ಸಿದ್ದರಾಮಯ್ಯನವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಜನರೇ ಪಾಠ ಕಳಿಸುತ್ತಾರೆ : ಹೆಚ್ಡಿಕೆ

Kumaraswamy-and-Siddaramaia

ಹುಬ್ಬಳ್ಳಿ, ಏ.6- ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸೋಲಿಸಲು ನಾನು ಚಾಮುಂಡೇಶ್ವರಿಗೆ ಹೋಗುತ್ತಿಲ್ಲ. ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಹೋಗುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ನಗರದ ಮಾಯಾಕಾರ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2013ರ ಚುನಾವಣೆಗೂ ಈ ಚುನಾವಣೆಗೂ ತುಂಬಾ ವ್ಯತ್ಯಾಸವಿದೆ. ಇಂದು ನಿಮ್ಮೊಂದಿಗೆ ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್, ಶ್ರೀನಿವಾಸ ಪ್ರಸಾದ್, ವಿಶ್ವನಾಥ್ ಯಾರೂ ಇಲ್ಲ. ಕ್ಷೇತ್ರದ ಜನತೆ ಪಾಠ ಕಲಿಸುತ್ತಾರೆ ಎಂದು ಟಾಂಗ್ ನೀಡಿದರು.

ಸಿಎಂಗೆ ಸೋಲಿನ ಭಯ ಕಾಡುತ್ತಿದೆ. ಕಾರಣ ತಮ್ಮ ಪಕ್ಷದ ಮೇಲೆ ವಿನಾಕಾರಣ ಗೂಬೆ ಕೂರಿಸುತ್ತಿದ್ದಾರೆ. ಕಳೆದ ಎರಡು ತಿಂಗಳುಗಳ ಕಾಲ ರಾಜ್ಯಾದ್ಯಂತ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದೇನೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಿಜೆಪಿ, ಕಾಂಗ್ರೆಸ್ ಸೋಲಿಸಲು ಮತದಾರರು ನಿರ್ಧರಿಸಿದ್ದಾರೆ ಎಂದರು.  ರಾಹುಲ್‍ಗಾಂಧಿ ಹಾಗೂ ಅಮಿತ್ ಷಾ ರಾಜ್ಯದಲ್ಲಿ ಪ್ರಚಾರ ಕೈಗೊಂಡರೂ ಸಹ ಜನರ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಲಿಲ್ಲ ಎಂದರು. ಕಾಂಗ್ರೆಸ್, ಬಿಜೆಪಿ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ ಈ ಪಕ್ಷಗಳಿಗೆ ಜನರ ಸಮಸ್ಯೆಗಳ ಬಗ್ಗೆ ಒಂದಿಷ್ಟೂ ಕಾಳಜಿ ಇಲ್ಲ ಎಂದರು.
ನಾನು ಭ್ರಮಾಲೋಕದಲ್ಲಿದ್ದೇನೆ ಎಂದು ಸಿದ್ದರಾಮಯ್ಯ ನನ್ನ ಬಗ್ಗೆ ಟೀಕೆ ಮಾಡಿದ್ದಾರೆ. ನಾನು ಜನರ ಲೋಕದಲ್ಲಿದ್ದೇನೆ ಎಂದು ಅವರು ತಿರುಗೇಟು ನೀಡಿದರು.

ಸಿಂಗಾಪುರ ಸೇರಿದಂತೆ ಬೇರೆ ಬೇರೆ ಕಡೆ ನಾನು ಆಸ್ತಿ ಮಾಡಿದ್ದೇನೆ ಎಂದು ಬಿಜೆಪಿ ಆರೋಪಿಸಿದೆ. ಈ ಬಗ್ಗೆ ತನಿಖೆಯಾಗಲಿ. ಅವರ ಪಕ್ಷದವರೇ ಪ್ರಧಾನಿ ಇದ್ದಾರಲ್ಲ ಎಂದು ಪ್ರಶ್ನಿಸಿದರು. ರಾಜ್ಯದ ಜನತೆಯ ಬೆಂಬಲ ತಮಗಿದೆ. ಈ ಸಲದ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುತ್ತಾರೆಂಬ ಭರವಸೆ ನನಗಿದೆ ಎಂದ ಕುಮಾರಸ್ವಾಮಿ, ರಾಷ್ಟ್ರೀಯ ಪಕ್ಷಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು. ಚನ್ನಪಟ್ಟಣದ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೀಶ್ವರ್, ತಮಗೆ ಸಲಹೆ ನೀಡುತ್ತಿದ್ದಾರೆ. ಅದನ್ನು ಬಿಟ್ಟು ಅವರ ಹಿಂದಿನ ಇತಿಹಾಸವನ್ನು ನೆನಪಿಸಿಕೊಳ್ಳಲಿ ಎಂದರು.

ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಆಲ್ಕೋಡು ಹನುಮಂತಪ್ಪ ಪಕ್ಷ ಬಿಡುವ ಬಗ್ಗೆ ಪ್ರಸ್ತಾಪಿಸಿದ ಅವರು, ಚುನಾವಣೆ ಸಮಯದಲ್ಲಿ ಇದು ಸಾಮಾನ್ಯ. ಅವರನ್ನು ಪಕ್ಷದ ನಾಯಕರೆಂದು ಗುರುತಿಸಿದ್ದೇವೆ. ಈ ಹಿಂದೆ ಅವರು ಹೇಳಿದ ಕಡೆ ಟಿಕೆಟ್ ಕೊಟ್ಟಿದ್ದೇವೆ. ಲಿಂಗಸಗೂರಿಗೆ ಟಿಕೆಟ್ ನೀಡುತ್ತೇನೆ ಎಂದು ನಾನು ಅವರಿಗೆ ಹೇಳಿಲ್ಲ ಎಂದು ತಿಳಿಸಿದರು. ನನ್ನ ಪ್ರವಾಸದಿಂದ ಒಂದು ರೀತಿಯಲ್ಲಿ ಸಂಚಲನ ಉಂಟಾಗಿದೆ. ತಮ್ಮ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದರು.

Sri Raghav

Admin