ಸಿಎಂ ಆಪ್ತ ಎಂಟಿಬಿ ನಾಗರಾಜ್ ಮನೆ ಮೇಲೆ ಐಟಿ ರೇಡ್

MTB-Nagaraj--01

ಬೆಂಗಳೂರು, ಫೆ.9-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರ ಮನೆಗಳ ಮೇಲಿನ ಆದಾಯ ತೆರಿಗೆ ಇಲಾಖೆ ದಾಳಿ ಮುಂದುವರೆದಿದ್ದು, ಇಂದು ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿಯಲ್ಲಿ ಸಿಎಂ ಆಪ್ತರೆಂದೇ ಬಿಂಬಿತರಾಗಿರುವ ಕಾಂಗ್ರೆಸ್ ಶಾಸಕರೊಬ್ಬರ ಮನೆ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳು ಹಲವು ಮಹತ್ವದ ಕಾಗದ ಪತ್ರಗಳ ಪರಿಶೀಲನೆ ನಡೆಸಿದ್ದಾರೆ.
ಹೊಸಕೋಟೆ ಕ್ಷೇತ್ರದ ಶಾಸಕ ಎಂ.ಟಿ.ಬಿ.ನಾಗರಾಜ್ ಮನೆ ಮೇಲೆ ಐಟಿ ದಾಳಿ ನಡೆದಿದ್ದು, ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಇದುವರೆಗೂ ಹಲವು ಮಹತ್ವದ ದಾಖಲೆಗಳನ್ನು ಪರಿಶೀಲನೆ ನಡೆಸಿ ವಶಪಡಿಸಿಕೊಂಡಿರುವುದಾಗಿ ತಿಳಿದುಬಂದಿದೆ.

ಇತ್ತೀಚಿಗಷ್ಟೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಪ್ತ ಎಂದೇ ಹೇಳಲಾಗುವ ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿಹೊಳಿ ಅವರ ನಿವಾಸದ ಮೇಲೆ ದಾಳಿ ನಡೆಸಿ ಆದಾಯ ತೆರಿಗೆ ಅಧಿಕಾರಿಗಳು ಅಪಾರ ಪ್ರಮಾಣದ ನಗದು ಮತ್ತು ಚಿನ್ನಾಭರಣ ವಶಪಡಿಸಿಕೊಂಡಿದ್ದರು.  ಅದೇ ವೇಳೆ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಮನೆ ಮೇಲೂ ಐಟಿ ದಾಳಿ ನಡೆದು ಅಲ್ಲಿ ಕೂಡ ಭಾರೀ ಪ್ರಮಾಣದ ನಗದು, ಹಣ ಮತ್ತು ಷೇರು ವ್ಯವಹಾರಕ್ಕೆ ಸಂಬಂಧಪಟ್ಟ ದಾಖಲೆಪತ್ರಗಳು ಪತ್ತೆಯಾಗಿದ್ದವು.

ಇದಕ್ಕೂ ಮುನ್ನ ಮುಖ್ಯಮಂತ್ರಿಯವರ ಆಪ್ತ ವಲಯದವರೆಂದೇ ಹೇಳಲಾಗುವ ಕೆಲವು ಅಧಿಕಾರಿಗಳ ನಿವಾಸ ಮತ್ತು ಕಚೇರಿ ಮೇಲೂ ಐಟಿ ದಾಳಿ ನಡೆದದ್ದು ಎಲ್ಲರಿಗೂ ಗೊತ್ತಿರುವ ವಿಷಯ.
ಇದೀಗ ಈ ಪಟ್ಟಿಗೆ ಹೊಸಕೋಟೆ ಕ್ಷೇತ್ರದ ಶಾಸಕ ಎಂ.ಟಿ.ಬಿ. ನಾಗರಾಜ್ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಗರುಡಾಚಾರ್‍ಪಾಳ್ಯದ ನಿವಾಸದ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಮನೆಯಲ್ಲಿರುವ ಕಡತಗಳು, ಆಸ್ತಿ ದಾಖಲೆ, ಆಭರಣಗಳ ಕುರಿತ ಮಹತ್ವದ ದಾಖಲೆಗಳು ಪರಿಶೀಲನೆ ನಡೆಸಿರುವುದಲ್ಲದೆ, ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆಸಿ ಪರಿಶೀಲಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin