ಸಿದ್ದರಾಮಯ್ಯನವರ ಬಜೆಟ್ ಬತ್ತಳಿಕೆಯಲ್ಲಿ ಏನೇನಿರಬಹುದು..? ಇಲ್ಲಿದೆ ಒಂದು ಮುನ್ನೋಟ
ಬೆಂಗಳೂರು, ಮಾ.14- ಸಹಕಾರ ಸಂಘಗಳಿಂದ ರೈತರು ಪಡೆದಿರುವ ಸಾಲಮನ್ನಾ… ತೆರಿಗೆ ಏರಿಕೆ… ಏಳನೆ ವೇತನ ಆಯೋಗ ರಚನೆ… ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾತಿ… ಹೊಸ ತಾಲೂಕುಗಳ ರಚನೆ… ಅನ್ನಭಾಗ್ಯ ಯೋಜನೆಯ ಅಕ್ಕಿ ಪ್ರಮಾಣ ಏರಿಕೆ… ಎಸ್ಸಿ-ಎಸ್ಟಿ, ಒಬಿಸಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಹೆಚ್ಚಳ… ದಲಿತ ಕುಟುಂಬಗಳಿಗೆ ಉಚಿತ ವಿದ್ಯುತ್… ಕೃಷಿ… ನೀರಾವರಿ… ಶಿಕ್ಷಣಕ್ಕೆ ದುಪ್ಪಟ್ಟು ಅನುದಾನ… 6 ಲಕ್ಷ ಮನೆಗಳ ನಿರ್ಮಾಣ…
ನಾಳೆ ಬಹು ನಿರೀಕ್ಷಿತ ಮುಖ್ಯಮಂತ್ರಿ ಸಿದ್ದರಾಮಯ್ಯ 2017-18ನೆ ಸಾಲಿನ ಬಜೆಟ್ನಲ್ಲಿ ಘೋಷಣೆ ಮಾಡಲಿರುವ ಪ್ರಮುಖ ಯೋಜನೆಗಳಿವು. ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿ ಕಾಂಗ್ರೆಸ್ ಸರ್ಕಾರದ 4ನೆ ಹಾಗೂ ತಮ್ಮ 12ನೆ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯನವರು ಮೊಟ್ಟ ಮೊದಲ ಬಾರಿಗೆ 2ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಲಿದ್ದಾರೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತದಾರನ ಮೂಗಿಗೆ ತುಪ್ಪ ಸವರಿ ಎಲ್ಲ ಸಮುದಾಯಗಳನ್ನೂ ಓಲೈಕೆ ಮಾಡುವುದು ಬಹುತೇಕ ಖಚಿತ.
ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಮಂಡಿಸುತ್ತಿರುವ ಬಜೆಟ್ ಬಗ್ಗೆ ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. ಕಳೆದ ವರ್ಷ 1,63,419 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯನವರು ಈ ಬಾರಿ 2 ಲಕ್ಷ ಕೋಟಿ ಬಜೆಟ್ ಮಂಡಿಸುವ ಮೂಲಕ ಹೊಸ ಇತಿಹಾಸ ಬರೆಯಲಿದ್ದಾರೆ.
+ ರೈತರ ಸಾಲ ಮನ್ನಾ:
ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಅನ್ನದಾತ ಹಿಂದೆಂದಿಗಿಂತಲೂ ಸಂಕಷ್ಟಕ್ಕೆ ಸಿಲುಕಿದ್ದಾನೆ. ಸುಮಾರು 150 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರವೇ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ರೈತರು ಸಹಕಾರ ಸಂಘಗಳಿಂದ ಪಡೆದಿರುವ ಸುಮಾರು 10,500 ಕೋಟಿ ರೂ. ಸಾಲವನ್ನು ಮನ್ನಾ ಮಾಡಲಿದ್ದಾರೆ. ಸುಮಾರು 23 ಲಕ್ಷ ರೈತರು ಇದರ ನೇರ ಲಾಭ ಪಡೆಯಲಿದ್ದಾರೆ. ಇದೇ ವೇಳೆ ರೈತರಿಗೆ ಸಹಕಾರ ಸಂಘಗಳಿಂದ ನೀಡುತ್ತಿರುವ ಶೂನ್ಯ ಬಡ್ಡಿ ಸಾಲದ ಪ್ರಮಾಣವನ್ನು ಮೂರರಿಂದ ಐದು ಲಕ್ಷದವರೆಗೂ ಏರಿಕೆ ಮಾಡುವ ಸಂಭವವಿದೆ. ಈ ಮೂಲಕ ಸರ್ಕಾರ ಅನ್ನದಾತನ ಪರ ಇದೆ ಎಂಬುದನ್ನು ಬಜೆಟ್ನಲ್ಲಿ ಋಜುವಾತು ಮಾಡಲಿದ್ದಾರೆ.
+ ಏಳನೆ ವೇತನ ಆಯೋಗ ರಚನೆ:
ರೈತರ ಸಾಲಮನ್ನಾ ಮಾಡುವುದರ ಜತೆಗೆ ಸಿದ್ದರಾಮಯ್ಯನವರು ನೌಕರರ ವರ್ಗವನ್ನು ಓಲೈಸಲು ಮುಂದಾಗಿದ್ದಾರೆ. ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಂತೆ ಏಳನೆ ವೇತನ ಆಯೋಗವು ಘೋಷಣೆಯಾಗಲಿದೆ. ನೌಕರರ ವೇತನ ಹೆಚ್ಚಳ ಮಾಡಬೇಕೆಂದು ಹಲವು ತಿಂಗಳುಗಳಿಂದ ಸರ್ಕಾರದ ಮೇಲೆ ಒತ್ತಡ ಹಾಕಲಾಗಿತ್ತು. ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಮುಖ್ಯಮಂತ್ರಿಯವರು ಬಜೆಟ್ನಲ್ಲಿ ಆಯೋಗ ರಚನೆ ಮಾಡುವುದಾಗಿ ಘೋಷಣೆ ಮಾಡಿದ್ದರು.
+ ಉನ್ನತ ಕೋರ್ಸ್ಗಳಿಗೆ ಉಚಿತ ಪ್ರವೇಶಾತಿ:
ಇನ್ನು ತಮ್ಮ ಸರ್ಕಾರ ಪದೇ ಪದೇ ಅಹಿಂದ ಎಂದು ಹೇಳಿಕೊಳ್ಳುತ್ತಿರುವ ಸಿದ್ದರಾಮಯ್ಯ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಉಚಿತ ಪ್ರವೇಶಾತಿ ನೀಡುವ ಹೊಸ ಯೋಜನೆ ಘೋಷಣೆ ಮಾಡಲಿದ್ದಾರೆ. ಸುಮಾರು 10 ಲಕ್ಷಕ್ಕೂ ಹೆಚ್ಚು ಬಿಪಿಎಲ್ ಕುಟುಂಬಗಳು ಇದರ ನೇರ ಲಾಭ ಪಡೆಯಲಿದ್ದಾರೆ.
+ ತೆರಿಗೆ ಏರಿಕೆ:
ಇನ್ನು ನೋಟು ಅಮಾನೀಕರಣದ ನಂತರ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿದೆ. ಹೀಗಾಗಿ ನಾಳಿನ ಬಜೆಟ್ನಲ್ಲಿ ತೆರಿಗೆ ಏರಿಕೆಯಾಗುವ ನಿರೀಕ್ಷೆಯಿದೆ. ಆಸ್ತಿ ನೋಂದಣಿ, ಮುದ್ರಣ ಶುಲ್ಕ, ವಾಹನ ತೆರಿಗೆ, ಮದ್ಯದ ದರ ಹೆಚ್ಚಳ, ಸಿಗರೇಟ್ ಸೇರಿದಂತೆ ಕೆಲವು ವಸ್ತುಗಳ ಮೇಲೆ ತೆರಿಗೆ ಏರಿಸಿ ಮಧ್ಯಮ ವರ್ಗಕ್ಕೆ ಬಿಸಿ ಮುಟ್ಟಿಸಲಿದ್ದಾರೆ.
+ ಹೊಸ ತಾಲೂಕುಗಳ ರಚನೆ:
ಇನ್ನು ಬಹುದಿನಗಳ ಬೇಡಿಕೆಯಂತೆ ಹೊಸ ತಾಲೂಕುಗಳ ಘೋಷಣೆಯಾಗುವ ಸಂಭವವಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ 43 ತಾಲೂಕುಗಳನ್ನು ಘೋಷಣೆ ಮಾಡಲಾಗಿತ್ತು. ಇದೀಗ ಸಿದ್ದರಾಮಯ್ಯನವರು ತಮ್ಮ ನಾಳಿನ ಬಜೆಟ್ನಲ್ಲಿ ಈ ತಾಲೂಕುಗಳನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
+ ಎಸ್ಸಿ-ಎಸ್ಟಿ ಕುಟುಂಬಗಳಿಗೆ ಉಚಿತ ವಿದ್ಯುತ್:
ಅಹಿಂದ ಸಮುದಾಯವನ್ನು ಓಲೈಸಿಕೊಳ್ಳುವ ನೆಪದಲ್ಲಿ ಎಸ್ಸಿ-ಎಸ್ಟಿ ಕುಟುಂಬಗಳಿಗೆ ಉಚಿತ ವಿದ್ಯುತ್ ಘೋಷಣೆಯಾಗುವ ನಿರೀಕ್ಷೆಯಿದೆ.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಎಸ್ಸಿ-ಎಸ್ಟಿ ಸಮುದಾಯದ ಬಾಕಿ ಉಳಿದಿದ್ದ ಸುಮಾರು 10 ಸಾವಿರ ಕೋಟಿ ಬಾಕಿ ವಿದ್ಯುತ್ ಹಣವನ್ನು ಮನ್ನಾ ಮಾಡಿದ್ದರು.
+ ಅಕ್ಕಿ ಪ್ರಮಾಣ ಹೆಚ್ಚಳ:
ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ನೀಡುತ್ತಿರುವ ಅಕ್ಕಿ ಪ್ರಮಾಣವನ್ನು 5 ರಿಂದ 8 ಕೆಜಿ ಏರಿಕೆಯಾಗಲಿದೆ. ಅಲ್ಲದೆ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಎಲ್ಲ ಇಲಾಖೆಗಳಿಗೂ ಹೆಚ್ಚಿನ ಅನುದಾನ ಸಿಗಲಿದೆ. ಎಸ್ಸಿ-ಎಸ್ಟಿ, ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನ ಹೆಚ್ಚಳ, ವಯೋವೃದ್ಧರ ಪಿಂಚಣಿ ಏರಿಕೆ ಸೇರಿದಂತೆ ಭಾಗ್ಯಗಳ ಸರಣಿ ಮುಂದುವರಿಯಲಿದೆ.
+ ಗುಡಿಸಲು ಮುಕ್ತ ರಾಜ್ಯ:
ಈ ಬಾರಿಯ ಬಜೆಟ್ನಲ್ಲಿ ಕರ್ನಾಟಕವನ್ನು ಗುಡಿಸಲು ಮುಕ್ತ ರಾಜ್ಯ ಮಾಡುವ ಸಂಕಲ್ಪದೊಂದಿಗೆ ಹೊಸದಾಗಿ 6 ಲಕ್ಷ ಮನೆಗಳನ್ನು ವಿವಿಧ ವಸತಿ ಯೋಜನೆಯಡಿ ನಿರ್ಮಾಣ ಮಾಡಲು ಘೋಷಣೆ ಮಾಡಲಾಗುತ್ತದೆ.
< Eesanje News 24/7 ನ್ಯೂಸ್ ಆ್ಯಪ್ >