕಿ-ಅಂಶಗಳ ಸಂಗ್ರಹದಂತಹ ಅಗತ್ಯ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ಸಾಂಖ್ಯಿಕ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಂ ತಿಳಿಸಿದ್ದಾರೆ.ನಗರದ ಹೊರ ವಲಯ ವಿಜಯನಗರ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಸಾಂಖ್ಯಿಕ ಇಲಾಖೆಯ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದ ಸಚಿವರು, ಸಾಂಖ್ಯಿಕ ಇಲಾಖೆ ಇತ್ತೀಚೆಗೆ ಸ್ವಂತ ಕಟ್ಟಡಗಳನ್ನು ಹೊಂದಲು ಪ್ರಾರಂಭಿಸಿದ್ದು ರಾಜ್ಯದಲ್ಲೇ ನಾಲ್ಕನೇ ಜಿಲ್ಲಾ ಕಚೇರಿ ಕಟ್ಟಡ ಹಾಸನದಲ್ಲಿ ಉದ್ಘಾಟನೆಯಾಗಿದೆ ಎಂದರು.
ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ, ಬಯಲು ಸೀಮೆ ಅಭಿವೃದ್ಧಿ ಮಂಡಳಿಗಳ ಕಾರ್ಯಕ್ರಮಗಳೂ ಸಹ ಸಾಂಖ್ಯಿಕ ಇಲಾಖೆಯ ಅಧೀನದಲ್ಲೇ ನಡೆಯುತ್ತದೆ ಎಂದ ಸಚಿವರು ಸಾಂಖ್ಯಿಕ ಇಲಾಖೆಯ ಅಧಿಕಾರಿ ಸಿಬ್ಬಂದಿಗಳ ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಮಾತನಾಡಿ, ಸಾಂಖ್ಯಿಕ ಇಲಾಖೆ ಒಂದು ಮುಖ್ಯವಾದ ಹಾಗೂ ವಿಶೇಷವಾದ ಕಾರ್ಯನಿರ್ವಹಿಸುವ ಇಲಾಖೆ ರಾಜ್ಯದ ಅಭಿವೃದ್ಧಿಗೆ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ಶಾಸಕ ಹೆಚ್.ಎಸ್.ಪ್ರಕಾಶ್ ಮಾತನಾಡಿ, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳೆರಡಕ್ಕೂ ಮಾಹಿತಿಯನ್ನು ಒದಗಿಸಿ ವಾಸ್ತವ ಅಂಶಗಳನ್ನು ನೀಡುವ ಜವಾಬ್ದಾರಿಯುತ ಕೆಲಸವನ್ನು ಸಾಂಖ್ಯಿಕ ಇಲಾಖೆ ನಿರ್ವಹಿಸುತ್ತದೆ. ಸರ್ಕಾರದ ಹಣ ಯಾವ-ಯಾವುದಕ್ಕೆ ಒದಗಿಸಬೇಕೆಂಬುವ ಮಾಹಿತಿ ಕೂಡ ಬಂದಿರುತ್ತದೆ ಎಂದರು.ಜಿಪಂಅಧ್ಯಕ್ಷ ಶ್ವೇತಾ ದೇವರಾಜ್, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ, ತಾಪಂ ಅಧ್ಯಕ್ಷ ಸತೀಶ್, ಅಪರ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಸಾಂಖ್ಯಿಕ ಇಲಾಖೆಯ ನಿರ್ದೇಶಕ ಸುಬ್ರಹ್ಮಣ್ಯ, ಅಪರ ನಿರ್ದೇಶಕಿ ವಸುಂದರಾ ಉಪಸ್ಥಿತರಿದ್ದರು.