ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆ ಕಂಡು ಕೆಂಡಾಮಂಡಲರಾದ ತಾಪಂ ಅಧ್ಯಕ್ಷ

beluru-hospita77

ಬೇಲೂರು, ಸೆ.27- ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಸದಸ್ಯರೊಂದಿಗೆ ಆಗಮಿಸಿದ ತಾಪಂ ಅಧ್ಯಕ್ಷ ತಮ್ಮಣ್ಣಗೌಡ ಆಸ್ಪತ್ರೆಯಲ್ಲಿನ ಕ್ಷ ಕಿರಣ, ಔಷಧಿಗಳ ಸ್ಟೋರ್ ರೂಂ ಮತ್ತು ಒಳ ರೋಗಿಗಳ ವಾರ್ಡ್‍ಗಳಿಗೆ ತೆರಳಿ ಅಲ್ಲಿನ ಅವ್ಯವಸ್ಥೆಯನ್ನೂ ಕಂಡು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಹೇಮಲತಾ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಂತರ ಮಾತನಾಡಿದ ತಾಪಂ ಅಧ್ಯಕ್ಷ ತಮ್ಮಣ್ಣಗೌಡ, ಸರ್ಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗೆ ಪ್ರಮುಖವಾಗಿ ಇಲ್ಲಿನ ಆಡಳಿತ ವೈದ್ಯಾಧೀಕಾರಿ ಡಾ.ಹೇಮಲತಾ ನೇರ ಕಾರಣರಾಗಿದ್ದಾರೆ. ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವವರನ್ನು ಹಿಡಿತಲ್ಲಿಟ್ಟು ಕೊಳ್ಳಲಾಗದ್ದರಿಂದ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ಮನಸ್ಸಿಗೆ ಬಂದಂತೆ ಕೆಲಸ ನಿರ್ವಹಿಸುತಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ ಕಳೆದ 2 ತಿಂಗಳಿಂದ ಆಸ್ಪತ್ರೆಯಲ್ಲಿನ ಕ್ಷ ಕಿರಣ ಯಂತ್ರವು ಕೆಟ್ಟು ಹೋಗಿದ್ದರೂ ಸರಿ ಪಡಿಸದೆ ಆಸ್ಪತ್ರೆ ಎದುರಿನಲ್ಲಿರುವ ಖಾಸಗಿ ಕ್ಷಾ ಕಿರಣ ಸಂಸ್ಥೆಯವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಇಲ್ಲಿನ ಯಂತ್ರವನ್ನು ರಿಪೇರಿ ಮಾಡಿಸದೆ ಬಡವರ ಜೀವ ಹಿಂಡುತಿದ್ದಾರೆ ಎಂದರು.

ಆಸ್ಪತ್ರೆಗೆ ಬರುವ ಬಡ ರೋಗಿಗಳೊಂದಿಗೆ ಅಸಭ್ಯವಾಗಿ ವರ್ತಿಸುವುದಲ್ಲದೆ ಮನಸ್ಸಿಗೆ ಬಂದಂತೆ ನಡೆದುಕೊಳ್ಳುತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹಾಗೂ ಆಸ್ಪತ್ರೆಗೆ ಬರುವಂತಹ ರೋಗಿಗಳನ್ನು ನೋಡುವ ವೈದ್ಯರು ಆಸ್ಪತ್ರೆಯಲ್ಲಿ ಸಿಗುವಂತಹ ಔಷಧಿ ಮಾತ್ರೆಗಳನ್ನು ಬರೆದು ಕೊಡದೆ, ಆಸ್ಪತ್ರೆ ಎದುರಿಗಿರುವ ಮೆಡಿಕಲ್ಸ್‍ಗಳಿಗೆ ಆಸ್ಪತ್ರೆಯಲ್ಲಿನ ಕೆಲ ವೈದ್ಯರಂತೂ ಒಂದೇ ಬಾರಿಗೆ 200 ರಿಂದ 300 ರೂ..ಗಳ ಔಷಧಿ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ಬರೆದು ಕೊಡುತಿದ್ದಾರೆ ಎಂದು ದೂರಿದರು. ಸದಸ್ಯ ಚಿಕ್ಕಬೇಡಗೆರೆ ಮಂಜುನಾಥ್ ಮಾತನಾಡಿ, ಆಸ್ಪತ್ರೆಯಲ್ಲಿನ ಸಿಬ್ಬಂದಿಗಳ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದೆ. ಮತ್ತು ಇಲ್ಲಿ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ವಾಹನವಿಲ್ಲದೆ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.

ಆಸ್ಪತ್ರೆ ವೈದ್ಯಾಧೀಕಾರಿ ಡಾ.ಹೇಮಲತಾ ಪ್ರತಿಕ್ರಿಯಿಸಿ, ಆಸ್ಪತ್ರೆಯಲ್ಲಿ 100 ಹಾಸಿಗೆಗಾಗಿ ಕೆಲಸ ನಡೆಯುತಿದ್ದುದರಿಂದ ಯಾವುದೆ ಕೆಲಸಗಳನ್ನು ಮಾಡಿಸಿರಲಿಲ್ಲ ಹಾಗೂ ಕ್ಷ ಕಿರಣ ತಜ್ಞರು ಆರೋಗ್ಯ ಸರಿ ಇಲ್ಲಾ ಎಂದು ರಜೆ ಹಾಕಿದ್ದಾರೆ. ಆಸ್ಪತ್ರೆಯಲ್ಲಿ ಯಾವುದೆ ಔಷಧಿಗಳ ಕೊರತೆ ಆಗದಂತೆ ಎಚ್ಚರ ವಹಿಸಲಾಗುವುದು ಎಂದು ತಿಳಿಸಿದರು.ಈ ವೇಳೆ ತಾಪಂ ಉಪಾಧ್ಯಕ್ಷೆ ತೀರ್ಥಮ್ಮ, ಸದಸ್ಯರಾದ ಸೋಮಯ್ಯ, ರವಿಕುಮಾರ್, ಸಂಗೀತ, ಮಾಜಿ ಅಧ್ಯಕ್ಷ ಅಬ್ದುಲ್ ಸುಭಾನ್, ಇಒ ಮಲ್ಲೇಶಪ್ಪ, ಕರವೇ ಚಂದ್ರಶೇಖರ್, ತಾಲೂಕು ವೈದ್ಯಾಧೀಕಾರಿ ಯೋಗೀಶ್ ಮತ್ತಿತರರಿದ್ದರು.

 

► Follow us on –  Facebook / Twitter  / Google+

Sri Raghav

Admin