ಸಿಎಂ ಮತ್ತು ಸಚಿವ ಮಹದೇವಪ್ಪನವರ ಆಪ್ತರ ಬಂಡವಾಳ ಬಯಲು ಮಾಡಿದ ಐಷಾರಾಮಿ ಕಾರು
ಬೆಂಗಳೂರು, ಡಿ.2-ರಾಜ್ಯ ರಸ್ತೆ ಅಭಿವೃದ್ಧಿ ಯೋಜನಾಧಿಕಾರಿ, ಲೋಕೋಪಯೋಗಿ ಸಚಿವ ಮಹದೇವಪ್ಪನವರ ಆಪ್ತರಾದ ಜಯಚಂದ್ರ ಅವರು 500, 1000ರೂ. ಮುಖಬೆಲೆಯ ನೋಟು ನಿಷೇಧವಾದ ಮೇಲೆ 6 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರನ್ನು ತಮ್ಮ ಪುತ್ರನಿಗೆ ಖರೀದಿ ಮಾಡಿದ ಮಾಹಿತಿಯನ್ನು ಅಪರಿಚಿತರೊಬ್ಬರು ಕೊಟ್ಟ ಸುಳಿವೇ ಐಟಿ ಅಧಿಕಾರಿಗಳು ದಾಳಿ ನಡೆಸಲು ಕಾರಣ ಎಂದು ತಿಳಿದುಬಂದಿದೆ. ನ.8ರಂದು ಪ್ರಧಾನಿ ನರೇಂದ್ರಮೋದಿಯವರು 500 ಹಾಗೂ 1000ರೂ. ಮುಖಬೆಲೆಯ ನೋಟುಗಳನ್ನು ನಿಷೇಧ ಮಾಡಿರುವುದನ್ನು ಘೋಷಿಸಿದರು. ಅದಾದ ಮೇಲೆ ಮಹದೇವಪ್ಪ ಅವರ ಆಪ್ತರಾದ ರಾಜ್ಯ ರಸ್ತೆ ಅಭಿವೃದ್ಧಿ ಯೋಜನಾ ಅಧಿಕಾರಿ ಜಯಚಂದ್ರ ಅವರು ತಮ್ಮ ಮಗನಿಗೆ 6 ಕೋಟಿ ಮೌಲ್ಯದ ಕಾರು ಖರೀದಿಸಿದ್ದಾರೆ. ಅದರಲ್ಲೂ ಹಳೆಯ ನೋಟುಗಳನ್ನು ಕೊಟ್ಟು ಖರೀದಿಸಿದ್ದಾರೆ. ಈ ಸಂಬಂಧ ಅಪರಿಚಿತರೊಬ್ಬರು ಐಟಿ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಮಾಹಿತಿಯ ಜಾಡನ್ನಿಡಿದು ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ಈ ಎಲ್ಲ ಅಂಶಗಳು ಬೆಳಕಿಗೆ ಬಂದಿವೆ ಎಂದು ತಿಳಿದುಬಂದಿದೆ. ಕಾರು, ಶೋರೂಂ ಮಾಲೀಕರನ್ನು ಕೂಡ ವಿಚಾರಣೆಗೆ ಒಳಪಡಿಸಲಾಗಿದೆ. ಹಣವನ್ನು ನಗದು ರೂಪದಲ್ಲಿ ತೆಗೆದುಕೊಳ್ಳಲಾಗಿದೆಯೇ ಅಥವಾ ಚೆಕ್ ರೂಪದಲ್ಲಿ ತೆಗೆದುಕೊಳ್ಳಲಾಗಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ನೋಟು ನಿಷೇಧ ಮಾಡಿದ ಮೇಲೆ ತಮ್ಮಲ್ಲಿರುವ ಎಲ್ಲ ಹಣವನ್ನೂ ಬ್ಯಾಂಕ್ಗೆ ಠೇವಣಿ ಮಾಡಬೇಕು. ಬ್ಯಾಂಕ್ನಿಂದ ವಿತ್ಡ್ರಾ ಮಾಡಬೇಕಾದರೆ ಕನಿಷ್ಟ ಮೊತ್ತವನ್ನು ಬ್ಯಾಂಕ್ ನಿಗದಿ ಮಾಡಿದೆ. ಆದರೆ, ಕಾರು ಕಂಪೆನಿಗೆ ಕೋಟ್ಯಂತರ ರೂ. ಹಣ ನೀಡಿ ಕಾರು ಖರೀದಿ ಮಾಡಿದ ಜಾಡು ಹಿಡಿದು ಐಟಿ ಅಧಿಕಾರಿಗಳು ದಾಳಿ ಮಾಡಿದಾಗ ಕಪ್ಪು ಕುಳಗಳ ಅವ್ಯವಹಾರ ಬೆಳಕಿಗೆ ಬಂದಿದೆ.
> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : Eesanje News 24/7 ನ್ಯೂಸ್ ಆ್ಯಪ್ – Click Here to Download