ಸಿಎಂ ದುಡಿಕಿನ ನಿರ್ಧಾರದಿಂದ ಬೀದಿ ಪಾಲಾದವರೆಷ್ಟು..?

Spread the love

bbmp
ಬೆಂಗಳೂರು, ಆ.27- ಸಿಲಿಕಾನ್ ಸಿಟಿ, ಉದ್ಯಾನ ನಗರಿ, ನಿವೃತ್ತರ ಸ್ವರ್ಗ, ಐಟಿ-ಬಿಟಿ ಸಿಟಿ ಎಂಬಿತ್ಯಾದಿ ಹೆಸರುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಳಿಸಿದ್ದ ಬೆಂಗಳೂರು ಈಗ ಒತ್ತುವರಿ ನೆಪದಲ್ಲಿ ಜನಸಾಮಾನ್ಯರ ಮನೆಗಳನ್ನು ನೆಲಸಮ ಮಾಡುತ್ತಿರುವುದರಿಂದ ಸ್ಮಶಾನನಗರಿಯಾಗುತ್ತಿದೆ. ಇದಕ್ಕೆ ಸರ್ಕಾರದ, ಮುಖ್ಯಮಂತ್ರಿಗಳ ದುಡುಕಿನ ನಿರ್ಧಾರ ಕಾರಣ. ಯಾವುದೇ ಜನಾದೇಶ ಸರ್ಕಾರ ಜನಪರವಾಗಿರಬೇಕು. ಸಂಕಷ್ಟದಲ್ಲಿರುವ ಜನರ ಬೆಂಬಲಕ್ಕೆ ನಿಲ್ಲಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯವಾಗಿರುತ್ತದೆ. ಅಲ್ಪಸ್ವಲ್ಪ ತಪ್ಪುಗಳನ್ನು ಜನರು ಮಾಡಿದರೂ ಸರ್ಕಾರ ಅವುಗಳನ್ನು ಅಪ್ಪಿಕೊಂಡು ಜನರನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಇದು ಪ್ರಜಾಪ್ರಭುತ್ವದ ವೈಖರಿ. ಆದರೆ, ನಮ್ಮ ಸರ್ಕಾರ ನ್ಯಾಯಾಲಯದ ಆದೇಶದ ನೆಪದಲ್ಲಿ , ರಾಜಕಾಲುವೆ ಒತ್ತುವರಿ ಸೋಗಿನಲ್ಲಿ ಸಾಲು ಸಾಲಾಗಿ ಜನಸಾಮಾನ್ಯರ ಮನೆಗಳನ್ನು ಒಡೆದು ಹಾಕುತ್ತಿದೆ.

ಬೆಂಗಳೂರು ನಗರದಲ್ಲಿ ಸಣ್ಣ ಗೂಡೊಂದನ್ನು ನಿರ್ಮಿಸಿಕೊಳ್ಳಲು ಜನರು ಎಷ್ಟು ಕಷ್ಟ ಪಡುತ್ತಾರೆ ಎಂಬುದನ್ನು ಸರ್ಕಾರ ನಡೆಸುವವರು ಒಮ್ಮೆ ಯೋಚಿಸಬೇಕಿತ್ತು. ಬ್ಯಾಂಕ್ ಸಾಲ, ಕೈಸಾಲ, ಬಡ್ಡಿ ಸಾಲ, ಜೀವನವಿಡೀ ದುಡಿದ ಹಣವನ್ನು ಮೀಸಲಿಟ್ಟು ಗೂಡೊಂದನ್ನು ನಿರ್ಮಿಸಿಕೊಂಡಿರುತ್ತಾರೆ. ಯಾರನ್ನೋ ನಂಬಿ ದಾಖಲೆಗಳನ್ನು ಪಡೆದು ನಿವೇಶನ ತೆಗೆದುಕೊಂಡು ಜೀವವನ್ನು ಸವೆಸಿ ಮನೆ ನಿರ್ಮಿಸಿರುತ್ತಾರೆ. ಏಕಾಏಕಿ ಸರ್ಕಾರದವರು ಬಂದು ಮನೆಗಳನ್ನು ಧ್ವಂಸಗೊಳಿಸುತ್ತಾರೆ ಎಂದರೆ ಅವರಿಗೆ ಎಷ್ಟು ನೋವಾಗಿರಬೇಕು. ತಾವು ಕಟ್ಟಿಸಿದ ಕನಸಿನ ಗೋಪುರಗಳು ತಮ್ಮ ಕಣ್ಣೆದುರೇ ಬೀಳುತ್ತಿದ್ದರೆ ಅವರ ಎದೆ ಎಷ್ಟು ಉರಿಯಬೇಕು. ಇದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕಿತ್ತು.

ರಾಜಕಾಲುವೆ ಒತ್ತುವರಿಯಾಗಿದ್ದರೆ ಅಂತಹ ಮನೆಗಳನ್ನು ತೆರವುಗೊಳಿಸುವ ಮುನ್ನ ನಗರ ಶಾಸಕರ, ಜನಪ್ರತಿನಿಗಳ, ಆ ಪ್ರದೇಶಗಳ ಮುಖಂಡರ ಸಭೆ ಕರೆದು ಪರ್ಯಾಯ ವ್ಯವಸ್ಥೆ ಬಗ್ಗೆ ಸಮಾಲೋಚಿಸಿ ಒತ್ತುವರಿ ತೆರವಿಗೆ ಮುಂದಾಗಬೇಕಿತ್ತು. ಆದರೆ, ಏಕಾಏಕಿ ಜನರನ್ನು ಬೀದಿಗೆಳೆದು ಮನೆಗಳನ್ನು ಒಡೆದು ಹಾಕಿದ ಸರ್ಕಾರದ ಕ್ರಮಕ್ಕೆ ಸಾವಿರಾರು ಜನ ಹಿಡಿಶಾಪ ಹಾಕುತ್ತಿದ್ದಾರೆ.  ಇಡೀ ವಿಶ್ವವೇ ಬೆಂಗಳೂರನ್ನು ನಂ.1 ಸಿಟಿ ಎಂದು ಪರಿಗಣಿಸಿತ್ತು. ಆದರೆ, ಈಗ ಇಲ್ಲಿ ವಿವಿಧ ರಾಜ್ಯಗಳ, ವಿವಿಧ ದೇಶಗಳ ಜನರು ಬಂದು ನೆಲೆಸಲು ಆತಂಕ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವಾಗ ನಮ್ಮ ಮನೆಗಳನ್ನು ಸರ್ಕಾರ ಕೆಡಹುತ್ತದೆಯೋ, ನಮ್ಮ ಅಪಾರ್ಟ್‌ಮೆಂಟ್‌ಗಳು ಯಾವಾಗ ಧ್ವಂಸಗೊಳು ತ್ತವೆಯೋ ಎಂಬ ಆತಂಕ ಶುರುವಾಗಿದೆ.

ನ್ಯಾಯಾಲಯ ಅನಕೃತವಾದ ಕಟ್ಟಡಗಳನ್ನು ತೆರವುಗೊಳಿಸಲು ಆದೇಶ ನೀಡಿತ್ತು. ಆದರೆ, ರಾಜಕಾಲುವೆಗಳ ಬದಿಯಲ್ಲಿದ್ದ ಕೇವಲ ಎರಡು ಅಡಿ, ಮೂರು ಅಡಿ ಒತ್ತುವರಿಯಾಗಿದ್ದ ಇನ್ನೂ ಗೃಹ ಪ್ರವೇಶವೇ ಆಗದಿದ್ದ ಮನೆಗಳನ್ನು ಸರ್ಕಾರ ಒಡೆದು ಹಾಕಿತು. ಅದರಲ್ಲೂ ದೇಶಕ್ಕಾಗಿ ಪ್ರಾಣ ಕಳೆದುಕೊಂಡ ಯೋಧರೂ ಮನೆ ಕಳೆದುಕೊಳ್ಳಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿದ್ದು ಸರ್ಕಾರದ ನಿರ್ಲಕ್ಷ್ಯಕ್ಕಿಡಿದ ಕೈಗನ್ನಡಿಯಾಗಿತ್ತು.    ರಾಜರಾಜೇಶ್ವರಿ ನಗರ, ಐಡಿಎಲ್ ಹೋಮ್ ಲೇಔಟ್, ಬಿಡಿಎನಿಂದ ಅನುಮತಿ ಪಡೆದು ನಿರ್ಮಾಣವಾಗಿದೆ. ಅಲ್ಲಿ ಚಿತ್ರನಟ ದರ್ಶನ್, ಮಾಜಿ ಸಚಿವ ನಿವಾಸ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇದೆ. ಹಾಗಾದರೆ ಇವುಗಳಿಗೆಲ್ಲ ಅನುಮತಿ ಕೊಡುವಾಗ ಸರ್ಕಾರ ಏನು ಮಾಡುತ್ತಿತ್ತು. ಬಿಡಿಎ ಅಕಾರಿಗಳು ದಾಖಲೆಗಳನ್ನು ನೋಡಲಿಲ್ಲವೆ..?  ಲೇಔಟ್ ನಿರ್ಮಾಣ ಸಂದರ್ಭದಲ್ಲಿ ಇಲ್ಲಿ ರಾಜಕಾಲುವೆ ಇರುವುದು ಯಾವ ಅಕಾರಿಗಳ ಕಣ್ಣಿಗೂ ಬೀಳಲಿಲ್ಲವೆ..? ಅಥವಾ ಕಣ್ಣಿದ್ದೂ ಸರ್ಕಾರ ಕುರುಡಾದಂತೆ ವರ್ತಿಸಿದೆಯೇ..?  ಅಲ್ಲಿ ನಿವೇಶನ ಪಡೆದವರು, ಮನೆ ಕಟ್ಟಿಕೊಂಡಿರುವವರಿಂದ ಎಲ್ಲ ರೀತಿಯ ತೆರಿಗೆಯನ್ನು ಸರ್ಕಾರ ಕಟ್ಟಿಸಿಕೊಂಡಿದೆ. ಅದೇ ರೀತಿ ಎಲ್ಲ ಕಡೆ ಕಾಲ ಕಾಲಕ್ಕೆ ತಕ್ಕಂತೆ ತೆರಿಗೆ ಸಂಗ್ರಹಿಸಿದೆ. ರಸ್ತೆ, ನೀರು, ಚರಂಡಿ ವ್ಯವಸ್ಥೆಯನ್ನು ಕೂಡ ಮಾಡಿದೆ. ಈಗ ಇದ್ದಕ್ಕಿದ್ದಂತೆ ರಾಜಕಾಲುವೆ ಒತ್ತುವರಿ ನೆಪದಲ್ಲಿ ಮನೆಗಳನ್ನು ಉಡಾಯಿಸುತ್ತಿದೆ.

ಸರ್ಕಾರಕ್ಕೆ ಸಾಕಷ್ಟು ಆದಾಯ ತಂದುಕೊಡುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮ ಸರ್ಕಾರದ ಈ ದುಡುಕಿನ ನಿರ್ಧಾರದಿಂದ ಸಂಪೂರ್ಣವಾಗಿ ಕುಸಿದಿದೆ. ನಗರದ ಪ್ರಮುಖ ರಾಜಕಾಲುವೆಗಳಾದ ಕೋರಮಂಗಲ, ಛಲ್ಲಾಘಟ್ಟ, ಹೆಬ್ಬಾಳ, ವೃಷಭಾವತಿಗಳಲ್ಲಿನ ಹೂಳು ತೆಗೆದಿದ್ದರೆ ನೀರು ಸರಾಗವಾಗಿ ಹರಿದು ಕೆರೆಗಳನ್ನು ಸೇರುತ್ತಿತ್ತು. ಆದರೆ, ಮೆಟ್ರಿಕ್‌ಟನ್‌ಗಟ್ಟಲೆ ಹೂಳು ತುಂಬಿಕೊಂಡು ನೀರು ಹರಿಯದಂತಾಗಿದೆ. ಈ ಹೂಳು ತೆಗೆಯುವ ನೆಪದಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಅಕಾರಿಗಳು ನುಂಗಿ ನೀರು ಕುಡಿದಿದ್ದಾರೆ. ಈಗ ಬಡ ಜನರ ಮನೆಗಳನ್ನು ಒಡೆಯಲು ಸರ್ಕಾರ ಮುಂದಾಗಿದೆ. ಏಕಾಏಕಿ ಜೆಸಿಬಿಗಳೊಂದಿಗೆ ಜಮಾಯಿಸಿ ಮನೆಗಳನ್ನು ಧ್ವಂಸಗೊಳಿಸುತ್ತಿದೆ.
ಕೋರ್ಟ್ ಆದೇಶವೊಂದಿದ್ದರೆ ಸಾಕೆ..? ನ್ಯಾಯಾಲಯಕ್ಕೆ ಜನರಿಗಾಗುವ ಸಂಕಷ್ಟವನ್ನು ಮನವರಿಕೆ ಮಾಡಿಕೊಡಬಹುದಿತ್ತು. ಒಂದು ಸರ್ಕಾರವಾಗಿ ಈ ಕೆಲಸ ಮಾಡಿ ಜನಪರವಾಗಿ ನಿಲ್ಲಬಹುದಿತ್ತು. ಆದರೆ, ಬಡವ-ಬಲ್ಲಿದರ ತಾರತಮ್ಯ ಮಾಡಿ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಯಿತು. ಉಳ್ಳವರ ಮನೆಗಳು, ಕಟ್ಟಡಗಳನ್ನು ಒಡೆಯಲು ಮೀನಾಮೇಷ ಎಣಿಸಿತು. ಆದರೆ, ಬಡವರ ಮನೆಗಳನ್ನು ಏಕಾಏಕಿ ಒಡೆದುಹಾಕಿತು. ಈಗ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲು ಮುಂದಾಗಿದೆ. ಒತ್ತುವರಿ ತೆರವು ಸಂದರ್ಭದಲ್ಲಿ ಮನೆ ಕಳೆದುಕೊಂಡ ನಿರ್ಗತಿಕರಿಗೆ ಮನೆ ನೀಡುವುದಾಗಿ ಹೇಳಿದೆ.  ಒತ್ತುವರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವವರು ಕೂಡ ದಾಖಲೆಗಳನ್ನು ಇಟ್ಟುಕೊಂಡಿದ್ದರೂ ಕಾಲಕಾಲಕ್ಕೆ ತೆರಿಗೆ ಪಾವತಿಸುತ್ತಿದ್ದರು. ನಿವೇಶನಗಳಿಗೆ ಬ್ಯಾಂಕ್‌ಗಳು ಕೂಡ ಸಾಲ ನೀಡಿದ್ದವು. ಇಷ್ಟೆಲ್ಲ ಇದ್ದರೂ ಕೂಡ ಒತ್ತುವರಿ ಎಂದು ಸರ್ಕಾರ ಸರ್ವೆ ಮಾಡಿ ತೆರವು ಮಾಡುತ್ತಿದೆ. ಈ ಕ್ರಮ ಎಷ್ಟು ಸರಿ..? ಒಮ್ಮೆ ಯೋಚಿಸಬಹುದಿತ್ತು. ಮುಖ್ಯಮಂತ್ರಿಗಳು ಆದೇಶ ನೀಡಿದರು ಎಂಬ ಜೋಶ್‌ನಲ್ಲಿ ಅಕಾರಿಗಳು ಮನೆಗಳನ್ನು ಧ್ವಂಸ ಮಾಡಲು ಮುಂದಾದರು. ಒತ್ತುವರಿಗೆ ಕಾರಣರಾದ ಅಕಾರಿಗಳ ವಿರುದ್ಧ ಕ್ರಮ ಕೂಡ ಕೈಗೊಂಡಿದೆ. ಅವರು ಇದರಲ್ಲಿ ಬಚಾವಾಗುತ್ತಾರೆ. ಬೀದಿಗೆ ಬೀಳುವ ಜನಸಾಮಾನ್ಯರು ಏನಾಗಬೇಕು..? ಬೆಂಗಳೂರು ಮಹಾನಗರದ ಪ್ರಥಮ ಪ್ರಜೆಯಾದ ಮಂಜುನಾಥರೆಡ್ಡಿಯವರು ಇರುವ ತಮ್ಮ ಅಕಾರಾವಯಲ್ಲಿ ಜನಪರವಾಗಿ ನಿಲ್ಲಬೇಕಿತ್ತು. ಜನಸಾಮಾನ್ಯರ ಮನೆಗಳನ್ನು ಒಡೆಯಲು ಇಷ್ಟೊಂದು ರೋಷಾವೇಷದಲ್ಲಿ ಮುಂದಾಗಬಾರದಿತ್ತು.

ಮಹಾನಗರ ಪಾಲಿಕೆ ಕಮಿಷನರ್ ಒಬ್ಬ ಅವಿವೇಕಿ, ಆತನ ಈ ಅಜಾಗರೂಕತೆಯಿಂದ ಸಾವಿರಾರು ಕುಟುಂಬಗಳು ಬೀದಿಗೆ ಬರುವಂತಾಯಿತು ಎಂದು ಜನರು ಹಾದಿಬೀದಿಯಲ್ಲಿ ನಿಂತು ಮಾತನಾಡುತ್ತಿದ್ದಾರೆ. ಇಲ್ಲದ ಪ್ಲಾನ್‌ಗಳು, ಯಾವುದೋ ಓಬೀರಾಯನ ಕಾಲದ ಸರ್ವೆ ರಿಪೋರ್ಟ್‌ಗಳಿಂದ ನಾವು ಬೀದಿಗೆ ಬರುವಂತಾಗಿದೆ. ಮನೆಯನ್ನೂ ಕಳೆದುಕೊಂಡೆವು, ಸಾಲವನ್ನೂ ಮೈಮೇಲೆ ಹೊತ್ತುಕೊಂಡೆವು, ಬೀದಿಗೆ ಬಿದ್ದೆವು ಎಂಬುದು ಅವನಿಶೃಂಗೇರಿ, ಮಹದೇವಪುರ, ಕೆಆರ್ ಪುರ, ಕೆಂಗೇರಿ ಮುಂತಾದ ಕಡೆ ಸಂತ್ರಸ್ತರ ಅಳಲಾಗಿದೆ. ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ 28 ಜನ ವಿವಿಧ ಪಕ್ಷಗಳ ಶಾಸಕರಿದ್ದಾರೆ, ಮೂವರು ಸಂಸದರಿದ್ದಾರೆ, 198 ಬಿಬಿಎಂಪಿ ಸದಸ್ಯರಿದ್ದಾರೆ. ಇಷ್ಟು ಪ್ರಮಾಣದಲ್ಲಿ ಒತ್ತುವರಿ ತೆರವಾಗುತ್ತಿದ್ದರೂ ಯಾರೂ ಕೂಡ ಈ ಬಗ್ಗೆ ದನಿ ಎತ್ತುತ್ತಿಲ್ಲ. ಜನಸಾಮಾನ್ಯರ ಪರವಾಗಿ ಬೊಬ್ಬೆ ಹೊಡೆಯುವ ಸಂಘ-ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು, ವಿವಿಧ ಸಂಘಟನೆಗಳವರು ಕೂಡ ಬಾಯಿಮುಚ್ಚಿಕೊಂಡಿದ್ದಾರೆ. ಬೀದಿಗೆ ಬಿದ್ದ ಜನರನ್ನು ಕಾಪಾಡುವವರು ಯಾರು..? ಆ ದೇವರೇ ಗತಿ…  ಬೆಂಗಳೂರಿನಲ್ಲಿ ಮನೆ ಕಳೆದುಕೊಂಡವರ ಮೂಕವೇದನೆಯನ್ನು ಒತ್ತುವರಿ ತೆರವು ನೆಪದಲ್ಲಿ ಮನೆ ಒಡೆದು ಹಾಕುತ್ತಿರುವ ಅಕಾರಿಗಳ, ಸರ್ಕಾರದ ಅಟ್ಟಹಾಸವನ್ನು ಇಡೀ ದೇಶವೇ ನೋಡುತ್ತಿದೆ. ಈಗಲಾದರೂ ಸರ್ಕಾರ ಜನಪರವಾಗಿ ನಿಲ್ಲಲಿ.

ಜನ ಪ್ರತಿನಿಗಳಿಗೆ ಜನರ ಅಳಲು ಕೇಳಿಸುತ್ತಿಲ್ಲವೆ..?

ಬಡಾವಣೆ ನಿರ್ಮಿಸುವಾಗ ಸರ್ಕಾರ ಕಣ್ಮುಚ್ಚಿ ಕುಳಿತಿತ್ತೇ..?

ನೋಂದಣಿಯಾಗಿ ತೆರಿಗೆ ಕಟ್ಟಿದ ಮೇಲೆ ಅನಕೃತ ಮನೆಯಾಗುತ್ತದೆಯೇ?

ನಂಟು-ಗಂಟು ಉಳಿಸಿಕೊಳ್ಳುವ ಇರಾದೆ ಸರ್ಕಾರಕ್ಕೆ ಇಲ್ಲವೆ..?
ಬೆಂಗಳೂರು ಮಾನ ರಾಷ್ಟ್ರಮಟ್ಟದಲ್ಲಿ ಹರಾಜಾಯ್ತು..

► Follow us on –  Facebook / Twitter  / Google+

Sri Raghav

Admin