ಸಿದ್ದರಾಮಯ್ಯ, ಪರಮೇಶ್ವರ್ ವಿರುದ್ಧ ವೇಣುಗೋಪಾಲ್ ಬಳಿ ಅಸಮಾಧಾನ ಹೊರಹಾಕಿದ ವಿಶ್ವನಾಥ್

H-Vishwanath

ಬೆಂಗಳೂರು, ಮೇ 9- ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಎಚ್.ವಿಶ್ವನಾಥ್ ಅವರು ಇಂದು ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ.  ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2006ರಲ್ಲಿ ಸಿದ್ದರಾಮಯ್ಯನವರನ್ನು ಹೀರೋ ಎಂದು ಹೇಳಿದ್ದೆ. ಈಗ ಆ ಥ್ರಿಲ್ ಉಳಿದಿಲ್ಲ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡಾಗ ನಾವೆಲ್ಲ ರೋಮಾಂಚನಗೊಂಡಿದ್ದೆವು. ಆದರೆ ಈಗ ಏನಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ತೀವ್ರ ಅಸಮಾಧಾನ ಹೊರಹಾಕಿದರು.ಕಾದು ನೋಡಿ:

ಜೆಡಿಎಸ್ ಸೇರುವ ಬಗ್ಗೆ ನಾನು ಇನ್ನೂ ಯಾವ ನಿರ್ಧಾರವನ್ನೂ ತೆಗೆದುಕೊಂಡಿಲ್ಲ. ಕುಮಾರಸ್ವಾಮಿ ನನ್ನ ಜತೆ ಮಾತನಾಡಿದ್ದಾರೆ. ಈಗ ಕಾಂಗ್ರೆಸ್‍ನಲ್ಲಿದ್ದೇನೆ. ಮುಂದೆ ಎಲ್ಲಿ ಎಂಬುದನ್ನು ಕಾದು ನೋಡಿ ಎಂದು ವಿಶ್ವನಾಥ್ ಹೇಳಿದರು.   ಹತ್ತು-ಹನ್ನೆರಡು ತಿಂಗಳಲ್ಲಿ ಚುನಾವಣೆ ಬರುತ್ತಿದೆ. ಕಳೆದ ಚುನಾವಣೆಯಲ್ಲಿ ಗೆಲುವಿಗಾಗಿ ಸಾಕಷ್ಟು ಕಾರ್ಯಕರ್ತರು ದುಡಿದಿದ್ದಾರೆ. ಅಂತಹವರನ್ನು ಪಕ್ಷದಲ್ಲಿ ಕಡೆಗಣಿಸಲಾಗಿದೆ ಎಂದು ಹೇಳಿದರು.

ಕೈ ಪಾಳಯದಲ್ಲಿ ಮತ್ತೊಂದು ಸೀನಿಯರ್ ವಿಕೆಟ್ ಪತನ ಸಾಧ್ಯತೆ:

ತೀವ್ರ ಬೇಸರ ವ್ಯಕ್ತಪಡಿಸಿರುವ ವಿಶ್ವನಾಥ್, ಕಾಂಗ್ರೆಸ್‍ಗೆ ವಿದಾಯ ಹೇಳಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ರಾಜ್ಯ ಕಾಂಗ್ರೆಸ್ ನೂತನ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಗೆ ಪತ್ರ ಬರೆದಿದ್ದಾರೆ.  ಮೂರು ಪುಟಗಳ ಪತ್ರದಲ್ಲಿ ವಿಶ್ವನಾಥ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನನಗೆ ಕಾಂಗ್ರೆಸ್‍ನಲ್ಲಿ ಘನಘೋರ ಅನ್ಯಾಯ ಮಾಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.  ನಾನು ವಿದ್ಯಾರ್ಥಿಯಾಗಿದ್ದ ದಿನಗಳಿಂದ ಕಾಂಗ್ರೆಸ್‍ನಲ್ಲಿದ್ದೇನೆ. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಬೆಲೆ ಇಲ್ಲದಂತಾಗಿದೆ. ಸಿಎಂ ಸಿದ್ದರಾಮಯ್ಯನವರ ಧೋರಣೆ ಸರಿಯಿಲ್ಲ. ಅವರ ವರ್ತನೆಯಿಂದ ಅನೇಕ ಹಿರಿಯ ಕಾಂಗ್ರೆಸಿಗರು ಪಕ್ಷ ಬಿಟ್ಟಿದ್ದಾರೆ. ಇನ್ನೂ ಅನೇಕ ಮುಖಂಡರು, ಶಾಸಕರು ಪಕ್ಷ ಬಿಡಲಿದ್ದಾರೆ. ನನ್ನನ್ನೂ ಕಡೆಗಣಿಸಿದ್ದಾರೆ, ಅವಮಾನಿಸಿದ್ದಾರೆ. ಈ ಎಲ್ಲ ವಿದ್ಯಮಾನಗಳಿಂದ ಮನನೊಂದಿದ್ದೇನೆ. ಎಲ್ಲ ವಿಚಾರಗಳಿಂದಾಗಿ ನಾನು ಕೂಡ ಕಾಂಗ್ರೆಸ್ ತೊರೆಯಬೇಕು ಎಂದಿದ್ದೇನೆ ಎಂದು ವಿಶ್ವನಾಥ್ ಪತ್ರದಲ್ಲಿ ನಮೂದಿಸಿದ್ದಾರೆ.

ಎಐಸಿಸಿ, ಕೆಪಿಸಿಸಿ ಸದಸ್ಯನಾಗಿದ್ದರೂ ಪಕ್ಷದ ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನವಿಲ್ಲ. ಸಕಾರಣವಿಲ್ಲದೆ ನನ್ನ ಬಾಯಿ ಮುಚ್ಚಿಸುವ ಪ್ರಯತ್ನ ನಡೆಯಿತು. ಸಿದ್ದರಾಮಯ್ಯನವರ ದುರಹಂಕಾರದ ಸ್ವಭಾವದಿಂದ ಹಲವರು ಕಾಂಗ್ರೆಸ್ ತೊರೆದರು. ಮುಖ್ಯಮಂತ್ರಿಗಳ ನಿರ್ಲಕ್ಷ್ಯತನದಿಂದಾಗಿ ನಾನು ಕೂಡ ಕಾಂಗ್ರೆಸ್ ತೊರೆಯಬಹುದು. ನಾನು ಕಣ್ಣು, ಕಿವಿ ಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಪಕ್ಷ ಮತ್ತು ಸರ್ಕಾರದ ಮಧ್ಯೆ ಸಮನ್ವಯತೆ ಇಲ್ಲ. ಸಚಿವರು, ಸಿಎಂ ಜತೆ ಹೊಂದಾಣಿಕೆ ಇಲ್ಲ. ಹಿರಿಯ ಕಾಂಗ್ರೆಸ್ ನಾಯಕರ ಸಲಹೆಗಳನ್ನು ಪ್ರಮುಖ ವಿಚಾರಗಳಲ್ಲಿ ತೆಗೆದುಕೊಂಡಿಲ್ಲ. ಕೇವಲ ಎಂಜಾಯ್ ಮಾಡಲು ಅಧಿಕಾರ ಹಿಡಿದಿದ್ದಾರೆ. ಸರ್ಕಾರದ ಹೆಸರು ಕೆಟ್ಟಿದೆ. ನಾಲ್ಕು ವರ್ಷಗಳಿಂದ ಪಕ್ಷಕ್ಕೆ ಸಾಕಷ್ಟು ಮುಜುಗರವಾಗಿದೆ ಎಂದು ಮುಖ್ಯಮಂತ್ರಿಗಳ ಆಡಳಿತ ವೈಖರಿ ವಿರುದ್ಧ ವಿಶ್ವನಾಥ್ ಬಹಿರಂಗ ಆಕ್ರೋಶ ಹೊರಹಾಕಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin