ಸಿಐಡಿ ಎಂದರೆ ‘ಕಾಂಗ್ರೆಸ್ ಇನ್ವೆಸ್ಟಿಗೇಶನ್ ಡಿಪಾರ್ಟ್‍ಮೆಂಟ್’ : ಶೆಟ್ಟರ್ ವ್ಯಂಗ್ಯ

Shettar

ಹುಬ್ಬಳ್ಳಿ,ಸೆ.18- ಮಾಜಿ ಸಚಿವ ಕೆ.ಜೆ. ಜಾರ್ಜ್ ಬೆಂಬಲಕ್ಕೆ ನಿಂತ ರಾಜ್ಯ ಸರಕಾರ ನಿಷ್ಟಾವಂತ ಅಧಿಕಾರಿ ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಮುಚ್ಚಿ ಹಾಕಿ ಷಡ್ಯಂತ್ರದಿಂದ ತರಾತುರಿಯಲ್ಲಿ ಸಿಐಡಿ ವರದಿಯ ಬಿ. ರಿಪೋರ್ಟ್ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.  ನಗರದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅನೇಕ ನಿಷ್ಟಾವಂತ ಅಧಿಕಾರಿಗಳ ಕೊಲೆಗಳು ನಡೆದು ವರ್ಷಗಳೇ ಕಳೆದಿವೆ. ಅವುಗಳ ತನಿಖೆ ಯಾವ ಹಂತ ತಲುಪಿದೆ, ಯಾವ ಆಧಾರಗಳು ಅಧಿಕಾರಿಗಳ ಬಳಿ ಸಂಗ್ರಹವಾಗಿವೆ, ಎಷ್ಟು ಜನ ಆರೋಪಿಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿ, ಕೊಲೆಯಾದವರ ಕುಟುಂಬಗಳಿಗೆ ನ್ಯಾಯ ಒದಗಿಸಿವೆ ಎಂಬುದನ್ನು ಸರಕಾರ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.

ಸಿಐಡಿ ತನಿಖೆಗಳಲ್ಲಿ ತಮಗೆ ವಿಶ್ವಾಸವಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಅಂದು ನಾವು ಒತ್ತಾಯಿಸಿದ್ದೇವೆ. ಇಂದಿಗೂ ಅದನ್ನೆ ರಾಜ್ಯ ಸರಕಾರಕ್ಕೆ ಒತ್ತಾಯಿಸುತ್ತಿದ್ದೇವೆ. ಆದರೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಜಾರ್ಜ್ ಅವರ ಆತ್ಮಿಯತೆಯನ್ನು ಬಿಟ್ಟುಕೊಡದೇ, ಅವರನ್ನು ಮತ್ತೇ ಸಂಪುಟಕ್ಕೆ ಸೇರಿಸಿಕೊಳ್ಳುವ ಕುತಂತ್ರದಿಂದ ಕೇವಲ ಒಂದೂವರೆ ತಿಂಗಳಲ್ಲಿ ಬಿ. ರಿಪೋರ್ಟ್ ತಯಾರಿಸಿದ್ದಾಗಿ ತಿಳಿಸಿದ ಅವರು, ಇದು ಒಬ್ಬ ನಿಷ್ಟಾವಂತ ಅಧಿಕಾರಿಯ ಹತ್ಯೆ ಅಷ್ಟೆ ಅಲ್ಲ, ನ್ಯಾಯದ, ಅಧಿಕಾರದ ಹಾಗೂ ಸರಕಾರದ ಮೇಲೆ ಜನರಿಟ್ಟ ವಿಶ್ವಾಸದ ಹತ್ಯೆಯೂ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರಿ ಸಂಪೂರ್ಣ ಕೊಲೆಗಾರರ ರಕ್ಷಣೆಗೆ ನಿಂತಿದೆ. ಕೊಲೆಯಾದವರ ಕುಟುಂಬಗಳಿಗೆ ನ್ಯಾಯ ಸಿಗದೇ ಇರುವುದು ಜನತೆಯ ದುರ್ದೈವವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸಿಐಡಿ ಕಾಂಗ್ರೆಸ್ ಇನ್ವೆಸ್ಟಿಗೇಶನ್ ಡಿಪಾರ್ಟ್‍ಮೆಂಟ್‍ನಂತೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.  ಓರ್ವ ಮುಖ್ಯಮಂತ್ರಿ ರಾಜ್ಯದ ಜನತೆಯ ವಿಶ್ವಾಸಕ್ಕೆ ಕೊಳ್ಳೆಯಿಟ್ಟು, ಜಾರ್ಜ್ ಬೆಂಬಲಕ್ಕೆ ನಿಂತಿರುವುದನ್ನು ರಾಜ್ಯದ ಜನ ನೋಡುತ್ತಿದ್ದಾರೆ. ಇದಕ್ಕೆ ಮುಂಬರುವ ದಿನಗಳಲ್ಲಿ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು. ಇನ್ನು ಸಂಸದ ಪ್ರಹ್ಲಾದ ಜೋಶಿ ಅವರು ಮಾತನಾಡಿ ನಗರ ವೀಕ್ಷಣೆ, ಸಭೆ ಬಗ್ಗೆ ಮಾತನಾಡುವ ಕಾಂಗ್ರೆಸ್‍ನವರು, ಒಬ್ಬ ಜನಪ್ರತಿನಿಧಿ, ತಮ್ಮ ಕ್ಷೇತ್ರದ ಜನತೆಯ ಸಮಸ್ಯೆ, ಚಿಂತನೆ ಬಗ್ಗೆ ಅಧಿಕಾರಿಗಳೊಂದಿಗೆ ನಗರ ವಿಕ್ಷಣೆ, ಸಭೆ ನಡೆಸಲು ಅವಕಾಶವಿದೆ ಎಂದು ಸಮರ್ಥಿಸಿಕೊಂಡರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ವೀರಣ್ಣ ಸವಡಿ, ಜಿಲ್ಲಾಧ್ಯಕ್ಷ ನಾಗೂಸಾ ಕಲಬುರ್ಗಿ, ಮಹೇಶ ಟೆಂಗಿನಕಾಯಿ, ಚನ್ನಬಸಪ್ಪ ಹಳ್ಯಾಳ, ಮಲ್ಲಿಕಾರ್ಜುನ ಸಾಹುಕಾರ, ಹನುಮಂತಪ್ಪ ದೊಡ್ಡಮನಿ ಸೇರಿದಂತೆ ಮುಂತಾದವರಿದ್ದರು.

► Follow us on –  Facebook / Twitter  / Google+

Sri Raghav

Admin