ಸಾರ್ವಜನಿಕರೇ ತಯಾರಾಗಿರಿ, ಏಪ್ರಿಲ್ ಹೊಡೆಯಲಿದೆ ಕರೆಂಟ್ ‘ಶಾಕ್’..!

Spread the love

Electricity--0021
ಬೆಂಗಳೂರು, ಫೆ.2- ಮುಂದಿನ ಏಪ್ರಿಲ್ 1ರ ವೇಳೆಗೆ ವಿದ್ಯುತ್ ದರ ಪರಿಷ್ಕರಣೆ ಯಾಗಲಿದೆ ಎಂದು ಕರ್ನಾಟಕ ವಿದ್ಯುತ್‍ಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಕೆ.ಶಂಕರ್‍ಲಿಂಗೇಗೌಡ ಸ್ಪಷ್ಟಪಡಿಸಿದ್ದಾರೆ. ಇಂದು ವಸಂತನಗರದಲ್ಲಿ ಕೆಇಆರ್‍ಸಿಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 5 ಎಸ್ಕಾಂಗಳು ಹಾಗೂ ಕೆಪಿಟಿಸಿಎಲ್‍ಗಳು ಸೇರಿ 83 ಪೈಸೆಯಿಂದ 1ರೂ. 10ಪೈಸೆ ವರೆಗೂ ವಿದ್ಯುತ್ ದರ ಏರಿಕೆ ಮಾಡುವಂತೆ ಬೇಡಿಕೆ ಸಲ್ಲಿಸಿದೆ. ಈ ಪ್ರಸ್ತಾವನೆಯನ್ನು ಫೆ.19ರಿಂದ ವಿಚಾರಣೆಗೊಳಪಡಿಸಾಗುತ್ತಿದೆ. ಎಲ್ಲಾ ಎಸ್ಕಾಂಗಳಲ್ಲೂ ಆಯಾ ಕೇಂದ್ರ ಸ್ಥಾನದಲ್ಲೇ ವಿಚಾರಣೆ ನಡೆಸಲಾಗುವುದು ಎಂದರು.

ಎಸ್ಕಾಂಗಳ ಅಹವಾಲು ಕೇಳಲಾಗುವುದು, ಸಾರ್ವಜನಿಕರು, ಸಂಘ-ಸಂಸ್ಥೆಗಳ ಅಭಿಪ್ರಾಯಗಳನ್ನು ಕ್ರೂಢೀಕರಿಸಲಾಗುತ್ತದೆ. ಮಾ.2ರಂದು ಗುಲ್ಬರ್ಗದಲ್ಲಿ ಅಂತಿಮ ಹಂತದ ವಿಚಾರಣೆ ನಡೆಯಲಿದೆ. ಪ್ರಸ್ತಾವನೆ ಸಲ್ಲಿಸಿರುವ ಸಂಸ್ಥೆಗಳು ಸಮರ್ಥ ವಾದ ಮಂಡಿಸಬೇಕು. ಅವರ ವಾದ ನ್ಯಾಯಯುತವಾದುದ್ದೇ, ಅಲ್ಲವೇ ಎಂದು ಕೆಇಆರ್‍ಸಿ ಪರಿಶೀಲನೆ ನಡೆಸಲಿದೆ. ನಂತರ ಕೆಇಆರ್‍ಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಏ.1ರಿಂದ ಹೊಸ ದರಗಳು ಜಾರಿಯಾಗಬೇಕಾಗಿರುವುದರಿಂದ ಆ ವೇಳೆಗೆ ಎಲ್ಲಾ ರೀತಿಯ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಲಾಗುವುದು ಎಂದು ಹೇಳಿದರು.

ಕರ್ನಾಟಕ ವಿದ್ಯುತ್‍ಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‍ಸಿ) ಈವರೆಗೂ ಎಂಜಿ ರಸ್ತೆಯ ಖಾಸಗಿ ಕಟ್ಟಡವೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ತಿಂಗಳಿಗೆ 10 ಲಕ್ಷದಂತೆ ವರ್ಷಕ್ಕೆ 1.20ಕೋಟಿ ರೂ. ಬಾಡಿಗೆ ಪಾವತಿಸಲಾಗುತ್ತಿತ್ತು. ಈಗ ಸ್ವಂತ ಕಟ್ಟಡಕ್ಕೆ ಕೆಇಆರ್‍ಸಿಯನ್ನು ಫೆ.15ರಿಂದ ಸ್ಥಳಾಂತರಿಸಲಾಗುವುದು ಎಂದು ಹೇಳಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ ಈ ಜಾಗವನ್ನು ನಾನು ಬಿಬಿಎಂಪಿ ಆಯುಕ್ತನಾಗಿದ್ದಾಗ ಕೆಇಆರ್‍ಸಿಗೆ ಮಂಜೂರು ಮಾಡಿದ್ದೆ. ಮುಂದೊಂದು ದಿನ ಕೆಇಆರ್‍ಸಿಗೆ ಅಧ್ಯಕ್ಷನಾಗಿ ಈ ಜಾಗದಲ್ಲಿ ಹೊಸ ಕಟ್ಟವನ್ನು ನಾನೇ ನಿರ್ಮಿಸಬಹುದು ಎಂಬ ಅಂದಾಜು ಆಗ ಇರಲಿಲ್ಲ. ಕೆಇಆರ್‍ಸಿಗೆ ಹೊಸಕಟ್ಟಡ ನಿರ್ಮಾಣವಾಗಬೇಕು ಎಂಬ ಪ್ರಸ್ತಾವನೆ ಬಂದಾಗ ಮುಖ್ಯಮಂತ್ರಿಯವರು ಹನ್ನೆರೆಡುವರೆ ಕೋಟಿ ರೂ. ಅನುದಾನ ಮಂಜೂರು ಮಾಡಿ ಒಂದು ವರ್ಷಗಳ ಕಾಲಾವಧಿ ನೀಡಿದ್ದರು. 2016ರ ಜು.8ರಂದು ಯೋಜನೆ ಆರಂಭಗೊಂಡಿತ್ತು. ಒಂದೂವರೆ ವರ್ಷದಲ್ಲಿ ಕಟ್ಟಡ ನಿರ್ಮಾಣವನ್ನು ಪೂರ್ಣಗೊಳಿಸಲಾಗಿದೆ ಎಂದರು.
10,875 ಚದರ ಅಡಿ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಒಟ್ಟು ತಳಮಹಡಿ ಸೇರಿದಂತೆ ಒಟ್ಟು ಐದು ಮಹಡಿಗಳನ್ನು ನಿರ್ಮಿಸಲಾಗಿದೆ ಎಂದು ಶಂಕರ್‍ಲಿಂಗೇಗೌಡ ವಿವರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂಪ್ರದಾಯಿಕ ಪೂಜೆಯಲ್ಲಿ ಭಾಗವಹಿಸುವ ಮೂಲಕ ನೂತನ ಕಟ್ಟಡ ಉದ್ಘಾಟಿಸಿದರು. ಸಚಿವÀ ಡಿ.ಕೆ.ಶಿವಕುಮಾರ್ ಮತ್ತಿತರರಿದ್ದರು.

Sri Raghav

Admin