ಸಿದ್ದರಾಮಯ್ಯ ದುಬಾರಿ ವಾಚ್ ಪ್ರಕರಣಕ್ಕೆ ಇತಿಶ್ರೀ ಹಾಡಲು ಎಸಿಬಿ ತಯಾರಿ

Spread the love

Siddu-Watch

ಬೆಂಗಳೂರು, ಸೆ.7- ಮುಖ್ಯಮಂತ್ರಿ ಸಿದ್ದರಾಮಯ್ಯನವರ ದುಬಾರಿ ವಾಚ್ ಪ್ರಕರಣಕ್ಕೆ ಇತಿಶ್ರೀ ಹಾಡಲು ಮುಂದಾಗಿರುವ ಭ್ರಷ್ಟಾಚಾರ ನಿಗ್ರಹ ದಳ ಬಹುತೇಕ ಅತಿ ಶೀಘ್ರದಲ್ಲೇ ಈ ಪ್ರಕರಣ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಗೆ ಬರುವುದಿಲ್ಲ ಎಂದು ಫರ್ಮಾನು ಹೊರಡಿಸುವ ಸಾಧ್ಯತೆಯಿದೆ.  ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದ ದುಬಾರಿ ಹ್ಯೂಬ್ಲೆಟ್ ವಾಚ್‍ಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಒಂದು, ಎಸಿಬಿಯಲ್ಲಿ ಎರಡು ದೂರು ದಾಖಲಾಗಿದ್ದವು. ನಟರಾಜ್ ಶರ್ಮ, ಟಿ.ಜೆ.ಅಬ್ರಹಾಂ, ರಾಮಮೂರ್ತಿ ಎಂಬುವರು ದೂರು ನೀಡಿದ್ದರು.
ಹಲವಾರು ತಿಂಗಳಿನಿಂದ ಪ್ರಕರಣ ಪ್ರಾಥಮಿಕ ವಿಚಾರಣೆ ಹಂತದಲ್ಲಿದೆ. ಇತ್ತೀಚೆಗೆ ತನಿಖೆ ಪ್ರಗತಿ ಕಂಡಿದ್ದು, ಸಿಎಂಗೆ ವಾಚನ್ನು ಉಡುಗೊರೆ ನೀಡಿರುವ ಅನಿವಾಸಿ ಭಾರತೀಯ ಡಾ.ಗಿರೀಶ್ ಚಂದ್ರ ವರ್ಮ ಅವರು ಆ ವಾಚಿಗೆ ಅಬಕಾರಿ ಸುಂಕ ಪಾವತಿಸಿದ್ದಾರೆ ಎನ್ನಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸಿಬಿಯ ಎಡಿಜಿಪಿ ಗಗನ್‍ದೀಪ್ ಅವರು, ದುಬಾರಿ ವಾಚ್‍ಗೆ ಅಬಕಾರಿ ಸುಂಕ ಪಾವತಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಜಾರಿ ನಿರ್ದೇಶನಾಲಯದಿಂದಲೂ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಒಂದು ವೇಳೆ ತೆರಿಗೆ ಪಾವತಿಯಾಗಿದ್ದರೆ ಉಡುಗೊರೆ ನೀಡಿರುವುದು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ವ್ಯಾಪ್ತಿಗೆ ಒಳಪಡಲಿದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.
ಮುಖ್ಯ ಕಾರ್ಯದರ್ಶಿ ವಿರುದ್ಧವೂ ಪ್ರಾಥಮಿಕ ತನಿಖೆ: ಭೂ ಕಬಳಿಕೆ ಆರೋಪಕ್ಕೆ ಗುರಿಯಾಗಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್ ವಿರುದ್ಧ ಭಾಸ್ಕರನ್ ಎಂಬುವರು ದೂರು ನೀಡಿದ್ದು, ಈ ಪ್ರಕರಣದ ವಿಚಾರಣೆ ಪ್ರಾಥಮಿಕ ಹಂತದಲ್ಲಿದೆ. ಈವರೆಗೂ ಯಾವುದೇ ಎಫ್‍ಐಆರ್ ದಾಖಲಾಗಿಲ್ಲ. ಕಂದಾಯ ಇಲಾಖೆ ದಾಖಲೆ ಪರಿಶೀಲಿಸಲಾಗುತ್ತಿದೆ ಎಂದರು.
ಭ್ರಷ್ಟಾಚಾರ ನಿಗ್ರಹ ದಳವನ್ನು ಸಿಬಿಐ ಮತ್ತು ಸಿಐಡಿ ಮಾದರಿಯಲ್ಲಿ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಯಿಂದ ವಿನಾಯಿತಿ ನೀಡಬೇಕೆಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ನಮ್ಮಲ್ಲಿ ಅತ್ಯಂತ ಸೂಕ್ಷ್ಮ ಪ್ರಮುಖ ದಾಖಲಾತಿಗಳಿರುತ್ತವೆ. ಸಿಬಿಐಗೆ ಕೇಂದ್ರ ಸರ್ಕಾರ, ಸಿಐಡಿಗೆ ರಾಜ್ಯ ಸರ್ಕಾರ ಈಗಾಗಲೇ ಮಾಹಿತಿ ಹಕ್ಕು ಕಾಯ್ದೆಯಡಿ ವಿನಾಯಿತಿ ನೀಡಿದೆ. ಅದೇ ಮಾದರಿಯಲ್ಲಿ ಎಸಿಬಿಗೂ ವಿನಾಯಿತಿ ನೀಡಲು ಪತ್ರ ಬರೆಯಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಐಜಿಪಿ ಎಂ.ಎ.ಸಲೀಂ ಮಾತನಾಡಿ, ಆರ್‍ಟಿಐ ಕಾಯ್ದೆಯ ಸೆಕ್ಷನ್ 24ರ ಅನುಸಾರ ಭ್ರಷ್ಟಾಚಾರದ ತನಿಖೆ ಮತ್ತು ಮಾನವ ಹಕ್ಕುಗಳ ರಕ್ಷಣೆಯ ಸಂಸ್ಥೆಗಳಿಗೆ ವಿನಾಯಿತಿ ನೀಡಲು ಸಾಧ್ಯವಿಲ್ಲ. ಹಾಗಾಗಿ ಎಸಿಬಿಗೂ ವಿನಾಯಿತಿ ನಿರೀಕ್ಷೆ ಇಲ್ಲ ಎಂದು ಹೇಳಿದರು. ಎಸಿಬಿ ಈವರೆಗೂ ಆರು ಪ್ರಕರಣಗಳ ಪ್ರಾಥಮಿಕ ವಿಚಾರಣೆ ಪೂರ್ಣಗೊಳಿಸಿ ಎಫ್‍ಐಆರ್ ದಾಖಲಿಸಲು ಅನುಮತಿ ನೀಡುವಂತೆ ಸೆಕ್ಷನ್-5ರ ಪ್ರಕಾರ ರಾಜ್ಯಕ್ಕೆ ಶಿಫಾರಸು ಮಾಡಲಾಗಿದೆ. ಒಂದು ತಿಂಗಳ ಹಿಂದೆ ಈ ಶಿಫಾರಸು ಮಾಡಲಾಗಿದ್ದು, ಅನುಮತಿ ನಿರೀಕ್ಷಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಯಾವುದೇ ಪ್ರಕರಣದ ಪ್ರಾಥಮಿಕ ತನಿಖೆಗೆ ಮೂರು ತಿಂಗಳ ಕಾಲಾವಕಾಶವಿದೆ. ನಿಗದಿತ ಕಾಲಾವಧಿಯೊಳಗೆ ತನಿಖೆ ಪೂರ್ಣಗೊಳಿಸುವುದಾಗಿ ಹೇಳಿದರು.  ಲೋಕಾಯುಕ್ತ ಎಸ್‍ಪಿ ಅಬ್ದುಲ್ ಅಜೀಂ…. ಅವರ ವಿರುದ್ಧ ಸಲ್ಲಿಕೆಯಾಗಿರುವ ದೂರಿನ ಕುರಿತು ಪ್ರಾಥಮಿಕ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

► Follow us on –  Facebook / Twitter  / Google+

Sri Raghav

Admin