ಸಾಹಿತ್ಯಕ್ಕೆ ಗಟ್ಟಿ ನೆಲೆ ಕೊಡುವುದೇ ದಲಿತ ಸಾಹಿತ್ಯದ ಸ್ತ್ರೀ ಸಂವೇದನೆ

dalita
ಬೆಂಗಳೂರು, ಮೇ 3- ಶೋಷಿತರು, ಶ್ರಮಿಕರು, ಅಸಹಾಯಕರು, ಬಹಿಷ್ಕರಿಸಲ್ಪಟ್ಟವರು ಆದ ಜನತೆಯ ಸಮುದಾಯದ ನಿಲುವನ್ನು ಸಾಂಸ್ಕೃತಿ ಕರಣಗೊಳಿಸುತ್ತಲೇ ಭದ್ರ ಬುನಾದಿಯ ಗಟ್ಟಿ ನೆಲೆಯನ್ನು ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡುವುದೇ ದಲಿತ ಸಾಹಿತ್ಯದ ಸ್ತ್ರೀ ಸಂವೇದನೆ ಎಂದು ಪ್ರಾಧ್ಯಾಪಕಿ ಡಾ.ಶೀಲಾದೇವಿ ಮಳಿಮಠ ತಿಳಿಸಿದರು.ಕನ್ನಡ ಯುವಜನ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಲಿತ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ಕುರಿತು ಉಪನ್ಯಾಸ ನೀಡಿದರು.

ಸಮಾಜದಲ್ಲಿ ಕಂಡುಬರುವ ಎಲ್ಲ ಅಸಮಾನತೆಗಳ ವಿರುದ್ಧದ ಹೋರಾಟದ ಧ್ವನಿಯನ್ನು ಎತ್ತುವುದರ ಮೂಲಕ ಜನಪರ ಕಾಳಜಿಯೂ ಕೂಡ ಮುಖ್ಯವಾಗಿರುವಂತಹುದು. ದಲಿತ ಸಾಹಿತ್ಯ ಎನ್ನುವುದೊಂದು ಪ್ರಜ್ಞೆ. ದಲಿತ ಸಾಹಿತ್ಯ ರಚನೆ ಒಂದು ಮನೋಧರ್ಮ. ಈ ಮನೋಧರ್ಮದ ಮುಖ್ಯ ಲಕ್ಷಣ ಸ್ವರೂಪ ಸಾಮಾಜಿಕ ಅಸಮಾನತೆಯ ಸಮಸ್ಯೆಯನ್ನು ಗುರುತಿಸಿಕೊಳ್ಳುವುದು. ಅದಕ್ಕಾಗಿ ಪರ್ಯಾಯಗಳನ್ನು ನಾವೇ ಹುಡುಕಿಕೊಳ್ಳುವುದು ಆಗಿದೆ ಎಂದರು.ವಾಸ್ತವದ ಕ್ರೌರ್ಯ, ಅಸಹಾಯಕತೆ, ಅನ್ಯಾಯ ಪ್ರಶ್ನಿಸುತ್ತಲೇ ಪರಿಸ್ಥಿತಿಯನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಸೃಜನಾತ್ಮಕ ಕಲೆ ಇದೊಂದು ವಿಶೇಷ ಪ್ರವೃತ್ತಿ. ಸಮಾಜದಲ್ಲಿ ತಮಗಾದ ಅನ್ಯಾಯ, ದಬ್ಬಾಳಿಕೆ, ಶೋಷಣೆಯ ವಿರುದ್ಧ ವಿವಿಧ ಮುಖಗಳನ್ನು ಪರಿಚಯಿಸುತ್ತಲೇ ಸಂಘರ್ಷ ನಿರ್ವಾಹಕರಾಗಿ ಕಲಾತ್ಮಕ ಬರಹಗಳನ್ನು ನೀಡುತ್ತಿರುವುದು ದಲಿತ ಸಾಹಿತ್ಯದ ಮತ್ತೊಂದು ಮಜಲು ಎಂದು ಹೇಳಿದರು.

ಸಮಾಜದಲ್ಲಿರುವ ಸಾಮಾಜಿಕ ಕೆಡಕನ್ನು ಗುರುತಿಸುವುದು, ಪರಿಹಾರ ಸೂಚಿಸುವುದು, ಅದಕ್ಕೊಂದು ಪರ್ಯಾಯ ಮಾರ್ಗ ಕಂಡು ತಾನೂ ನೆಮ್ಮದಿಸಿ, ಮತ್ತೊಬ್ಬರಿಗೂ ನೆಮ್ಮದಿ ಬದುಕಿಗೆ ದಾರಿ ಮಾಡಿಕೊಡಬೇಕಾದುದು ದಲಿತ ಸಾಹಿತ್ಯದ ಮೂಲ ಎಂದರು.ಸ್ವಂತ ಬದುಕಿನಲ್ಲಿ ಎದುರಾದ ಸಂಕಷ್ಟಗಳಿಗೆ ಸಾರ್ವಜನಿಕತೆಯನ್ನು ತಂದುಕೊಡುತ್ತಲೇ ವಿಶ್ವ ಪ್ರಜ್ಞೆಯ ತುಡಿತ ಜಾಗೃತವಾಗಬೇಕಾಗಿದೆ. ದಲಿತ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ಪ್ರಶ್ನಾರ್ಹವೂ ಹೌದು, ಅನಿವಾರ್ಯವೂ ಹೌದು. ಆಗಂತುಕ ಪ್ರಜ್ಞೆಯಿಂದ ಒಳಹೊಕ್ಕು ಅನಿಕೇತನ ಪ್ರಜ್ಞೆಯಾಗಿ ಹೊರಬರುವುದು ದಲಿತ ಪ್ರಜ್ಞೆಗೆ ನೀಡುವ ಪ್ರತಿಕ್ರಿಯೆಯೇನೋ ಎಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿ ಸಮಾಜ ಸೇವಕಿ ವೀಣಾ ಉಪಸ್ಥಿತರಿದ್ದರು. ಕನ್ನಡ ಯುವಜನ ಸಂಘದ ಅಧ್ಯಕ್ಷ ಜಗದೀಶರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin