ಸಿದ್ದರಾಮಯ್ಯ-ಯಡಿಯೂರಪ್ಪಗೆ ಅಳಿವು ಉಳಿವಿನ ಪ್ರಶ್ನೆ, ಈ ಬಾರಿ ಯಾರಿಗೆ ದಕ್ಕಲಿದೆ ಜನಾರ್ಶೀವಾದ…?

Yadiyurappa-vs-Siddaramaiah

-ರವೀಂದ್ರ.ವೈ.ಎಸ್.
ಅವರಿಬ್ಬರು ಜನನಾಯಕರು. ರಾಜ್ಯ ರಾಜಕಾರಣವನ್ನು ನಾಲ್ಕು ದಶಕಗಳ ಕಾಲ ತಮ್ಮ ಅಂಗೈನ ಸ್ಪಷ್ಟ ಗೆರೆಗಳಂತೆ ಅರಿತವರು. ಹಠಕ್ಕೆ ಬಿದ್ದರೆ ಎದುರಾಳಿಗಳನ್ನು ಚಿತ್ ಮಾಡಬಲ್ಲ ತಾಕತ್ತು ಉಳ್ಳವರು. ಇಬ್ಬರಿಗೂ ಸಾಧಿಸಬೇಕೆಂಬ ಛಲವಿದೆ. ಬಹುತೇಕ ಅವರಿಬ್ಬರಿಗೂ ಇದು ಕೊನೆಯ ಚುನಾವಣೆಯಾಗಬಹುದು.  ಇದು ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರ ರಾಜಕೀಯ ಏರಿಳಿತಗಳು.

ಒಬ್ಬರು ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತಂದು ಪುನಃ ತಾವೇ ಅಧಿಕಾರದಲ್ಲಿ ಮುಂದುವರೆಯಬೇಕೆಂಬ ಛಲ. ಮತ್ತೊಬ್ಬರಿಗೆ ಹೇಗಾದರೂ ಮಾಡಿ ಕಾಂಗ್ರೆಸ್ ಕಿತ್ತೊಗೆದು ಪಕ್ಷವನ್ನು ಸ್ವಂತ ಬಲದ ಮೇಲೆ ತರಲು ಕಾಲಿಗೆ ಚಕ್ರ ಕಟ್ಟಿಕೊಡವರಂತೆ ರಾಜ್ಯವನ್ನು ಗರಗರನೆ ಸುತ್ತುತ್ತಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗೆ ಸಾಕಷ್ಟು ರಾಜಕೀಯ ಇತಿಹಾಸವಿದೆ. ದೇವರಾಜ ಅರಸು ಅಂತಹ ಮೇಧಾವಿ ನಾಯಕನನ್ನು ಮೈಸೂರು ನೀಡಿದರೆ, ಸಮಾಜವಾದಿ ಹಿನ್ನೆಲೆಯ ಕಡಿದಾಳ್ ಮಂಜಪ್ಪ , ಎಸ್.ಬಂಗಾರಪ್ಪ , ಜೆ.ಎಚ್.ಪಟೇಲ್ ಅವರಂತಹ ಶ್ರೇಷ್ಠ ಸಂಸದೀಯ ಪಟುಗಳನ್ನು ನೀಡಿದ ಕೀರ್ತಿ ಶಿವಮೊಗ್ಗಕ್ಕೆ ತಲುಪುತ್ತದೆ.

ಈ ಎರಡೂ ಜಿಲ್ಲೆಗಳಿಂದ ಬಂದಿರುವ ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನವರಿಗೆ ಪ್ರಾಯಶಃ ಇದು ಕೊನೆಯ ಚುನಾವಣೆಯಾಗಬಹುದು.
ರಾಜಕೀಯದಲ್ಲಿ ಇನ್ನು ಮುಂದುವರೆಯಬಹುದೆಂಬ ದೂರಾಲೋಚನೆ ಇದ್ದರೂ ವಯಸ್ಸು ಮಾತ್ರ ಕೇಳುತ್ತಿಲ್ಲ. ಇಷ್ಟವಿಲ್ಲದಿದ್ದರೂ ಅನಿವಾರ್ಯವಾಗಿ ಚುನಾವಣಾ ಕಣದಿಂದ ನಿವೃತ್ತಿಯಾಗಬೇಕಾದ ಅನಿವಾರ್ಯತೆ ಎದುರಾಗಿದೆ.  ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಎಷ್ಟೇ ಅಬ್ಬರಿಸಿಕೊಂಡರೂ ಇದು ಇಬ್ಬರ ಪಾಲಿಗೆ ಕೊನೆಯ ಚುನಾವಣೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಪಕ್ಷದೊಳಗೆ ಯಾವುದೇ ಸ್ಥಾನಮಾನ ನೀಡುವುದಿಲ್ಲ ಎಂಬುದು ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಜಾರಿಯಾಗಿದೆ.  ಬಿಜೆಪಿಯ ಭೀಷ್ಮ ಪಿತಾಮಹ ಎನಿಸಿಕೊಂಡ ಲಾಲ್‍ಕೃಷ್ಣ ಅಡ್ವಾಣಿ, ಮುರುಳಿ ಮನೋಹರ್ ಜೋಷಿ, ಯಶವಂತ್ ಸಿನ್ಹಾರಂತಹ ದಿಗ್ಗಜರೇ ಪಕ್ಷದಲ್ಲಿ ನೆಲ ಕಚ್ಚಿದ್ದಾರೆ.

ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಈಗಾಗಲೇ ಘೋಷಣೆ ಮಾಡಿದೆ. ಒಂದು ವೇಳೆ ರಾಜ್ಯದಲ್ಲಿ ಜನತೆ ಕೊನೆಯ ಅವಕಾಶವೆಂಬಂತೆ ಕಮಲ ಪಕ್ಷವನ್ನು ಕೈ ಹಿಡಿದರೆ ನಿಸ್ಸಂದೇಹವಾಗಿ ಮುಖ್ಯಮಂತ್ರಿಯಾಗುತ್ತಾರೆ.  ಒಂದು ವೇಳೆ ಪರಿಸ್ಥಿತಿ ಕೈ ಕೊಟ್ಟರೆ ಬಿಎಸ್‍ವೈ ರಾಜಕೀಯ ಜೀವನ ಬಹುತೇಕ ಅಂತ್ಯಗೊಳ್ಳುತ್ತದೆ. ಇನ್ನು ಸಿದ್ದರಾಮಯ್ಯನವರ ಪರಿಸ್ಥಿತಿಯು ಬಿಎಸ್‍ವೈ ಅವರಿಗಿಂತಲೂ ಭಿನ್ನವಾಗಿಲ್ಲ. ಮೂಲತಃ ಜನತಾ ಪರಿವಾರದಿಂದ ರಾಜಕೀಯ ಜೀವನ ಆರಂಭಿಸಿದ ಅವರು, ಬಳಿಕ ಕಾಂಗ್ರೆಸ್‍ಗೆ ವಲಸೆ ಬಂದು ಮುಖ್ಯಮಂತ್ರಿಯಾಗಿ ಅಧಿಕಾರ ಪೂರೈಸಿದ್ದೇ ಪವಾಡ.

ಒಬ್ಬರು ವೀರಶೈವ ಸಮುದಾಯದ ಪ್ರಶ್ನಾತೀತ ನಾಯಕರಾದರೆ, ಮತ್ತೊಬ್ಬರು ಕುರುಬ ಸಮುದಾಯದ ಅಗ್ರಗಣ್ಯ ನಾಯಕ. ಹಠಕ್ಕೆ ಬಿದ್ದರೆ ರಾಜಕೀಯದಲ್ಲಿ ಏನೂ ಬೇಕಾದರೂ ಮಾಡಿ ತೋರಿಸಬಲ್ಲ ಛಲವನ್ನು ಹೊಂದಿರುವ ಹಠಮಾರಿಗಳು.  ಪಕ್ಷದಲ್ಲಿರುವವರೇ ತನಗೆ ಮೋಸ ಮಾಡಿದರೆಂದು ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿ ಎಂಬ ಪ್ರಾದೇಶಿಕ ಪಕ್ಷ ಕಟ್ಟಿ 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ನೆಲಕಚ್ಚಿಸಿದರು.  ಇನ್ನು ಸಿದ್ದರಾಮಯ್ಯ ಕೂಡ ಪರಿಸ್ಥಿತಿಗೆ ತಕ್ಕಂತೆ ಜೆಡಿಎಸ್‍ಗೆ ಟಾಂಗ್ ಕೊಡುವುದರಲ್ಲಿ ಹಿಂದೆ ಬಿದ್ದಿಲ್ಲ. ಯಾವ ಪಕ್ಷ ತನ್ನನ್ನು ನಿಕೃಷ್ಟವಾಗಿ ಪಕ್ಷದಿಂದ ಹೊರ ಹಾಕಿತ್ತೋ ಅಂದಿನಿಂದಲೇ ಅವರು ತೆನೆ ಹೊತ್ತ ಮಹಿಳೆ ಪಕ್ಷದ ಮೇಲೆ ಒಂದು ಕಣ್ಣಿಟ್ಟಿದ್ದರು.

ಕಳೆದ ವರ್ಷ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‍ನ ಏಳು ಶಾಸಕರನ್ನು ಬಂಡೇಳುವಂತೆ ಮಾಡಿದ್ದರಲ್ಲಿ ಇವರ ರಾಜಕೀಯ ಲೆಕ್ಕಾಚಾರ ಸಾಕಷ್ಟು ಕೆಲಸ ಮಾಡಿತ್ತು. ಏಳು ಮಂದಿ ದಳದ ಶಾಸಕರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತರಾಗಿದ್ದರು.  ಹೀಗೆ ರಾಜಕೀಯದಲ್ಲಿ ತಮ್ಮ ಎದುರಾಳಿಗಳನ್ನು ಈ ಇಬ್ಬರು ಹಂತ ಹಂತವಾಗಿಯೇ ಬಗ್ಗು ಬಡಿದುಕೊಂಡೇ ಬಂದಿದ್ದಾರೆ. ಯಡಿಯೂರಪ್ಪ ತನಗೆ ಎದುರಾಳಿಯಾಗಬಹುದೆಂದು ಭಾವಿಸಿದ್ದ ಎಚ್.ಶಿವಪ್ಪ ಅವರನ್ನು ಪಕ್ಷದಿಂದ ಉಚ್ಛಾಟಿಸುವಲ್ಲಿ ಯಶಸ್ವಿಯಾಗಿದ್ದರು.   ತಮ್ಮ ನಾಯಕತ್ವದ ವಿರುದ್ದ ಆಗಾಗ್ಗೆ ಗುಡುಗುತ್ತಿದ್ದ ಇನ್ನು ಕೇಂದ್ರದ ಮಾಜಿ ಸಚಿವ ಬಸವನಗೌಡ ಪಾಟೀಲ್‍ಯತ್ನಾಳ್ ಅವರನ್ನು ಪಕ್ಷದಿಂದ ಹೊರ ಹಾಕುವಲ್ಲಿ ಯಶಸ್ವಿಯಾಗಿದ್ದರು.
ಇದೇ ರೀತಿ ಸಿದ್ದರಾಮಯ್ಯ ಕೂಡ 2013ರ ಚುನಾವಣೆಯಲ್ಲಿ ತಮಗೆ ಎದುರಾಗಬಹುದಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಸದ್ದಿಲ್ಲದೆ ಮೂಲೆಗುಂಪು ಮಾಡಿದರು.

ನಂತರ ಉಂಟಾದ ಎಲ್ಲ ರಾಜಕೀಯ ಏರಿಳಿತಗಳನ್ನು ತಮ್ಮ ಚಾಣಾಕ್ಷತನದಿಂದಲೇ ನಿವಾರಿಸಿದರು. ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್ ಸೇರಿದಂತೆ ಯಾರ್ಯಾರನ್ನು ಎಲ್ಲೆಲ್ಲಿ , ಹೇಗೇಗೆ ಸರಿಪಡಿಸಬೇಕೊ ಅಲ್ಲಿಯೇ ಸರಿ ಮಾಡಿಕೊಂಡರು.  ಈ ಇಬ್ಬರು ನಾಯಕರು ಇದೀಗ ಕೊನೆಯ ಚುನಾವಣೆ ಎದುರಿಸಲು ಸನ್ನದ್ಧರಾಗಿದ್ದಾರೆ. ಯಡಿಯೂರಪ್ಪ ಈಗಾಗಲೇ ಪರಿವರ್ತನೆ ಯಾತ್ರೆ ಮೂಲಕ ರಾಜ್ಯಾದ್ಯಂತ ಪ್ರವಾಸ ಮಾಡಿದ್ದಾರೆ. ಇನ್ನು ಜನಾರ್ಶೀವಾದದ ಮೂಲಕ ಸಿದ್ದರಾಮಯ್ಯ ಕೂಡ ರಾಜ್ಯ ಸುತ್ತುತ್ತಿದ್ದಾರೆ.   ರಾಜ್ಯದ 224 ವಿಧಾನಸಭಾ ಕ್ಷೇತ್ರಗಳನ್ನು ತಮ್ಮ ಅಂಗೈನಷ್ಟೇ ತಿಳಿದುಕೊಂಡ ಕೆಲವೇ ನಾಯಕರಲ್ಲಿ ಈ ಇಬ್ಬರು ಸೇರುತ್ತಾರೆ. ಇಬ್ಬರಿಗೂ ಜಾತಿ ಬೆಂಬಲ ಬೆನ್ನಿಗೆ ನಿಂತಿದೆ. ತಮ್ಮ ಜೀವನದ ಕೊನೆಯ ಚುನಾವಣೆ ಎದುರಿಸಲು ಸಜ್ಜಾಗಿರುವ ಇಬ್ಬರಿಗೂ ಮತದಾರ ಒಲಿಯುತ್ತಾನೆಯೇ ಎಂಬುದೇ ಸದ್ಯಕ್ಕಿರುವ ಪ್ರಶ್ನೆ.

Sri Raghav

Admin