ಸಿದ್ದರಾಮಯ್ಯರನ್ನು ಸೋಲಿಸುವುದೇ ನನ್ನ ಏಕೈಕ ಗುರಿ : ಶ್ರೀನಿವಾಸ ಪ್ರಸಾದ್ ಶಪಥ
ಬೆಂಗಳೂರು, ಅ.17- ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸುವುದೇ ನನ್ನ ಏಕೈಕ ಗುರಿ ಎಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿ.ಶ್ರೀನಿವಾಸ ಪ್ರಸಾದ್ ಶಪಥ ಮಾಡಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಖಾಸಗಿ ಹೊಟೇಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 45 ವರ್ಷಗಳ ಕಾಲ ರಾಜ್ಯದಲ್ಲಿ ರಾಜಕೀಯ ಕ್ಷೇತ್ರದಲ್ಲಿದ್ದ ತಮಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮರೆಯಲಾಗದ ನೋವು ನೀಡಿದ್ದಾರೆ. ಈ ನೋವಿಗೆ ಪ್ರತೀಕಾರವಾಗಿ ಮುಂಬರುವ ಚುನಾವಣೆಯಲ್ಲಿ ಅವರನ್ನು ಸೋಲಿಸದೆ ಬಿಡುವುದಿಲ್ಲ ಎಂದು ಘೋಷಿಸಿದರು. [ ಇದನ್ನೂ ಓದಿ : ‘ಕೈ’ಬಿಟ್ಟ ಶ್ರೀನಿವಾಸ್ ಪ್ರಸಾದ್ : ಸ್ಪೀಕರ್’ಗೆ ಕೈಬರಹದ ರಾಜೀನಾಮೆ ಪತ್ರ ಸಲ್ಲಿಕೆ ]
ನಾನು ಸಿದ್ದರಾಮಯ್ಯ ಅವರಿಗಿಂತಲೂ ಅನುಭವಿ ರಾಜಕಾರಣಿ. ಚುನಾವಣೆಯ ಪ್ರತಿತಂತ್ರಗಳು ನನಗೂ ಗೊತ್ತು. ನನ್ನ ನಾಯಕತ್ವದಲ್ಲೇ ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ. ಆದರೆ ಮುಂದಿನ ಚುನಾವಣೆ ಬರಲಿ ಹೇಗೆ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ನಾನು ನೋಡುತ್ತೇನೆ ಎಂದು ಸವಾಲು ಹಾಕಿದರು. ಕಾಂಗ್ರೆಸ್ನ ಎಲ್ಲ ಒಳತಂತ್ರಗಳು ನನಗೂ ಗೊತ್ತಿದೆ. ನನಗೆ ಮರೆಯಲಾಗದ ನೋವು ನೀಡಿದವರಿಗೆ ಪೆಟ್ಟು ನೀಡದೆ ಸುಮ್ಮನೆ ಕೂರಲು ಸಾಧ್ಯವೇ ಎಂದು ಪ್ರಶ್ನಿಸಿದರು. ಕಪಿಮುಷ್ಠಿಯಲ್ಲಿ ಕಾಂಗ್ರೆಸ್: ಕಾಂಗ್ರೆಸ್ ಕರ್ನಾಟಕದಲ್ಲಿ ಇಂದು ಇಷ್ಟು ದುರ್ಬಲವಾಗಲು 6 ಮಂದಿಯ ಕಪಿಮುಷ್ಠಿಯ ಕೈಯಲ್ಲಿ ಸಿಲುಕಿರುವುದೇ ಪ್ರಮುಖ ಕಾರಣ.
ಮುಖ್ಯಮಂತ್ರಿ ಸಿದ್ದರಾಮಯ್ಯ, ದಿಗ್ವಿಜಯ್ಸಿಂಗ್, ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ಕೆ.ಜೆ.ಜಾರ್ಜ್ರಂಥವರ ಕಪಿಮುಷ್ಠಿಗೆ ಸಿಲುಕಿ ಹೈಕಮಾಂಡ್ ಏನು ಮಾಡಲಾಗದ ಸ್ಥಿತಿಯಲ್ಲಿದೆ ಎಂದು ವಾಗ್ದಾಳಿ ನಡೆಸಿದರು. ಪರಿಣಾಮಕಾರಿ ಆಡಳಿತ ಮತ್ತು ಪರಿಣಾಮಕಾರಿ ಮಂತ್ರಿಮಂಡಳ ರಚಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ನನ್ನನ್ನು ಸಚಿವ ಸಂಪುಟದಿಂದ ಏಕÉ ಕೈಬಿಡಲಾಯಿತು ಎಂಬ ಬಗ್ಗೆ ಇದುವರೆಗೂ ಒಂದೇ ಒಂದು ಕಾರಣ ನೀಡಿಲ್ಲ. ಪೇಮೆಂಟ್ ತೆಗೆದುಕೊಂಡು ಪ್ರಮೋದ್ ಮಧ್ವರಾಜ್, ಪ್ರಿಯಾಂಕ್ ಖರ್ಗೆ ಅವರಿಗೆ ಸ್ಥಾನ ನೀಡಿದ್ದಾರೆ. ಇದರಿಂದ ಪರಿಣಾಮಕಾರಿ ಆಡಳಿತ ನಡೆಸಲು ಸಾಧ್ಯವೇ ಎಂದರು. ಸಚಿವ ಎಚ್.ಸಿ.ಮಹದೇವಪ್ಪ ಕಾರ್ಬನ್ ಕಾಪಿ ಇದ್ದ ಹಾಗೆ. ನಾನು ಎಂಎಲ್ಸಿ ಆದರೆ ಸಾಕು ಎಂಬ ಹಪಹಪಿಯಲ್ಲಿದ್ದರು. ಖರ್ಗೆ ತಮ್ಮ ಪುತ್ರನನ್ನು ಮಂತ್ರಿ ಮಾಡಿದರೆ ಸಾಕು ಎಂಬ ದುರಾಲೋಚನೆಯಲ್ಲಿದ್ದರು ಎಂದು ಕಿಡಿಕಾರಿದರು.
ಟೈಟಾನಿಕ್ ಹಡಗಿನಂತಿದ್ದ ಸಿದ್ದರಾಮಯ್ಯನನ್ನು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾವೆಲ್ಲ ಸೇರಿಕೊಂಡು ಮೇಲಕ್ಕೆತ್ತಿದೆವು. ಆದರೆ ನಂಬಿದವರ ಬೆನ್ನಿಗೆ ಚೂರಿ ಹಾಕುವ ಸಂಸ್ಕøತಿಯನ್ನು ಕೆಲವೇ ದಿನಗಳಲ್ಲಿ ತೋರಿದ್ದಾರೆ. ರತ್ನಗಂಬಳಿ ಹಾಕಿ ಸೋನಿಯಾಗಾಂಧಿ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಿಸಿಕೊಂಡಾಗ ನೀವು 2008ರ ವಿಧಾನಸಭೆ ಚುನಾವಣೆಯಲ್ಲಿ 80 ಸ್ಥಾನಗಳಷ್ಟೆ ಗೆಲ್ಲಲು ಸಾಧ್ಯವಾಯಿತು. ಬಳಿಕ ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಇಲ್ಲವೆ, ವಿಧಾನಸಭೆಯ ಪ್ರತಿಪಕ್ಷದ ಸ್ಥಾನ ನೀಡಬೇಕೆಂದು ಪಟ್ಟು ಹಿಡಿದಿದ್ದಿರಿ. ಅವೆರಡೂ ಸಿಗದಿದ್ದಾಗ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಇದ್ದರೂ ವಿದೇಶಕ್ಕೆ ಹೋಗಿ ವಿಶ್ರಾಂತಿ ಪಡೆದಿರಿ.
ಖರ್ಗೆ ಲೋಕಸಭೆ ಪ್ರವೇಶಿಸುತ್ತಿದ್ದಂತೆ ನಿಮಗೆ ವಿರೋಧ ಪಕ್ಷದ ಸ್ಥಾನ ನೀಡುತ್ತೇವೆ ಎಂದ ಬಳಿಕ ಪಕ್ಷಕ್ಕೆ ಬಂದಿರಿ. ಇದು ನಿಮ್ಮ ಬದ್ಧತೆಯೇ ಎಂದು ಕುಟುಕಿದರು. ನಾನು ಸಚಿವನಾಗಿ ಏನು ಕೆಲಸ ಮಾಡಿಲ್ಲದಿದ್ದರೆ ಮೂರು ವರ್ಷ ನನಗೆ ಹೇಗೆ ಸಂಪುಟದಲ್ಲಿ ಉಳಿಸಿಕೊಂಡಿರಿ. ಮಂತ್ರಿ ಪರಿಷತ್ನಲ್ಲಿ ನಿಮಗೆ ಜೀ ಹುಜೂರ್… ಎನ್ನುವವರು ಇರಬೇಕಿತ್ತು. ನಾನು ಅದನ್ನು ಮಾಡಲಿಲ್ಲ ಎಂಬ ಕಾರಣಕ್ಕೆ ಸಂಪುಟದಿಂದ ಕಿತ್ತು ಹಾಕಿದಿರಿ. ಗೌರವಯುತವಾಗಿ ರಾಜಕೀಯ ನಿವೃತ್ತಿ ಬಯಸಿದ್ದ ನನಗೆ ಮರೆಯಲಾರದ ಪೆಟ್ಟು ನೀಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು. ಮುಂದೆ ಏನು ನಿರ್ಧಾರ ಮಾಡಬೇಕೆಂಬ ಬಗ್ಗೆ ನನ್ನ ಬೆಂಬಲಿಗರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.